ಅಮೆರಿಕ | ಬ್ರೌನ್ ವಿವಿಯಲ್ಲಿ ಗುಂಡಿನ ದಾಳಿ: ಇಬ್ಬರು ಮೃತ್ಯು; ಎಂಟು ಮಂದಿ ಗಂಭೀರ
ಸಾಂದರ್ಭಿಕ ಚಿತ್ರ | PC : freepik.com
ರೋಡ್ಸ್ ಐಲ್ಯಾಂಡ್, ಅಮೆರಿಕ: ಪ್ರಖ್ಯಾತ ಬ್ರೌನ್ ವಿಶ್ವವಿದ್ಯಾನಿಲಯದ ಆವರಣದಲ್ಲಿ ಶನಿವಾರ ನಡೆದ ಗುಂಡಿನ ದಾಳಿಯಲ್ಲಿ ಇಬ್ಬರು ಮೃತಪಟ್ಟಿದ್ದು, ಕನಿಷ್ಠ ಎಂಟು ಮಂದಿ ತೀವ್ರವಾಗಿ ಗಾಯಗೊಂಡಿದ್ದಾರೆ. ಪೊಲೀಸ್ ಅಧಿಕಾರಿಗಳು ಕ್ಯಾಂಪಸ್ಗೆ ಧಾವಿಸಿದ್ದು, ದಾಳಿಕೋರನ ಬಂಧನಕ್ಕೆ ಬಲೆ ಬೀಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿ ಶಂಕಿತ ವ್ಯಕ್ತಿಯನ್ನು ಬಂಧಿಸಲಾಗಿದೆ ಎಂದು ಆರಂಭದಲ್ಲಿ ಅಧಿಕಾರಿಗಳು ಹೇಳಿಕೆ ನೀಡಿದ್ದರು. ಆದರೆ ಯಾವುದೇ ಬಂಧನ ನಡೆದಿಲ್ಲ ಎಂದು ಆ ಬಳಿಕ ಸ್ಪಷ್ಟನೆ ನೀಡಿದ್ದಾರೆ.
"ಇಂದು ಸಂಜೆ ಸಂಭವಿಸಿದ ಪ್ರಕರಣದಲ್ಲಿ ಇಬ್ಬರು ಮೃತಪಟ್ಟಿದ್ದು, ಇತರ ಎಂಟು ಮಂದಿ ತೀವ್ರವಾಗಿ ಗಾಯಗೊಂಡಿದ್ದಾರೆ ಎಂದು ದೃಢಪಡಿಸುತ್ತಿದ್ದೇನೆ" ಎಂದು ರೋಡ್ಸ್ ಐಲ್ಯಾಂಡ್ ಪ್ರಾವಿಡೆನ್ಸ್ ಮೇಯರ್ ಬ್ರೆಟ್ ಸ್ಮೈಲಿ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.
ಘಟನೆಯ ಬೆನ್ನಲ್ಲೇ ವಿಶ್ವವಿದ್ಯಾನಿಲಯದಲ್ಲಿ ಲಾಕ್ ಡೌನ್ ಘೋಷಿಸಲಾಗಿದ್ದು, ಹಂತಕ ಬರೂಸ್ ಮತ್ತು ಹೋಲಿ ಇಂಜಿನಿಯರಿಂಗ್ ಕಟ್ಟಡದ ಬಳಿ ಇರುವ ಸಾಧ್ಯತೆ ಇದೆ ಎಂದು ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿಗೆ ಮುನ್ನೆಚ್ಚರಿಕೆ ನೀಡಲಾಗಿದೆ. ಘಟನೆಯಲ್ಲಿ ಹಲವು ಮಂದಿ ಗಾಯಗೊಂಡಿರುವುದನ್ನು ಪ್ರಾವಿಡೆನ್ಸ್ ಪೊಲೀಸರು ದೃಢಪಡಿಸಿದ್ದಾರೆ ಎಂದು ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದೆ.
ಸಂಜೆ 4:15ರ ಸುಮಾರಿಗೆ ವಿವಿ ಭದ್ರತಾ ಅಧಿಕಾರಿಗಳು ಪ್ರತಿಯೊಬ್ಬರೂ ಬಾಗಿಲುಗಳನ್ನು ಮುಚ್ಚಿಕೊಂಡು ಇರುವಂತೆ ಹಾಗೂ ಫೋನ್ಗಳನ್ನು ನಿಶ್ಶಬ್ದವಾಗಿ ಇರಿಸಿಕೊಳ್ಳುವಂತೆ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ. ಮುಂದಿನ ಮಾಹಿತಿ ಬರುವವರೆಗೂ ಕೊಠಡಿಗಳಲ್ಲೇ ಅವಿತುಕೊಂಡು ಇರುವಂತೆ ಸಲಹೆ ಮಾಡಿದ್ದಾರೆ.
ಶಂಕಿತ ವ್ಯಕ್ತಿಯನ್ನು ಬಂಧಿಸಲಾಗಿದೆ ಎಂದು ಸಂಜೆ 5 ಗಂಟೆಗೆ ಮಾಹಿತಿ ನೀಡಿದರೂ, ಅದಾದ ಸ್ವಲ್ಪ ಹೊತ್ತಿನಲ್ಲೇ ಯಾವುದೇ ಬಂಧನ ನಡೆದಿಲ್ಲ ಎಂದು ಸ್ಪಷ್ಟನೆ ನೀಡಿದೆ. "ಕೊನೆಯ ಪ್ರಯತ್ನವಾಗಿ ನಿಮ್ಮನ್ನು ರಕ್ಷಿಸಿಕೊಳ್ಳಲು ಕ್ರಮ ಕೈಗೊಳ್ಳಿ" ಎಂದು ಸಂದೇಶ ರವಾನೆಯಾಗಿದೆ.
" ಬ್ರೌನ್ ಯೂನಿವರ್ಸಿಟಿಯಲ್ಲಿ ಶೂಟಿಂಗ್ ಘಟನೆ ಬಗ್ಗೆ ಮಾಹಿತಿ ಲಭ್ಯವಾಗಿದೆ. ಶಂಕಿತನನ್ನು ವಶಕ್ಕೆ ಪಡೆಯಲಾಗಿದೆ. ಸಂತ್ರಸ್ತರನ್ನು ಮತ್ತು ಅವರ ಕುಟುಂಬದವರನ್ನು ದೇವರು ಆಶೀರ್ವದಿಸಲಿ" ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಟ್ರುಥ್ ಸೋಶಿಯಲ್ ಸಂತಾಪ ಸಂದೇಶದಲ್ಲಿ ಹೇಳಿದ್ದಾರೆ.