ಸಿಸಿಬಿ ಪೊಲೀಸರ ಕಾರ್ಯಾಚರಣೆ: 2.25 ಕೋಟಿ ರೂ. ಮೌಲ್ಯದ ಚಿನ್ನಾಭರಣ ಜಪ್ತಿ, ಇಬ್ಬರ ಬಂಧನ

Update: 2021-01-02 13:00 GMT

ಬೆಂಗಳೂರು, ಜ.2: ಸರಣಿ ಕನ್ನಗಳವು ಪ್ರಕರಣಗಳನ್ನು ಭೇದಿಸಿರುವ ಸಿಸಿಬಿ ಪೊಲೀಸರು, ಆರೋಪಿಗಳಿಂದ 2.25 ಕೋಟಿ ರೂ ಮೌಲ್ಯದ 4 ಕೆ.ಜಿ. ಚಿನ್ನಾಭರಣ ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ಶನಿವಾರ ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ನಗರ ಪೊಲೀಸ್ ಆಯುಕ್ತ ಕಮಲ್ ಪಂತ್, ಬಂಧಿತ ಆರೋಪಿಗಳನ್ನು ಉತ್ತರ ಪ್ರದೇಶದ ಫಯೂಮ್, ಸಲೀಂ ಎಂದು ಗುರುತಿಸಲಾಗಿದೆ ಎಂದರು.

ಆರೋಪಿಗಳ ಬಂಧನದಿಂದ 35 ಕ್ಕೂ ಕನ್ನಗಳವು ಪ್ರಕರಣಗಳು ಪತ್ತೆಯಾಗಿದ್ದು, ಆರೋಪಿಗಳು ಉತ್ತರ ಪ್ರದೇಶ, ಹೊಸದಿಲ್ಲಿ, ಹರಿಯಾಣ ರಾಜ್ಯಗಳಿಂದ ಕಾರಿನಲ್ಲಿ ಬೆಂಗಳೂರಿಗೆ ಬಂದು ಬೀಗ ಹಾಕಿದ ಮನೆಗಳನ್ನು ಗುರಿಯಾಗಿಸಿಕೊಂಡು ಕಳವು ಮಾಡುತ್ತಿದ್ದರು ಎನ್ನುವ ಮಾಹಿತಿ ವಿಚಾರಣೆಯಲ್ಲಿ ಬೆಳಕಿಗೆ ಬಂದಿದೆ. ನಗರದ ಹಲವು ವರ್ಷಗಳಿಂದ ಪತ್ತೆಯಾಗದ ಕನ್ನಗಳವು ಪ್ರಕರಣಗಳು ಆರೋಪಿಗಳ ಬಂಧನದಿಂದ ಬೆಳಕಿಗೆ ಬಂದಿದ್ದು, ಸದ್ಯ ಆರೋಪಿಗಳಿಂದ 4 ಕೆಜಿ ಚಿನ್ನಾಭರಣವನ್ನು ವಶಪಡಿಸಿಕೊಂಡು ಹೆಚ್ಚಿನ ತನಿಖೆಯನ್ನು ಕೈಗೊಳ್ಳಲಾಗಿದೆ ಎಂದು ಅವರು ಹೇಳಿದರು.

10 ಸಾವಿರ ಬಹುಮಾನ: ಪ್ರಮುಖ ಆರೋಪಿ ಫಯೂಮ್ ವಿರುದ್ಧ ಉತ್ತರ ಪ್ರದೇಶದ ಮುರಾದಾಬಾದ್ ಜಿಲ್ಲೆಯಲ್ಲಿ ದರೋಡೆ, ಕೊಲೆ, ಕೊಲೆಯತ್ನ ಹಾಗೂ ಇತರೆ ಸುಮಾರು 40 ಪ್ರಕರಣಗಳು ದಾಖಲಾಗಿವೆ. ಈತನ ಸುಳಿವು ನೀಡಿದವರಿಗೆ ಉತ್ತರ ಪ್ರದೇಶ ಸರಕಾರ 10 ಸಾವಿರ ರೂ. ನಗದು ಬಹುಮಾನವನ್ನು ಘೋಷಿಸಿದೆ. ಆರೋಪಿ 2016ನೇ ಸಾಲಿನಲ್ಲಿ ಉತ್ತರ ಪ್ರದೇಶದ ನೋಯಿಡಾ ಜೈಲಿನ್ಲಲಿರುವಾಗ ಇತರ ಆರೋಪಿಗಳೊಂದಿಗೆ ಕಳ್ಳತನಕ್ಕೆ ಸಂಚು ರೂಪಿಸಿದ್ದ. 2017ರಲ್ಲಿ ಜಾಮೀನಿನ ಮೇಲೆ ಬಿಡುಗಡೆಯಾದ. ಬಳಿಕ ವೃತ್ತಿಪರ ಕಳ್ಳತನಕ್ಕಾಗಿ ಗುಂಪು ಹುಟ್ಟುಹಾಕಿದ್ದ ಎನ್ನುವ ಮಾಹಿತಿ ವಿಚಾರಣೆಯಲ್ಲಿ ಗೊತ್ತಾಗಿದೆ ಎಂದು ಆಯುಕ್ತರು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್, ಡಿಸಿಪಿ ರವಿಕುಮಾರ್ ಸೇರಿದಂತೆ ಪ್ರಮುಖರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News