ಜಿಎಸ್‌ಟಿ ದಾಖಲೆ: ಡಿಸೆಂಬರ್‌ನಲ್ಲಿ 1.15 ಲಕ್ಷ ಕೋಟಿ ರೂ. ಸಂಗ್ರಹ

Update: 2021-01-01 15:00 GMT

ಹೊಸದಿಲ್ಲಿ,ಜ.1: 2020ರ ಡಿಸೆಂಬರ್‌ನಲ್ಲಿ ಸರಕು ಹಾಗೂ ಸೇವಾ ತೆರಿಗೆ (ಜಿಎಸ್‌ಟಿ) ಸಂಗ್ರಹವು ದಾಖಲೆಯ 1.15 ಲಕ್ಷ ಕೋಟಿ ರೂ.ಗೆ ತಲುಪಿದ್ದು, ಲಾಕ್‌ಡೌನ್ ಹೇರಿಕೆ ಕೊನೆಗೊಂಡ ಬಳಿಕ ದೇಶದ ಆರ್ಥಿಕತೆಯು ಚೇತರಿಸಿಕೊಳ್ಳುತ್ತಿರುವುದರ ಸೂಚನೆಯನ್ನು ನೀಡಿದೆಯೆಂದು ವಿತ್ತ ಸಚಿವಾಲಯ ಶುಕ್ರವಾರ ತಿಳಿಸಿದೆ.

  ಕೊರೊನೋತ್ತರ ದಿನಗಳಲ್ಲಿ ಭಾರತದ ಆರ್ಥಿಕತೆ ಕ್ಷಿಪ್ರವಾಗಿ ಚೇತರಿಸಿಕೊಂಡಿರುವುದು ಹಾಗೂ ಜಿಎಸ್‌ಟಿ ವಂಚಕರು ಹಾಗೂ ನಕಲಿ ಬಿಲ್‌ಗಳ ವಿರುದ್ಧ ಕೈಗೊಳ್ಳಲಾದ ಅಭಿಯಾನದಿಂದಾಗಿ ಪ್ರಸಕ್ತ ಹಣಕಾಸು ವರ್ಷದಲ್ಲಿ ಸತತ ಮೂರನೇ ತಿಂಗಳು ಕೂಡಾ ಜಿಎಸ್‌ಟಿ ಸಂಗ್ರಹವು 1 ಲಕ್ಷ ಕೋಟಿ ರೂ.ಗಡಿಯನ್ನು ದಾಟಲು ಸಾಧ್ಯವಾಗಿದೆಯೆಂದು ವಿತ್ತ ಸಚಿವಾಲಯವು ಹೇಳಿಕೆಯೊಂದರಲ್ಲಿ ತಿಳಿಸಿದೆ.

   2020ರ ಡಿಸೆಂಬರ್‌ನಲ್ಲಿ 1,15,174 ಕೋಟಿ ರೂ. ಒಟ್ಟು ಜಿಎಸ್‌ಟಿ ಸಂಗ್ರಹವಾಗಿದ್ದು, ಇದು 2019ರ ಡಿಸೆಂಬರ್‌ನಲ್ಲಿ ಸಂಗ್ರಹವಾದ ಜಿಎಸ್‌ಟಿ ವರಮಾನಕ್ಕಿಂತ 1.03 ಲಕ್ಷ ಕೋಟಿ ರೂ. ಅಧಿಕವೆಂದು ವಿತ್ತ ಸಚಿವಾಲಯ ತಿಳಿಸಿದೆ.

 2020ರ ನವೆಂಬರ್‌ನಿಂದ ಡಿಸೆಂಬರ್ 31ರವರೆಗೆ 87 ಲಕ್ಷ ‘ಜಿಎಸ್‌ಟಿಆರ್-3ಬಿ’ ರಿಟರ್ನ್ಸ್‌ಗಳನ್ನು ಸಲ್ಲಿಸಲಾಗಿದೆ. ಡಿಸೆಂಬರ್‌ನಲ್ಲಿ ಆಗಿರುವ ಜಿಎಸ್‌ಟಿ ಸಂಗ್ರಹವು ಕಳೆದ 21 ತಿಂಗಳುಗಳಲ್ಲೇ ಅತ್ಯಧಿಕವಾದ ಮಾಸಿಕ ಆದಾಯವಾಗಿದೆ. 2017ರ ಜುಲೈನಲ್ಲಿ ಜಾರಿಗೆ ಬಂದ ಆನಂತರ ಡಿಸೆಂಬರ್‌ನಲ್ಲಿ ಅತ್ಯಧಿಕ ಮೊತ್ತದ ಜಿಎಸ್‌ಟಿ ಸಂಗ್ರಹವಾಗಿದೆ.ಅದಕ್ಕೂ ಮುನ್ನ 2019ರ ಎಪ್ರಿಲ್ಲಿ 1,13,866 ಕೋಟಿ ರೂ. ಜಿಎಸ್‌ಟಿ ಸಂಗ್ರಹವಾಗಿದ್ದುದು ಅತ್ಯಂತ ಗರಿಷ್ಠವೆನಿಸಿತ್ತು.

ಕಳೆದ ಡಿಸೆಂಬರ್‌ನಲ್ಲಿ ಸರಕುಗಳ ಆಮದಿನಿಂದಾಗಿ ಶೇ.27ರಷ್ಟು ಅಧಿಕ ಆದಾಯ ಲಭ್ಯವಾಗಿತ್ತು ಹಾಗೂ ಅಂತರದೇಶಿಯ ವಹಿವಾಟುಗಳಿಂದ (ಸೇವೆಗಳ ಆಮದು) ಸಂಗ್ರಹವಾದ ಆದಾಯವು 2019ರ ಡಿಸೆಂಬರ್‌ಗಿಂತ ಶೇ.5ರಷ್ಟು ಅಧಿಕವಾಗಿತ್ತು.

ಕೇಂದ್ರ ಜಿಎಸ್‌ಟಿ ಸಂಗ್ರಹ 21,365 ಕೋಟಿ ರೂ., ರಾಜ್ಯ ಜಿಎಸ್‌ಟಿ 27,804 ಕೋಟಿ ರೂ., ಸಮಗ್ರ ಜಿಎಸ್‌ಟಿ 57,426 ಕೋಟಿ ರೂ. ಹಾಗೂ 8,579 ಕೋಟಿ ರೂ. ಸೆಸ್ ಸಂಗ್ರಹವಾಗಿತ್ತೆಂದು ವಿತ್ತ ಸಚಿವಾಲಯ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News