ನಿಮ್ಮ ಆದಾಯ ತೆರಿಗೆ ಮರುಪಾವತಿಗೆ ಇನ್ನೂ ಕಾಯುತ್ತಿದ್ದೀರಾ? ಅದನ್ನು ಪಡೆಯಲು ಐಟಿಆರ್‌ನ್ನು ಮಾತ್ರ ಸಲ್ಲಿಸಿದರೆ ಸಾಲದು

Update: 2021-01-07 04:48 GMT

ನೀವು ಆದಾಯ ತೆರಿಗೆ ಪಾವತಿದಾರರಾಗಿದ್ದರೆ ನಿಮ್ಮ ಬ್ಯಾಂಕ್ ಖಾತೆಯಲ್ಲಿ ಇಲೆಕ್ಟ್ರಾನಿಕ್ ಸರ್ವಿಸ್ ಕ್ರೆಡಿಟ್ (ಇಸಿಎಸ್) ಮೂಲಕ ತೆರಿಗೆ ರಿಫಂಡ್ ಪಡೆಯಲು ಬ್ಯಾಂಕ್ ಖಾತೆಯನ್ನು ಪ್ರಿವ್ಯಾಲಿಡೇಟ್ ಅಥವಾ ಪೂರ್ವ ಊರ್ಜಿತಗೊಳಿಸುವುದನ್ನು ಕಳೆದ ತೆರಿಗೆ ವರ್ಷದಿಂದ ಕಡ್ಡಾಯಗೊಳಿಸಲಾಗಿದೆ ಎನ್ನುವುದು ನಿಮಗೆ ಗೊತ್ತಿದೆಯೇ? ನಿಮ್ಮ ಕಳೆದ ವರ್ಷದ ಆದಾಯ ತೆರಿಗೆ ರಿಫಂಡ್ ಇನ್ನೂ ಬಂದಿಲ್ಲವೇ? ಹಾಗಿದ್ದರೆ ನೀವು ಮರುಪಾವತಿಯನ್ನು ಪಡೆಯಲು ಆಯ್ಕೆ ಮಾಡಿರುವ ನಿಮ್ಮ ಬ್ಯಾಂಕ್ ಖಾತೆ ಪ್ರಿವ್ಯಾಲಿಡೇಟ್ ಆಗಿದೆಯೇ ಇಲ್ಲವೇ ಎನ್ನುವುದನ್ನು ಮೊದಲು ಪರಿಶೀಲಿಸಿ. ಏಕೆಂದರೆ ನಿಮ್ಮ ಬ್ಯಾಂಕ್ ಖಾತೆಯಲ್ಲಿ ಆದಾಯ ತೆರಿಗೆ ರಿಫಂಡ್ ಪಡೆಯಲು ಆದಾಯ ತೆರಿಗೆ ರಿಟರ್ನ್ (ಐಟಿಆರ್) ಸಲ್ಲಿಸಿದರಷ್ಟೇ ಸಾಲದು,ನೀವು ನಿಮ್ಮ ಬ್ಯಾಂಕ್ ಖಾತೆಯನ್ನೂ ಪ್ರಿವ್ಯಾಲಿಡೇಟ್ ಮಾಡಿಸಬೇಕು.

  ನಿಮಗೆ ಹಾಲಿ ತೆರಿಗೆ ವರ್ಷದಲ್ಲಿ ಆದಾಯ ತೆರಿಗೆ ರಿಫಂಡ್ ಆಗುವುದಿದ್ದರೆ ಐಟಿಆರ್‌ನಲ್ಲಿ ನೀವು ಆಯ್ಕೆ ಮಾಡಿರುವ ಬ್ಯಾಂಕ್ ಖಾತೆ ಪ್ರಿವ್ಯಾಲಿಡೇಟ್ ಆಗಿದೆ ಎನ್ನುವುದನ್ನು ಖಚಿತಪಡಿಸಿಕೊಳ್ಳಿ. ಈಗಾಗಲೇ ನೀವು ಐಟಿಆರ್ ಸಲ್ಲಿಸಿದ್ದರೆ ಮತ್ತು ನಿಮ್ಮ ಬ್ಯಾಂಕ್ ಖಾತೆ ಪ್ರಿವ್ಯಾಲಿಡೇಟ್ ಆಗಿರದಿದ್ದರೆ ಅದಕ್ಕಾಗಿ ನೀವು ಈಗಲೂ (incometaxindiaefiling.gov.in) ಪೋರ್ಟಲ್‌ಗೆ ಭೇಟಿ ನೀಡಬಹುದು.

ಬ್ಯಾಂಕ್ ಖಾತೆಯನ್ನು ಪ್ರಿವ್ಯಾಲಿಡೇಟ್ ಮಾಡುವುದು ಹೇಗೆ?

ಮೊದಲಿಗೆ ನಿಮ್ಮ ಪಾನ್ ಸಂಖ್ಯೆ,ಪಾಸ್‌ವರ್ಡ್ ಮತ್ತು ಕ್ಯಾಪ್ಚಾ ಕೋಡ್ ಅನ್ನು ನಮೂದಿಸುವ ಮೂಲಕ (incometaxindiaefiling.gov.in)      ಪೋರ್ಟಲ್‌ಗೆ ಲಾಗ್‌ಆನ್ ಆಗಿ. ಬಳಿಕ ಪ್ರೊಫೈಲ್ ಸೆಟಿಂಗ್ ಟ್ಯಾಬ್‌ನಡಿ ಬ್ಯಾಂಕ್ ಖಾತೆಯನ್ನು ಪ್ರಿವ್ಯಾಲಿಡೇಟ್ ಮಾಡುವ ಆಪ್ಶನ್‌ನ್ನು ಆಯ್ಕೆ ಮಾಡಿಕೊಳ್ಳಿ. ನಿಮ್ಮ ಬ್ಯಾಂಕ್ ಖಾತೆಯ ಸಂಖ್ಯೆ,ಖಾತೆಯ ವಿಧ,ಬ್ಯಾಂಕಿನ ಐಎಫ್‌ಎಸ್‌ಸಿ ಕೋಡ್ ಹಾಗು ನಿಮ್ಮ ಸಂಪರ್ಕ ವಿವರಗಳಾದ ಮೊಬೈಲ್ ಸಂಖ್ಯೆ ಮತ್ತು ಇಮೇಲ್ ಐಡಿಯನ್ನು ನಿಗದಿತ ಜಾಗದಲ್ಲಿ ತುಂಬಿ ಹಾಗೂ ‘ಪ್ರಿವ್ಯಾಲಿಡೇಟ್’ ಬಟನ್ ಅನ್ನು ಕ್ಲಿಕ್ ಮಾಡಿ.

  ನಿಮ್ಮ ಪಾನ್ ಸಂಖ್ಯೆಯು ನಿಮ್ಮ ಬ್ಯಾಂಕ್ ಡಾಟಾಬೇಸ್‌ನೊಂದಿಗೆ ಜೋಡಣೆಗೊಂಡಿದ್ದರೆ ಮತ್ತು ಪಾನ್ ಕಾರ್ಡ್ ಹಾಗೂ ಬ್ಯಾಂಕ್ ಖಾತೆಯಲ್ಲಿನ ನಿಮ್ಮ ಹೆಸರು ತಾಳೆ ಹೊಂದಿದರೆ;ನಿಮ್ಮ ಮೊಬೈಲ್ ಸಂಖ್ಯೆ,ಇಮೇಲ್ ಐಡಿ ಬ್ಯಾಂಕ್ ಖಾತೆಯೊಂದಿಗೆ ಜೋಡಣೆಯಾಗಿದ್ದರೆ ಮತ್ತು ಇವೆರಡೂ ನಿಮ್ಮ ಇ-ಫೈಲಿಂಗ್ ಖಾತೆಯ ನೊಂದಾಯಿತ ಮೊಬೈಲ್ ಸಂಖ್ಯೆ ಮತ್ತು ಇಮೇಲ್ ಐಡಿಯೊಂದಿಗೆ ತಾಳೆ ಹೊಂದಿದರೆ ನಿಮ್ಮ ಖಾತೆಯು ಪ್ರಿವ್ಯಾಲಿಡೇಟ್ ಆಗುತ್ತದೆ.

ಒಂದು ಅಥವಾ ಅದಕ್ಕಿಂತ ಹೆಚ್ಚಿನ ಬ್ಯಾಂಕ್ ಖಾತೆಗಳು ಈಗಾಗಲೇ ಪ್ರಿವ್ಯಾಲಿಡೇಟ್ ಆಗಿದ್ದಿದ್ದರೆ,ಬ್ಯಾಂಕ್ ಖಾತೆಯನ್ನು ಪ್ರಿವ್ಯಾಲಿಡೇಟ್ ಮಾಡುವ ಆಪ್ಶನ್‌ನಡಿ ಅಂತಹ ಬ್ಯಾಂಕ್ ಖಾತೆಗಳ ಪಟ್ಟಿಯು ತೆರೆದುಕೊಳ್ಳುತ್ತದೆ. ನೀವು ಬೇರೆಯೇ ಆದ ಖಾತೆಯಲ್ಲಿ ಆದಾಯ ತೆರಿಗೆ ರಿಫಂಡ್ ಪಡೆಯಲು ಬಯಸಿದ್ದರೆ ನೀವು ‘ಆ್ಯಡ್’ ಬಟನ್‌ನ್ನು ಕ್ಲಿಕ್ಕಿಸಬೇಕಾಗುತ್ತದೆ ಮತ್ತು ಪ್ರಿವ್ಯಾಲಿಡೇಟ್ ಪ್ರಕ್ರಿಯೆಯನ್ನು ಅನುಸರಿಸಬೇಕಾಗುತ್ತದೆ.

ಇಲೆಕ್ಟ್ರಾನಿಕ್ ವೆರಿಫಿಕೇಷನ್ ಕೋಡ್ (ಇವಿಸಿ) ಮೂಲಕ ನಿಮ್ಮ ಐಟಿಆರ್‌ನ್ನು ಇ-ದೃಢೀಕರಿಸಿಕೊಳ್ಳಲು ನೀವು ಬಯಸಿದ್ದರೂ ಬ್ಯಾಂಕ್ ಖಾತೆಯನ್ನು ಪ್ರಿವ್ಯಾಲಿಡೇಟ್ ಮಾಡುವುದು ಅಗತ್ಯವಾಗುತ್ತದೆ. ಏಕೆಂದರೆ ನೀವು ಇವಿಸಿಯಿಂದ ವೆರಿಫಿಕೇಷನ್ ಕೋಡ್/ಒಟಿಪಿ ಪಡೆಯುವುದನ್ನು ಪ್ರಿವ್ಯಾಲಿಡೇಟ್ ಆಗಿರುವ ಬ್ಯಾಂಕ್ ಖಾತೆಯು ಮಾತ್ರ ಸಾಧ್ಯವಾಗಿಸಬಹುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News