'ಪ. ಬಂಗಾಳದ 75 ಲಕ್ಷ ಯುವಜನತೆಗೆ ಉದ್ಯೋಗ ಭರವಸೆ ಕಾರ್ಡ್': ಎರಡೇ ವಾರಗಳಲ್ಲಿ ಆಶ್ವಾಸನೆಯಿಂದ ಹಿಂದೆ ಸರಿದ ಬಿಜೆಪಿ

Update: 2021-01-01 09:17 GMT
Photo: thewire.in

ಕೊಲ್ಕತ್ತಾ: ಪಕ್ಷ 2021ರ ವಿಧಾನಸಭಾ ಚುನಾವಣೆಯಲ್ಲಿ ಗೆದ್ದರೆ ಪಶ್ಚಿಮ ಬಂಗಾಳದ 75 ಲಕ್ಷ ಯುವಜನತೆಗೆ ಉದ್ಯೋಗ  ಭರವಸೆ ಕಾರ್ಡುಗಳನ್ನು ನೀಡುವುದಾಗಿ ಹೇಳಿಕೊಂಡು ಪ್ರಚಾರ ಆರಂಭಿಸಿದ್ದ ಬಿಜೆಪಿ ಇದೀಗ ಈ  ಆಶ್ವಾಸನೆಯನ್ನು ವಾಪಸ್ ಪಡೆದುಕೊಂಡಿದೆ. ಪಕ್ಷ ಈ ಭರವಸೆಯನ್ನು ಡಿಸೆಂಬರ್ 13ರಂದು ನೀಡಿತ್ತು ಎಂದು thewire.in ವರದಿ ಮಾಡಿದೆ.

ಈ ಕುರಿತು ಪ್ರತಿಕ್ರಿಯಿಸಿದ ರಾಜ್ಯ ಬಿಜೆಪಿ ಅಧ್ಯಕ್ಷ ಹಾಗೂ ಸಂಸದ ದಿಲೀಪ್ ಘೋಷ್, "ಇಲ್ಲಿ ಉದ್ಯೋಗ ಪದದ ಕುರಿತು ಗೊಂದಲವಿದೆ. ಈ ಕಾರ್ಡ್ ಹೊಂದಿದ್ದರೆ ಉದ್ಯೋಗ ಲಭಿಸುವುದು ಎಂದು  ಹಲವು ಜನರು ಅಂದುಕೊಂಡಿದ್ದಾರೆ. ನಾವು ವಾಸ್ತವವಾಗಿ ನಿರುದ್ಯೋಗ ಪ್ರಮಾಣವನ್ನು ಅಂದಾಜಿಸಲು ಸಮೀಕ್ಷೆ ನಡೆಸಿ ನಂತರ ಉದ್ಯೋಗ ಸೃಷ್ಟಿಗಾಗಿ ನೀತಿ ರೂಪಿಸುವ ಉದ್ದೇಶ ಹೊಂದಿದ್ದೆವು,'' ಎಂದು ಹೇಳಿದ್ದಾರೆ.

ಡಿಸೆಂಬರ್ 13ರಂದು ಬಿಜೆಪಿ ನೀಡಿದ್ದ ಹೇಳಿಕೆ ಪ್ರಕಾರ ರಾಜ್ಯದ ಎಲ್ಲಾ 294 ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಯುವಜನತೆಗೆ ಉದ್ಯೋಗ ಭರವಸೆ ಕಾರ್ಡುಗಳನ್ನು ನೀಡಲಾಗುವುದು ಹಾಗೂ  ಬಿಜೆಪಿ ಅಧಿಕಾರಕ್ಕೆ ಬಂದಿದ್ದೇ ಆದಲ್ಲಿ ಮುಂದಿನ ಐದು ವರ್ಷ ಅವಧಿಯಲ್ಲಿ ಕಾರ್ಡುದಾರರ ಶೈಕ್ಷಣಿಕ ಅರ್ಹತೆಯ ಆಧಾರದಲ್ಲಿ ಅವರಿಗೆ ಉದ್ಯೋಗ ದೊರಕಿಸಿ ಕೊಡಲಾಗುವುದು ಎಂದು ಹೇಳಿತ್ತು.

ಈ ಆಶ್ವಾಸನೆ ನೀಡುವ ಸಲುವಾಗಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷ ಮುಕುಲ್ ರಾಯ್ ಕೂಡ ಉಪಸ್ಥಿತರಿದ್ದರು.

"ಬಿಜೆಪಿಯ ರಾಜಕೀಯ ಗಿಮಿಕ್‍ಗಳನ್ನು ಪಕ್ಷದ ಈ ಯು-ಟರ್ನ್ ಸಾಬೀತು ಪಡಿಸಿದೆ. ಅವರ ಯುವ ಘಟಕದ ಅಧ್ಯಕ್ಷ ಈ ನಿರುಪಯೋಗಿ ಯೋಜನೆ ಸೂಚಿಸಿದ್ದರು. ಹಲವು ನಾಯಕರು ವಿರೋಧಿಸಿದ್ದರಿಂದ ಅವರು ಈಗ ಈ ಆಶ್ವಾಸನೆಯಿಂದ ಹಿಂದೆ ಸರಿದಿದ್ದಾರೆ,'' ಎಂದು ಟಿಎಂಸಿ ಸಂಸದ ಸೌಗತ ರಾಯ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News