ಅಡುಗೆ ಸಹಾಯಕರ 3 ತಿಂಗಳ ಸಂಭಾವನೆ ಬಿಡುಗಡೆ: ಸಚಿವ ಸುರೇಶ್ ಕುಮಾರ್
Update: 2021-01-02 15:20 IST
ಬೆಂಗಳೂರು, ಜ.2: ರಾಜ್ಯದ ಶಾಲೆಗಳ ಮಧ್ಯಾಹ್ನ ಉಪಹಾರ ಯೋಜನೆ ಮತ್ತು ಕ್ಷೀರಭಾಗ್ಯ ಯೋಜನೆಯಡಿ ಕಾರ್ಯನಿರ್ವಹಿಸುತ್ತಿರುವ ಅಡುಗೆ ಸಹಾಯಕರ 2020ರ ಸೆಪ್ಟಂಬರ್ ನಿಂದ ಡಿಸೆಂಬರ್ ವರೆಗಿನ ಮೂರು ತಿಂಗಳ ಗೌರವ ಸಂಭಾವನೆ ಪಾವತಿಗೆ 9,345.76 ಲಕ್ಷ ರೂ.ಗಳನ್ನು ಬಿಡುಗಡೆ ಮಾಡಲಾಗಿದೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ತಿಳಿಸಿದ್ದಾರೆ.
ಜ.1ರಂದೇ ಈ ಬಗ್ಗೆ ಆದೇಶ ಹೊರಡಿಸಲಾಗಿದ್ದು, ಈ ಮೂರು ತಿಂಗಳ ವೇತನವನ್ನು ಕೂಡಲೇ ಅಡುಗೆ ಸಹಾಯಕರಿಗೆ ನೀಡಲಾಗುವುದು ಹಾಗೂ 2021ರ ಜನವರಿಯಿಂದ ಮಾರ್ಚ್ ವರೆಗಿನ ತ್ರೈಮಾಸಿಕದ ಗೌರವ ಸಂಭಾವನೆಯನ್ನು ಶೀಘ್ರವೇ ಬಿಡುಗಡೆ ಮಾಡಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಸಚಿವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.