ವೆನೆಝುವೆಲಾದಲ್ಲಿ ಭೂ ದಾಳಿಗೆ ಅಮೆರಿಕಾ ಸಿದ್ಧತೆ: ಟ್ರಂಪ್ ಸೂಚನೆ
ಡೊನಾಲ್ಡ್ ಟ್ರಂಪ್ | Photo Credit : PTI
ವಾಷಿಂಗ್ಟನ್, ಡಿ.13: ವೆನೆಝವೆಲಾದಲ್ಲಿ ಮಾದಕ ವಸ್ತು ಕಳ್ಳಸಾಗಣೆಯ ವಿರುದ್ಧ ಅಮೆರಿಕಾ ನಡೆಸುತ್ತಿರುವ ಅಭಿಯಾನ ತೀವ್ರಗೊಳಿಸುವುದಾಗಿ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದ್ದು , ಭೂ ದಾಳಿ ಶೀಘ್ರವೇ ಆರಂಭಗೊಳ್ಳುವ ಸೂಚನೆ ನೀಡಿದ್ದಾರೆ.
ಶುಕ್ರವಾರ ಶ್ವೇತಭವನದಲ್ಲಿ ಮಾತನಾಡಿದ ಟ್ರಂಪ್ `ಇಲ್ಲಿಯವರೆಗೆ ಸಮುದ್ರವನ್ನು ಕೇಂದ್ರೀಕರಿಸಿದ ಕಾರ್ಯಾಚರಣೆಗಳು ಈಗ ತೀರಕ್ಕೆ ಚಲಿಸುತ್ತವೆ. ಭೂ ದಾಳಿ ಶೀಘ್ರವೇ ಪ್ರಾರಂಭಗೊಳ್ಳಲಿದೆ' ಎಂದು ಹೇಳಿರುವುದಾಗಿ ವರದಿಯಾಗಿದೆ.
ಸೆಪ್ಟಂಬರ್ ನಿಂದ ದಕ್ಷಿಣ ಆಫ್ರಿಕಾದ ಸಮುದ್ರ ತೀರದ ಬಳಿ ಅಂತಾರಾಷ್ಟ್ರೀಯ ಸಮುದ್ರ ಪ್ರದೇಶದಲ್ಲಿ ಮಾದಕ ವಸ್ತು ಕಳ್ಳಸಾಗಣೆ ದೋಣಿಗಳನ್ನು ಗುರಿಯಾಗಿಸಿ ಅಮೆರಿಕಾ 21 ನೌಕಾ ದಾಳಿಯನ್ನು ನಡೆಸಿದ್ದು 83 ಮಂದಿ ಸಾವನ್ನಪ್ಪಿದ್ದಾರೆ. ಈ ದಾಳಿಗಳು ಸಮುದ್ರದ ಮೂಲಕ ಮಾದಕ ವಸ್ತುಗಳ ಹರಿವನ್ನು ತೀವ್ರವಾಗಿ ಕಡಿಮೆಗೊಳಿಸಿದೆ. ಸಮುದ್ರದ ಮೂಲಕ ಬರುವ ಮಾದಕ ವಸ್ತುಗಳಲ್ಲಿ 96%ದಷ್ಟನ್ನು ನಿವಾರಿಸಿದ್ದೇವೆ. ನಾವೀಗ ಭೂಮಿಯ ಮೇಲೆ ಆರಂಭಿಸುತ್ತೇವೆ ಮತ್ತು ಇದು ಸುಲಭದ ಕಾರ್ಯಾಚರಣೆಯಾಗಲಿದೆ. ದಾಳಿ ಒಂದು ದೇಶಕ್ಕೆ ಮಾತ್ರ ಸೀಮಿತವಾಗಲಿದೆ ಎಂದು ಹೇಳಲು ಸಾಧ್ಯವಿಲ್ಲ. ನಮ್ಮ ದೇಶಕ್ಕೆ ಮಾದಕ ವಸ್ತುಗಳನ್ನು ತರುವ ಜನರು ದಾಳಿಯ ಗುರಿಯಾಗಿರುತ್ತಾರೆ ಎಂದು ಟ್ರಂಪ್ ಹೇಳಿದ್ದಾರೆ.