ಟೊಯೋಟಾ ಕಾರ್ಮಿಕರು ನಡೆಸುತ್ತಿರುವ ಹೋರಾಟ ನ್ಯಾಯಬದ್ಧ: ಎಸ್.ಆರ್.ಹಿರೇಮಠ್

Update: 2020-12-31 16:28 GMT

ಬೆಂಗಳೂರು, ಡಿ.31: ಟೊಯೋಟಾ ಕಿರ್ಲೋಸ್ಕರ್ ಮೋಟಾರ್ಸ್ ಕಾರ್ಮಿಕರು ತಮ್ಮ ಹಕ್ಕುಗಳಿಗಾಗಿ ನಡೆಸುತ್ತಿರುವ ಹೋರಾಟ ನ್ಯಾಯಬದ್ಧವಾಗಿದೆ ಎಂದು ಸಾಮಾಜಿಕ ಹೋರಾಟಗಾರ ಎಸ್.ಆರ್. ಹಿರೇಮಠ್ ಅಭಿಪ್ರಾಯಿಸಿದ್ದಾರೆ.

ಗುರುವಾರ ಟೊಯೋಟಾ ಕಿರ್ಲೋಸ್ಕರ್ ಕಂಪೆನಿಯ ಆಡಳಿತ ಮಂಡಳಿಯ ಅವೈಜ್ಞಾನಿಕ ಹಾಗೂ ಅಮಾನವೀಯ ನಡುವಳಿಕೆಯ ವಿರುದ್ಧ ಕಾರ್ಮಿಕರು ನಡೆಸುತ್ತಿರುವ 53ನೆ ದಿನದ ಹೋರಾಟವನ್ನು ಬೆಂಬಲಿಸಿ ಮಾತನಾಡಿದ ಅವರು, ಕಾರ್ಮಿಕ ಸಂಘದ ನೇತೃತ್ವದಲ್ಲಿ ನಡೆಯುತ್ತಿರುವ ಹೋರಾಟವು ಎಲ್ಲಾ ರೀತಿಯಲ್ಲಿಯೂ ನ್ಯಾಯಯುತವಾಗಿದ್ದು, ಕಾರ್ಮಿಕರ ಸುದೀರ್ಘ ಅಹಿಂಸಾತ್ಮಕ ಹೋರಾಟ ಪ್ರಶಂಸನೀಯವೆಂದು ತಿಳಿಸಿದ್ದಾರೆ.

ಟೊಯೋಟಾ ಕಿರ್ಲೋಸ್ಕರ್ ಆಡಳಿತ ಮಂಡಳಿ ಕಾರ್ಮಿಕ ಸಂಘದ ಮುಖಂಡರುಗಳ ಜೊತೆಗೆ ಮಾತನಾಡಿ ಕಾರ್ಮಿಕರ ಎಲ್ಲಾ ಸಮಸ್ಯೆಗಳನ್ನು ನ್ಯಾಯಯುತವಾಗಿ ಇಬ್ಬರೂ ಒಪ್ಪುವ ರೀತಿಯಲ್ಲಿ ಬಗೆಹರಿಸಿ ಕೊಳ್ಳಬೇಕು. ಎಲ್ಲಾ ಕಡೆಯಲ್ಲೂ ಹಕ್ಕಿಗಾಗಿ ಹೋರಾಟ ನಡೆಯುತ್ತಿರುವ ಈ ಸಮಯದಲ್ಲಿ ನಿಮ್ಮ ಹೋರಾಟವು ಅದರ ಅವಿಭಾಜ್ಯ ಅಂಗವಾಗಿದೆ ಎಂದು ಅವರು ಹೇಳಿದ್ದಾರೆ.

ಟೊಯೋಟಾ ಕಿರ್ಲೋಸ್ಕರ್ ಕಾರ್ಮಿಕರು ರೈತ-ಕಾರ್ಮಿಕ-ದಲಿತರ ಐಕ್ಯ ಹೋರಾಟದ ಮೂಲಕ ನಮ್ಮ ಒಗ್ಗಟ್ಟನ್ನು ತೋರಿಸಿದ್ದೇವೆ.  ಮುಂದೆಯೂ ಇದೇ ರೀತಿ ಅಹಿಂಸಾತ್ಮಕ ಹೋರಾಟದ ಮೂಲಕ ಯಶಸ್ವಿ ಆಗೋಣ. ನಿಮ್ಮೊಂದಿಗೆ ನಾವು ಯಾವಾಗಲೂ ಇರುತ್ತೇವೆಂದು ಅವರು ತಿಳಿಸಿದ್ದಾರೆ. ಕರ್ನಾಟಕ ರಾಷ್ಟ್ರ ಸಮಿತಿಯ ಮಲ್ಲಿಕಾರ್ಜುನ ಭಟ್ಟರಹಳ್ಳಿ, ಆರ್‍ಟಿಐ ಕಾರ್ಯಕರ್ತರಾದ ಕಂಚನಹಳ್ಳಿ ರವಿಕುಮಾರ್ ಮತ್ತಿತರರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News