ಭಾರತೀಯ ವಲಸಿಗನಿಗೆ 19ನೇ ಗಿನಿಸ್ ದಾಖಲೆ ಗೌರವ

Update: 2021-01-03 04:29 GMT

ದುಬೈ : ಭಾರತೀಯ ವಲಸಿಗ ರಾಮಕುಮಾರ್ ಸಾರಂಗಪಾಣಿ 8.2 ಚದರ ಮೀಟರ್ ವಿಸ್ತೀರ್ಣದ 'ಪಾಪ್-ಅಪ್ ಗ್ರೀಟಿಂಗ್ ಕಾರ್ಡ್' ತಯಾರಿಸುವ ಮೂಲಕ 19ನೇ ಬಾರಿಗೆ ಗಿನಿಸ್ ವಿಶ್ವದಾಖಲೆ ಸೇರಿದ್ದಾರೆ.

ದುಬೈನ ರಾಜ, ಯುಎಇ ಉಪಾಧ್ಯಕ್ಷ ಮತ್ತು ಪ್ರಧಾನಿ ಘನತೆವೆತ್ತ ಶೇಖ್ ಮುಹಮ್ಮದ್ ಬಿನ್ ರಶೀದ್ ಅಲ್ ಮಕ್ತುಮ್ ಅವರ 15ನೇ ಪದಾರೋಹಣ ಸಂದರ್ಭಕ್ಕೆ ಈ ವಿಶೇಷ ಗ್ರೀಟಿಂಗ್ ಕಾರ್ಡ್ ತಯಾರಿಸಲಾಗಿತ್ತು.

ದುಬೈ ನಿವಾಸಿಯಾಗಿರುವ ಸಾರಂಗಪಾಣಿ, ಭಾರತ ಹಾಗೂ ಯುಎಇಯಲ್ಲಿ ಗರಿಷ್ಠ ಗಿನಿಸ್ ವಿಶ್ವದಾಖಲೆ ಹೊಂದಿರುವ ಕೀರ್ತಿಗೂ ಭಾಜನರಾಗಿದ್ದಾರೆ. ಈ ವಿಶೇಷ ಗ್ರೀಟಿಂಗ್ ಕಾರ್ಡ್ ಸಾಮಾನ್ಯ ಶುಭಾಶಯ ಪತ್ರಗಳಿಗಿಂತ 100 ಪಟ್ಟು ದೊಡ್ಡದಾಗಿದ್ದು, ದುಬೈ ಮೂಲದ ಕಲಾವಿದ ಅಕ್ತರ್ ಸಾಹೇಬ್ ರಚಿಸಿರುವ ಶೇಖ್ ಮುಹಮ್ಮದ್ ಅವರ ಕಲಾಚಿತ್ರವನ್ನು ಹೊಂದಿದೆ.

ಈ ಶುಭಾಶಯ ಪತ್ರವನ್ನು ಶೇಖ್ ಮುಹಮ್ಮದ್ ಅವರಿಗೆ ಸಮರ್ಪಿಸಲಾಗಿದ್ದು, ಇದನ್ನು ಮಡಚಿದಾಗ ಇದರ ಮೇಲ್ಮೈ ವಿಸ್ತೀರ್ಣ 8.2 ಚದರ ಮೀಟರ್ ಆಗುತ್ತದೆ. ಹಾಂಕಾಂಗ್‌ನಲ್ಲಿ ಈ ಮೊದಲು 6.729 ಚದರ ಮೀಟರ್‌ನ ಶುಭಾಶಯಪತ್ರ ತಯಾರಿಸಿದ್ದುದು ಇದುವರೆಗಿನ ದಾಖಲೆಯಾಗಿತ್ತು.

ಸಾರಂಗಪಾಣಿಯವರ ಶುಭಾಶಯಪತ್ರ 4 ಮೀಟರ್ ಉದ್ದ ಹಾಗೂ 2.05 ಮೀಟರ್ ಅಗಲವಿದೆ. ಕಾರ್ಡ್‌ನ ಹೊರ ರಕ್ಷಾಕವಚ ಎಕ್ಸ್‌ಪೋ 2020ಯ ಬಿಡ್ ಗೆದ್ದಿದೆ ಎಂದು ಗಲ್ಫ್‌ ನ್ಯೂಸ್ ವರದಿ ಮಾಡಿದೆ. "ಕಳೆದ ಆರು ತಿಂಗಳಿಂದ ಇದಕ್ಕಾಗಿ ಕೆಲಸ ಮಾಡುತ್ತಿದ್ದೆ. ದೇಶಕ್ಕೆ ವಿಶೇಷ ಎನಿಸಿದ ದಾಖಲೆ ಮುರಿಯಲು ಅವಕಾಶಕ್ಕಾಗಿ ಕಾಯುತ್ತಿದ್ದೆ. ಶೇಖ್ ಮುಹಮ್ಮದ್ ಅವರ 15ನೇ ಪದಾರೋಹಣ ದಿನಕ್ಕಿಂತ ವಿಶೇಷ ದಿನ ಸಿಗದು. ನಾನು ಇದನ್ನು ಯುಎಇ ರಚನೆಯಾದ 50ನೇ ವರ್ಷಾಚರಣೆಗಾಗಿ ಸಮರ್ಪಿಸುತ್ತಿದ್ದೇನೆ" ಎಂದು ಹೇಳಿದ್ದಾರೆ.

ಯುಎಇ ರಾಷ್ಟ್ರೀಯ ದಿನದ ಸಂಭ್ರಮದ ಅಂಗವಾಗಿ ಈ ಕಾರ್ಡ್ ಜನವರಿ 4ರಿಂದ 18ರವರೆಗೆ ದೋಹಾ ಸೆಂಟರ್‌ನಲ್ಲಿ ಪ್ರದರ್ಶನಗೊಳ್ಳಲಿದೆ. ಅಯಸ್ಕಾಂತಗಳನ್ನು ಬಳಸಿ ಅತಿದೊಡ್ಡ ವಾಕ್ಯ ಮಡಿರುವುದು, ಅಯಸ್ಕಾಂತಗಳನ್ನು ಬಳಸಿ ಅತಿದೊಡ್ಡ ಶಬ್ದ ರಚಿಸಿರುವುದು, ಅತಿದೊಡ್ಡ ಎಲೆಕ್ಟ್ರಾನಿಕ್ ಗ್ರೀಟಿಂಗ್ ಕಾರ್ಡ್, ಅತಿಚಿಕ್ಕ ಪ್ಲೇಯಿಂಗ್ ಕಾರ್ಡ್ ತಯಾರಿಸಿದ್ದು ಸೇರಿದಂತೆ ಹಲವು ದಾಖಲೆಗಳನ್ನು ಅವರು ಹೊಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News