ಮಧುಮೇಹ ಪಾದಗಳ ಸೋಂಕು

Update: 2021-01-04 19:20 GMT

ಮಧುಮೇಹವು ಜೀವನಶೈಲಿಯಿಂದುಂಟಾಗುವ ದೀರ್ಘಕಾಲಿಕ ಕಾಯಿಲೆಯಾಗಿದ್ದು,ಇದಕ್ಕೆ ತುತ್ತಾಗುವವರ ಸಂಖ್ಯೆ ದಿನೇದಿನೇ ಹೆಚ್ಚುತ್ತಿದೆ. ರಕ್ತದಲ್ಲಿ ಗ್ಲುಕೋಸ್ ಮಟ್ಟ ಅಧಿಕವಾದಾಗ ಅದು ಮಧುಮೇಹದ ಅಪಾಯಕ್ಕೆ ಗುರಿ ಮಾಡುತ್ತದೆ. ಈ ಸ್ಥಿತಿಯಲ್ಲಿ ರಕ್ತದಲ್ಲಿಯ ಸಕ್ಕರೆ ಅಂಶವನ್ನು ನಿಯಂತ್ರಿಸಲು ಶರೀರಕ್ಕೆ ಸಾಧ್ಯವಾಗುವುದಿಲ್ಲ. ಪ್ರತಿಯೊಬ್ಬ ವ್ಯಕ್ತಿಯು ತನ್ನ ರೋಗವನ್ನು ನಿಭಾಯಿಸುವ ರೀತಿ ವಿಭಿನ್ನವಾಗಿರುತ್ತದೆ ಮತ್ತು ಇನ್ಸುಲಿನ್‌ಗೆ ಶರೀರದ ಪ್ರತಿವರ್ತನೆಯೂ ವಿಭಿನ್ನವಾಗಿರುತ್ತದೆ. ಮಧುಮೇಹವನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳದಿದ್ದರೆ ಅದು ಗಂಭೀರ ಸಮಸ್ಯೆಗಳನ್ನುಂಟು ಮಾಡುತ್ತದೆ. ಮಧುಮೇಹದಿಂದ ಬಳಲುತ್ತಿರುವವರ ಪೈಕಿ ಹೆಚ್ಚಿನವರಲ್ಲಿ ಪಾದಗಳ ಸೋಂಕು ಕಂಡು ಬರುತ್ತದೆ.

ಪಾದಗಳ ಸೋಂಕುಗಳು ಸೌಮ್ಯ ಸ್ವರೂಪದ್ದಾಗಿರಬಹುದು ಅಥವಾ ತೀವ್ರ ಸ್ವರೂಪದ್ದೂ ಆಗಿರಬಹುದು. ಅತ್ಯಂತ ಸಾಮಾನ್ಯವಾಗಿ ಕಂಡುಬರುವ ಶಿಲೀಂಧ್ರ ಮಧುಮೇಹ ಪಾದ ಸೋಂಕನ್ನು ‘ಅಥ್ಲೆಟ್ಸ್ ಫೂಟ್’ ಎಂದು ಕರೆಯಲಾಗುತ್ತದೆ. ಮಧುಮೇಹ ಪಾದ ಸೋಂಕಿನ ರೋಗನಿರ್ಧಾರ ಮತ್ತು ಚಿಕಿತ್ಸೆ ತುಂಬ ನೋವನ್ನು ಉಂಟು ಮಾಡಬಲ್ಲದು. ಮಧುಮೇಹಿಗಳಲ್ಲಿ ನಿರಂತರವಾಗಿ ರಕ್ತದಲ್ಲಿ ಸಕ್ಕರೆಯು ಅತಿಯಾದ ಮಟ್ಟದಲ್ಲಿದ್ದರೆ ಅದು ಗಂಭೀರ ಸಮಸ್ಯೆಗಳಿಗೆ ನಾಂದಿ ಹಾಡುತ್ತದೆ.

ಮಧುಮೇಹ ಪಾದ ಸೋಂಕುಗಳ ವಿಧಗಳು

ಬ್ಯಾಕ್ಟೀರಿಯಾದಿಂದ ಉಂಟಾಗುವ ಸೋಂಕುಗಳು,ಶಿಲೀಂಧ್ರ ಸೋಂಕುಗಳು ಮತ್ತು ಚರ್ಮದ ಸೋಂಕುಗಳು ಮಧುಮೇಹಿಗಳಲ್ಲಿ ಸಾಮಾನ್ಯವಾಗಿವೆ. ವ್ಯಕ್ತಿಯು ಮಧುಮೇಹದಿಂದ ಪೀಡಿತನಾಗಿದ್ದರೆ ರಕ್ತದಲ್ಲಿ ಗ್ಲುಕೋಸ್‌ನ ಅಧಿಕ ಮಟ್ಟ ಮತ್ತು ಇತರ ಕಾರಣಗಳಿಂದಾಗಿ ನಿರೋಧಕ ಶಕ್ತಿಯು ಕುಂಠಿತಗೊಳ್ಳುವುದರಿಂದ ಪಾದಗಳಲ್ಲಿ ತೀವ್ರ ಸ್ವರೂಪದ ಶಿಲೀಂಧ್ರ ಸೋಂಕು ಕಾಣಿಸಿಕೊಳ್ಳುವುದು ಸಾಮಾನ್ಯವಾಗಿದೆ. ಮಧುಮೇಹದ ಸಂಕೀರ್ಣತೆಯನ್ನು ಅವಲಂಬಿಸಿ ರೋಗಿಯು ಪಾದಗಳಲ್ಲಿ ನರದೌರ್ಬಲ್ಯ,ರಕ್ತನಾಳಗಳಿಗೆ ಹಾನಿ,ಗಾಯ ಶೀಘ್ರ ಗುಣವಾಗದಿರುವುದು ಇತ್ಯಾದಿ ಸಮಸ್ಯೆಗಳನ್ನು ಎದುರಿಸುವಂತಾಗುತ್ತದೆ. ಚರ್ಮದಲ್ಲಿ ಬಿರುಕುಗಳು ಉಂಟಾಗಿ ಸೋಂಕುಗಳನ್ನುಂಟು ಮಾಡುವ ಸೂಕ್ಷ್ಮಾಣುಜೀವಿಗಳು ವೃದ್ಧಿಯಾಗಬಹುದು. ಇದು ಚರ್ಮದಲ್ಲಿಯ ವರ್ಣದ್ರವ್ಯಗಳಲ್ಲಿ ಬದಲಾವಣೆಯನ್ನುಂಟು ಮಾಡುವ ಡರ್ಮೊಪತಿಗೂ ಕಾರಣವಾಗಬಲ್ಲದು. ನೀವು ಉಗುರುಗಳನ್ನು ನಿಯಮಿತವಾಗಿ ಕತ್ತರಿಸದಿದ್ದರೆ ಉಗುರುಗಳ ತಳದಲ್ಲಿಯೂ ಸೋಂಕುಗಳು ಉಂಟಾಗಬಹುದು.

* ಅಥ್ಲೆಟ್ಸ್ ಫೂಟ್: ಇದು ಮಧುಮೇಹಿಗಳಲ್ಲಿ ಅತ್ಯಂತ ಸಾಮಾನ್ಯವಾಗಿರುವ ಪಾದದ ಸೋಂಕು ಆಗಿದೆ. ಇದು ಶಿಲೀಂಧ್ರ ಸೋಂಕು ಆಗಿದ್ದು,ತುರಿಕೆ ಮತ್ತು ಬಿರುಕುಗಳನ್ನು ಉಂಟು ಮಾಡುತ್ತದೆ,ಪಾದವು ಕೆಂಪು ಬಣ್ಣಕ್ಕೆ ತಿರುಗುತ್ತದೆ. ಶಿಲೀಂಧ್ರವು ಬಿರುಕುಗಳ ಮೂಲಕ ಚರ್ಮವನ್ನು ಪ್ರವೇಶಿಸಬಹುದು ಮತ್ತು ತೀವ್ರ ಸ್ವರೂಪದ ಸೋಂಕನ್ನುಂಟು ಮಾಡಬಹುದು. ಅಥ್ಲೆಟ್ಸ್ ಫೂಟ್‌ಗೆ ಚಿಕಿತ್ಸೆ ನೀಡಲು ವೈದ್ಯರು ಔಷಧಿಗಳ ಮೂಲಕ ಶಿಲೀಂಧ್ರವನ್ನು ನಿವಾರಿಸಬೇಕಾಗುತ್ತದೆ.

* ಒತ್ತುಗಂಟು ಅಥವಾ ಆಣಿ

 ಪಾದಗಳಲ್ಲಿ ಒತ್ತುಗಂಟುಗಳು ಅಥವಾ ಆಣಿಗಳು ಹೆಚ್ಚಾಗಿ ಬಿಗಿಯಾದ ಅಥವಾ ಸೂಕ್ತವಲ್ಲದ ಪಾದರಕ್ಷೆಗಳನ್ನು ಬಳಸುವುದರಿಂದ ಉಂಟಾಗುತ್ತವೆ. ಆಣಿಯು ಪಾದದ ಒಂದು ಜಾಗದಲ್ಲಿ ಬಿರುಸಾದ ಚರ್ಮದ ಸಂಗ್ರಹವಾಗಿದ್ದು,ಸಾಮಾನ್ಯವಾಗಿ ಬೆರಳುಗಳ ನಡುವೆ ಉಂಟಾಗುತ್ತದೆ. ಆಣಿಗಳಿಗೆ ಮನೆಮದ್ದು ಮಾಡಕೂಡದು ಅಥವಾ ನಾವೇ ಸ್ವಯಂವೈದ್ಯರಾಗಿ ಅದನ್ನು ಕತ್ತರಿಸಬಾರದು. ವೈದ್ಯರಿಂದಲೇ ಚಿಕಿತ್ಸೆ ಪಡೆಯುವುದು ಅಗತ್ಯವಾಗಿದೆ.

* ಜಡ್ಡು ಅಥವಾ ಗಡ್ಡೆ

ಇದು ಗಟ್ಟಿಯಾದ ಚರ್ಮದ ಸಂಗ್ರಹವಾಗಿದ್ದು,ಪಾದಗಳ ಕೆಳಭಾಗದಲ್ಲಿ ಉಂಟಾಗುತ್ತದೆ. ಆಣಿಗಳಂತೆ ಇದಕ್ಕೂ ಸೂಕ್ತ ಚಿಕಿತ್ಸೆಯು ಅಗತ್ಯವಾಗುತ್ತದೆ. ಯಾವುದೇ ಕಾರಣಕ್ಕೂ ಮನೆಯಲ್ಲಿಯೇ ಈ ಜಡ್ಡನ್ನು ಕತ್ತರಿಸಿ ತೆಗೆಯುವ ಸಾಹಸ ಬೇಡ.

* ಬಿರುಕುಗಳು

ಒಣಚರ್ಮದಲ್ಲಿ ಬಿರುಕುಗಳು ಉಂಟಾಗುವುದು ಸಾಮಾನ್ಯ, ಆದರೆ ಮಧುಮೇಹಿಗಳಲ್ಲಿ ಈ ಬಿರುಕುಗಳು ಗಂಭೀರ ಸ್ಥಿತಿಗೆ ಕಾರಣವಾಗುತ್ತವೆ. ಬಿರುಕುಗಳ ಮೂಲಕ ಸೂಕ್ಷ್ಮಕ್ರಿಮಿಗಳು ಪಾದವನ್ನು ಪ್ರವೇಶಿಸುತ್ತವೆ,ಹೀಗಾಗಿ ಮಧುಮೇಹಿಗಳು ಈ ಬಗ್ಗೆ ಹೆಚ್ಚಿನ ಕಾಳಜಿಯನ್ನು ವಹಿಸಬೇಕಾಗುತ್ತದೆ. ಚರ್ಮವನ್ನು ಆರ್ದ್ರ ಮತ್ತು ಮೃದುವಾಗಿರಿಸಲು ಮಾಯಿಶ್ಚರೈಸರ್ ಬಳಸುವುದು ಸೂಕ್ತ.

* ಹುಣ್ಣುಗಳು

 ಪಾದಗಳ ಹುಣ್ಣುಗಳು ಅಥವಾ ಮಧುಮೇಹ ಹುಣ್ಣುಗಳು ಆಳವಾದ ತೆರೆದ ಹುಣ್ಣುಗಳಾಗಿರಬಹುದು ಅಥವಾ ಚರ್ಮದಲ್ಲಿನ ಬಿರುಕುಗಳಾಗಿರಬಹದು. ಸಣ್ಣ ಗಾಯವಾದರೂ ಶೀಘ್ರವಾಗಿ ಮಾಯದಿದ್ದಾಗ ಅದು ಹುಣ್ಣಿನ ರೂಪವನ್ನು ಪಡೆಯುತ್ತದೆ. ಇಂತಹ ಸ್ಥಿತಿಯಲ್ಲಿ ಪಾದಕ್ಕೆ ಸೂಕ್ತವಾಗಿ ಹೊಂದಿಕೆಯಾಗದ ಪಾದರಕ್ಷೆಗಳನ್ನು ಧರಿಸಿದರೆ ತೀವ್ರ ಸ್ವರೂಪದ ಸೋಂಕು ಉಂಟಾಗುತ್ತದೆ. ಈ ವಿಧದ ಮಧುಮೇಹ ಸೋಂಕು ಅತ್ಯಂತ ಸಾಮಾನ್ಯವಲ್ಲವಾದರೂ ತಕ್ಷಣ ವೈದ್ಯಕೀಯ ನೆರವು ಅಗತ್ಯವಾಗುತ್ತದೆ.

* ಮಾಂಸಖಂಡದಲ್ಲಿ ಉಗುರಿನ ಬೆಳವಣಿಗೆ

ಕಾಲ್ಬೆರಳುಗಳ ಉಗುರುಗಳ ಅಂಚುಗಳು ಚರ್ಮವನ್ನು ತೂರಿಕೊಂಡು ಮಾಂಸಖಂಡದಲ್ಲಿ ಬೆಳೆಯತೊಡಗುತ್ತವೆ. ಇದು ಉಗುರಿನಲ್ಲಿ ಮತ್ತು ಅದರ ಸುತ್ತ ಅತೀವ ನೋವನ್ನುಂಟು ಮಾಡುವ ಸ್ಥಿತಿಯಾಗಿದೆ. ಇದರಿಂದ ಆ ಜಾಗವು ಕೆಂಪಗಾಗುವ ಜೊತೆಗೆ ಬಾತುಕೊಳ್ಳುತ್ತದೆ. ಸೋಂಕಿನಿಂದ ಕೀವು ಕೂಡ ಉಂಟಾಗಬಹುದು. ಹೀಗಾಗಿ ಮಧುಮೇಹಿಗಳು ಸೂಕ್ತವಾದ ಪಾದರಕ್ಷೆಗಳನ್ನು ಧರಿಸಬೇಕು ಮತ್ತು ಕಾಲಕಾಲಕ್ಕೆ ಕಾಲ್ಬರೆಳ ಉಗುರುಗಳನ್ನು ಕತ್ತರಿಸುತ್ತಿರಬೇಕು.

ಪಾದಗಳಲ್ಲಿ ಊತ,ಆಣಿಗಳು,ಜಡ್ಡುಗಳು,ತೆರೆದ ಹುಣ್ಣುಗಳು, ನೋವು,ಮಾಂಸಖಂಡದೊಳಗೆ ಉಗುರಿನ ಬೆಳವಣಿಗೆ,ಚರ್ಮದಲ್ಲಿ ಬಿರುಕುಗಳು,ಕೆಟ್ಟ ವಾಸನೆ,ಚರ್ಮದ ಬಣ್ಣ ಅಥವಾ ಉಷ್ಣತೆಯಲ್ಲಿ ಬದಲಾವಣೆಗಳು ಇವು ಮಧುಮೇಹ ಪಾದಗಳ ಸೋಂಕುಗಳ ಲಕ್ಷಣಗಳಾಗಿವೆ.

ಪಾದಗಳ ನೈರ್ಮಲ್ಯವನ್ನು ಕಾಯ್ದುಕೊಳ್ಳದಿರುವುದು,ಬರಿಗಾಲಿನಲ್ಲಿ ನಡೆಯುವುದು,ಬಿಗಿಯಾದ ಅಥವಾ ಚೂಪಾದ ಶೂಗಳನ್ನು ದೀರ್ಘಸಮಯ ಧರಿಸುವುದು,ಸರಿಯಾದ ಸಮಯದಲ್ಲಿ ಮತ್ತು ಸರಿಯಾದ ರೀತಿಯಲ್ಲಿ ಉಗುರುಗಳನ್ನು ಕತ್ತರಿಸದಿರುವುದು, ಧೂಮ್ರಪಾನ ಇವೆಲ್ಲ ಮಧುಮೇಹ ಪಾದಗಳ ಸೋಂಕನ್ನುಂಟು ಮಾಡುವ ಅಪಾಯದ ಅಂಶಗಳಾಗಿವೆ.

ಮಧುಮೇಹ ಪಾದಗಳ ಸೋಂಕುಗಳನ್ನೆಂದಿಗೂ ಕಡೆಗಣಿಸಬಾರದು ಮತ್ತು ತಕ್ಷಣ ವೈದ್ಯರನು ಭೇಟಿಯಾಗಿ ಸೂಕ್ತ ಚಿಕಿತ್ಸೆಯನ್ನು ಪಡೆದುಕೊಳ್ಳಬೇಕು. ಕೆಲವು ಅಂಗಾಂಶಗಳಿಗೆ ರಕ್ತಪೂರೈಕೆ ಸ್ಥಗಿತಗೊಂಡಾಗ ಉಂಟಾಗುವ ಗ್ಯಾಂಗ್ರಿನ್ ಅತ್ಯಂತ ಅಪಾಯಕಾರಿಯಾಗಿದೆ ಮತ್ತು ಕೆಲವೊಮ್ಮೆ ಮಧುಮೇಹ ಪಾದಗಳಲ್ಲಿಯೂ ಉಂಟಾಗುತ್ತದೆ. ಇಂತಹ ಸಂದರ್ಭದಲ್ಲಿ ರೋಗಿಯ ಕಾಲನ್ನು,ಕೆಲವು ಪ್ರಕರಣಗಳಲ್ಲಿ ಜೀವವನ್ನು ಉಳಿಸಲು ವೈದ್ಯರು ಶಸ್ತ್ರಚಿಕಿತ್ಸೆ ನಡೆಸಿ ಪೀಡಿತ ಭಾಗವನ್ನು ಕತ್ತರಿಸಿ ತೆಗೆಯುತ್ತಾರೆ.

ಮಧುಮೇಹಿಗಳೆಲ್ಲರೂ ಮಧುಮೇಹ ಪಾದದಿಂದ ನರಳುತ್ತಿರುತ್ತಾರೆ ಎಂದೇನಿಲ್ಲ. ಆರಂಭದಲ್ಲಿಯೇ ರೋಗ ಪತ್ತೆ ಹಚ್ಚುವಿಕೆ,ಜೀವನಶೈಲಿಯಲ್ಲಿ ಬದಲಾವಣೆಗಳು,ಮಧುಮೇಹದ ಸೂಕ್ತ ನಿರ್ವಹಣೆ ಇವುಗಳ ಮೂಲಕ ಮಧುಮೇಹ ಸಂಬಂಧಿತ ಯಾವುದೇ ತೊಂದರೆಯನ್ನು ತಡೆಯಲು ಸಾಧ್ಯವಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News