2020ರಲ್ಲಿ ಅತ್ಯಧಿಕ ದೂರು ಸ್ವೀಕರಿಸಿದ ರಾಷ್ಟ್ರೀಯ ಮಹಿಳಾ ಆಯೋಗ
ಹೊಸದಿಲ್ಲಿ, ಜ. 3: ಮಹಿಳೆಯ ವಿರುದ್ಧ ನಡೆದ ಅಪರಾಧಗಳ ಕುರಿತು ರಾಷ್ಟ್ರೀಯ ಮಹಿಳಾ ಆಯೋಗ 2020ರಲ್ಲಿ 23,722 ದೂರುಗಳನ್ನು ಸ್ವೀಕರಿಸಿದ್ದು, ಇದು ಕಳೆದ 6 ವರ್ಷಗಳಲ್ಲೇ ಅತ್ಯಧಿಕ. ಒಟ್ಟು ದೂರಿನ ಸುಮಾರು ನಾಲ್ಕರಲ್ಲಿ ಒಂದು ಭಾಗ ಕೌಟುಂಬಿಕ ದೌರ್ಜನ್ಯಕ್ಕೆ ಸಂಬಂಧಿಸಿದ್ದು ಎಂದು ರಾಷ್ಟ್ರೀಯ ಮಹಿಳಾ ಆಯೋಗದ ದತ್ತಾಂಶ ತಿಳಿಸಿದೆ.
ರಾಜ್ಯಗಳಲ್ಲಿ ಉತ್ತರಪ್ರದೇಶದಿಂದ ಅತ್ಯಧಿಕ ಸಂಖ್ಯೆಯ 11,872 ದೂರುಗಳನ್ನು ಸ್ವೀಕರಿಸಲಾಗಿದೆ. ಬಳಿಕ ದಿಲ್ಲಿಯಿಂದ 2,635, ಹರ್ಯಾಣದಿಂದ 1,266 ಹಾಗೂ ಮಹಾರಾಷ್ಟ್ರದಿಂದ 1,188 ದೂರುಗಳನ್ನು ಸ್ವೀಕರಿಸಲಾಗಿದೆ ಎಂದು ಅದು ಹೇಳಿದೆ. 23,722ರ ದೂರುಗಳಲ್ಲಿ 7,708 ದೂರುಗಳನ್ನು ಘನತೆಯಿಂದ ಬದುಕುವ ಹಕ್ಕಿನ ಕಲಂ ಅಡಿಯಲ್ಲಿ ಸ್ವೀಕರಿಸಲಾಗಿದೆ. ಘನತೆಯಿಂದ ಬದುಕುವ ಹಕ್ಕು ಕಲಂ ಮಹಿಳೆಯರ ಮೇಲಿನ ಭಾವನಾತ್ಮಕ ಕಿರುಕುಳವನ್ನು ಪರಿಗಣನೆಗೆ ತೆಗೆದುಕೊಳ್ಳುತ್ತದೆ.
ಕೌಟುಂಬಿಕ ದೌರ್ಜನ್ಯಕ್ಕೆ ಸಂಬಂಧಿಸಿದ 5,294 ದೂರುಗಳನ್ನು ಸ್ವೀಕರಿಸಲಾಗಿದೆ ಎಂದು ದತ್ತಾಂಶ ಹೇಳಿದೆ. 2020ರಲ್ಲಿ ಆರ್ಥಿಕ ಅಭದ್ರತೆ, ಹೆಚ್ಚುತ್ತಿರುವ ಒತ್ತಡದ ಪ್ರಮಾಣ, ಆತಂಕ, ಆರ್ಥಿಕ ಚಿಂತೆ ಹಾಗೂ ಕುಟುಂಬ, ಹೆತ್ತವರ ಕಡೆಯಿಂದ ಇಂತಹ ಇತರ ಭಾವನೆಗಳಿಗೆ ಬೆಂಬಲದ ಕೊರತೆ ಹಲವು ಸಂದರ್ಭಗಳಲ್ಲಿ ಕೌಟುಂಬಿಕ ದೌರ್ಜನ್ಯಕ್ಕೆ ಕಾರಣವಾಗಿರಬಹುದು ಎಂದು ರಾಷ್ಟ್ರೀಯ ಮಹಿಳಾ ಆಯೋಗದ ಅಧ್ಯಕ್ಷೆ ರೇಖಾ ಶರ್ಮಾ ಹೇಳಿದ್ದಾರೆ. ಕಳೆದ ಆರು ವರ್ಷಗಳಲ್ಲಿ 2020ರಲ್ಲಿ ಇಂತಹ ಅತ್ಯಧಿಕ ಸಂಖ್ಯೆಯ ದೂರುಗಳನ್ನು ಸ್ವೀಕರಿಸಲಾಗಿದೆ. 2014ರಲ್ಲಿ ಒಟ್ಟು 33,906 ದೂರುಗಳನ್ನು ಸ್ವೀಕರಿಸಲಾಗಿತ್ತು ಎಂದು ರಾಷ್ಟ್ರೀಯ ಮಹಿಳಾ ಆಯೋಗದ ದತ್ತಾಂಶ ತಿಳಿಸಿದೆ.
ಕೊರೋನ ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ಮಾರ್ಚ್‌ನಲ್ಲಿ ಲಾಕ್‌ಡೌನ್ ಜಾರಿಗೊಳಿಸಿದ ಬಳಿಕ ರಾಷ್ಟ್ರೀಯ ಮಹಿಳಾ ಆಯೋಗಕ್ಕೆ ಕೌಟುಂಬಿಕ ದೌರ್ಜನ್ಯದ ಆರೋಪದ ಅತ್ಯಧಿಕ ದೂರುಗಳು ಬಂದುವು. ಮಹಿಳೆಯರು ಕಿರುಕುಳ ನೀಡುವವರ ಜೊತೆಗೆ ಮನೆಯಲ್ಲೇ ಇರುವ ಒತ್ತಡಕ್ಕೆ ಒಳಗಾಗಿರುವುದು ಇದಕ್ಕೆ ಕಾರಣ. ಘನತೆಯಿಂದ ಬದುಕುವ ಹಕ್ಕು ಹಾಗೂ ಕೌಟುಂಬಿಕ ದೌರ್ಜನ್ಯಕ್ಕೆ ಸಂಬಂಧಿಸಿ ದೂರಿನ ಬಳಿಕ ವಿವಾಹಿತ ಮಹಿಳೆಗೆ ಕಿರುಕುಳ ಅಥವಾ ವರದಕ್ಷಿಣೆ ಕಿರುಕುಳಕ್ಕೆ ಸಂಬಂಧಿಸಿ ಮೂರನೇ ಅತ್ಯಧಿಕ ದೂರು ಸ್ವೀಕರಿಸಲಾಗಿದೆ. ಇದಕ್ಕೆ ಸಂಬಂಧಿಸಿ 3,784 ದೂರುಗಳನ್ನು ಸ್ವೀಕರಿಸಲಾಗಿದೆ. ಅನಂತರ ಅತ್ಯಧಿಕ ದೂರು ಸ್ವೀಕರಿಸಿರುವುದು ಕಿರುಕುಳಕ್ಕೆ ಸಂಬಂಧಿಸಿ. ಕಿರುಕುಳಕ್ಕೆ ಸಂಬಂಧಿಸಿ 1,679 ದೂರುಗಳನ್ನು ಸ್ವೀಕರಿಸಲಾಗಿದೆ.
2020ರಲ್ಲಿ ಅತ್ಯಾಚಾರ ಹಾಗೂ ಅತ್ಯಾಚಾರಕ್ಕೆ ಯತ್ನಕ್ಕೆ ಸಂಬಂಧಿಸಿದ 1,234 ದೂರುಗಳು ಹಾಗೂ ಲೈಂಗಿಕ ಕಿರುಕುಳಕ್ಕೆ ಸಂಬಂಧಿಸಿದ 376 ದೂರುಗಳನ್ನು ಸ್ವೀಕರಿಸಲಾಗಿದೆ ಎಂದು ರಾಷ್ಟ್ರೀಯ ಮಹಿಳಾ ಆಯೋಗದ ದತ್ತಾಂಶ ತಿಳಿಸಿದೆ.