ಸಮಸ್ಯೆಗಳಿದ್ದರೆ ನನ್ನ ನೇರ ಭೇಟಿಗೆ ಹಿಂಜರಿಕೆ ಬೇಡ: ನೂತನ ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್

Update: 2021-01-02 15:52 GMT

ಬೆಂಗಳೂರು, ಜ. 2: ಸಚಿವಾಲಯದ ನೌಕರರು ತಮ್ಮ ಕುಂದು-ಕೊರತೆಗಳೇನೆ ಇದ್ದರೂ ನೇರವಾಗಿ ತಮ್ಮನ್ನ ಭೇಟಿ ಮಾಡಿ ಸಮಸ್ಯೆಗಳನ್ನು ಇತ್ಯರ್ಥಪಡಿಸಿಕೊಂಡು ಜನಪರವಾಗಿ ಕೆಲಸ ಮಾಡಬೇಕು ಎಂದು ಸಚಿವಾಲಯದ ನೌಕರರಿಗೆ ರಾಜ್ಯ ಸರಕಾರದ ನೂತನ ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್ ಇಂದಿಲ್ಲಿ ಸಲಹೆ ಮಾಡಿದ್ದಾರೆ.

ಶನಿವಾರ ಸಚಿವಾಲಯದ ನೌಕರರ ಸಂಘ ವಿಧಾನಸೌಧದ ಮೂರನೇ ಮಹಡಿಯಲ್ಲಿನ ಸಮ್ಮೇಳನ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ನಿವೃತ್ತ ಮುಖ್ಯಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್ ಅವರ ಬೀಳ್ಕೊಡುಗೆ ಹಾಗೂ ನೂತನ ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್ ಅವರ ಅಭಿನಂದನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಸಚಿವಾಲಯದ ನೌಕರರು ಯಾವುದೇ ಸಂದರ್ಭದಲ್ಲಿಯೂ ನನ್ನನ್ನು ಭೇಟಿ ಮಾಡಲು ಅಂಜಿಕೆಪಡುವ ಅಗತ್ಯವಿಲ್ಲ ಎಂದರು.

ಎಲ್ಲ ನೌಕರರನ್ನು ನಾನು ಪ್ರತಿತಿಂಗಳು ಭೇಟಿಯಾಗಿ ಅವರ ಸಮಸ್ಯೆಗಳನ್ನು ಆಲಿಸಬೇಕೆಂಬ ಯೋಚನೆ ಇಟ್ಟುಕೊಂಡಿದ್ದೇನೆ. ನೀವು ನನ್ನ ಕುಟುಂಬದ ಸದಸ್ಯರಿದ್ದಂತೆ. ನಿಮ್ಮ ಕಷ್ಟಗಳೇ ನನ್ನ ಕಷ್ಟಗಳು. ಸರಕಾರಕ್ಕೆ ಒಳ್ಳೆಯ ಹೆಸರು ತರುವ ರೀತಿಯಲ್ಲಿ ನಾವೆಲ್ಲರೂ ಸೇರಿ ಒಗ್ಗಟ್ಟಿನಿಂದ ಕೆಲಸ ಮಾಡಬೇಕು ಎಂದು ಅವರು ಇದೇ ವೇಳೆ ಸಲಹೆ ನೀಡಿದರು.

ಸೌಜನ್ಯದಿಂದ ವರ್ತಿಸಿ: ಸಾರ್ವಜನಿಕರು ನಿಮ್ಮನ್ನು ಭೇಟಿಯಾಗಲು ಬಂದಾಗ ಅವರನ್ನು ಸೌಜನ್ಯದಿಂದ ಕಾಣಬೇಕು. ಸುಖಾಸುಮ್ಮನೆ ಇಲ್ಲಿಗೆ ಯಾರೂ ಬರುವುದಿಲ್ಲ. ಕಷ್ಟಗಳಿದ್ದಾಗ ಪರಿಹಾರಕ್ಕಾಗಿ ಬರುತ್ತಾರೆ. ಅಂಥವರನ್ನು ಗೌರವದಿಂದ ಕಂಡು ಅವರ ಕೆಲಸಗಳನ್ನು ಮಾಡಿಕೊಡಿ ಎಂದು ರವಿಕುಮಾರ್ ಸೂಚನೆ ನೀಡಿದರು.

ನಿವೃತ್ತ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್ ಮಾತನಾಡಿ, ಸಚಿವಾಲಯ ನೌಕರರು ಸರಕಾರದ ಆಡಳಿತದ ಶಿಖರ ಭಾಗದಲ್ಲಿ ಕೆಲಸ ಮಾಡುತ್ತಿರುವುದರಿಂದ ಅವರ ಜವಾಬ್ದಾರಿ ಹೆಚ್ಚಿರುತ್ತದೆ. ನಾವು ವಿಳಂಬ ಮಾಡಿದರೆ ಅದು ಜನರಿಗೆ ತೊಂದರೆಯಾದಂತೆ. ನಾವು ಕೆಲಸ ಸರಿಯಾಗಿ ಮಾಡಿದಾಗಲೇ ಜನ ನಮಗೆ ಗೌರವ ಕೊಡುತ್ತಾರೆ ಎಂದು ಹೇಳಿದರು.

ಸರಕಾರದ ಅಪರ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮ, ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಕಾರ್ಯದರ್ಶಿ ಹೇಮಲತಾ, ಸಚಿವಾಲಯ ನೌಕರರ ಸಂಘದ ಅಧ್ಯಕ್ಷ ಗುರುಸ್ವಾಮಿ ಸೇರಿದಂತೆ ಪದಾಧಿಕಾರಿಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News