ಕತರ್‌ ಮೇಲೆ ಹೇರಿದ್ದ ನಿರ್ಬಂಧವನ್ನು ತೆರವುಗೊಳಿಸಲಿರುವ ಸೌದಿ ಅರೇಬಿಯಾ, ಮಿತ್ರರಾಷ್ಟ್ರಗಳು

Update: 2021-01-05 18:27 GMT

ಅಲ್-ಉಲಾ (ಸೌದಿ ಅರೇಬಿಯ), ಜ. 5: ಗಲ್ಫ್ ನಾಯಕರು ಸೌದಿ ಅರೇಬಿಯಾದಲ್ಲಿ ಶೃಂಗಸಭೆಗಾಗಿ ಒಟ್ಟುಗೂಡಿದ್ದಾರೆ. ಈ ಸಂದರ್ಭ ಖತರ್‌ಗೆ ಅದರ ನೆರೆಯ ರಾಷ್ಟ್ರಗಳು ಮೂರು ವರ್ಷಗಳಿಂದ ವಿಧಿಸಿದ್ದ ದಿಗ್ಭಂಧನ ಅಂತ್ಯಗೊಳ್ಳಲಿದೆ ಎಂದು ನಿರೀಕ್ಷಿಸಲಾಗಿದೆ.

ಶೃಂಗ ಸಮ್ಮೇಳನ ನಡೆಯುವ ಅಲ್-ಉಲಾಕ್ಕೆ ಆಗಮಿಸಿದ ಖತಾರ್ ಅಮೀರ್ ಶೇಖ್ ತಮೀಮ್ ಅಲ್ ಥಾನಿ ಅವರನ್ನು ಸೌದಿ ಯುವ ರಾಜ ಮುಹಮ್ಮದ್ ಬಿನ್ ಸಲ್ಮಾನ್ ಸ್ವಾಗತಿಸಿದರು.

ಸೋಮವಾರ ರಾತ್ರಿ ಸೌದಿ ಅರೆಬಿಯಾ ತನ್ನ ಗಡಿಯನ್ನು ಖತರ್‌ಗೆ ತೆರೆದಿದೆ. ಈ ಸಂಬಂಧ ಒಪ್ಪಂದವೊಂದಕ್ಕೆ ಸಹಿ ಹಾಕಲಾಗುವುದು ಎಂದು ಅಮೆರಿಕದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಖತರ್ ಭಯೋತ್ಪಾದಕರಿಗೆ ಬೆಂಬಲ ನೀಡುತ್ತಿದೆ ಎಂದು ಆರೋಪಿಸಿ, ಆ ದೇಶದೊಂದಿಗಿನ ಎಲ್ಲ ರಾಜತಾಂತ್ರಿಕ ಮತ್ತು ವ್ಯಾಪಾರ ಸಂಬಂಧಗಳನ್ನು ಸೌದಿ ಅರೇಬಿಯಾ, ಯುಎಇ, ಬಹರೈನ್ ಹಾಗೂ ಈಜಿಪ್ಟ್ ದೇಶಗಳು 2017ರ ಜೂನ್ ತಿಂಗಳಲ್ಲಿ ಕಡಿದುಕೊಂಡಿದ್ದವು.

 ಆದರೆ, ಸಣ್ಣ, ಅನಿಲ ಸಮೃದ್ಧ ರಾಷ್ಟ್ರ ಖತರ್ ಈ ಆರೋಪವನ್ನು ನಿರಾಕರಿಸಿತ್ತು. ಅಲ್ಲದೆ ಬಿಕ್ಕಟ್ಟಿನ ಆರಂಭದಲ್ಲಿ ತನ್ನ ನೆರೆಯ ರಾಷ್ಟ್ರಗಳು ನೀಡಿದ ಬೇಡಿಕೆಯ ಪಟ್ಟಿಯನ್ನು ತಿರಸ್ಕರಿಸಿತ್ತು. ಈ ಪಟ್ಟಿಯಲ್ಲಿ ಇರಾನ್‌ನೊಂದಿಗಿನ ರಾಜತಾಂತ್ರಿಕ ಒಪ್ಪಂದವನ್ನು ಕಡಿತಗೊಳಿಸುವುದು ಹಾಗೂ ದೋಹಾ ಮೂಲದ ಅಲ್ ಜಝೀರಾ ನೆಟವರ್ಕ್ ಅನ್ನು ಸ್ಥಗಿತಗೊಳಿಸುವುದು ಕೂಡ ಸೇರಿತ್ತು.

ವಿವಾದ ಪರಿಹರಿಸಲು ಕಳೆದ ಕೆಲವು ತಿಂಗಳಿಂದ ಅಮೆರಿಕ ಒತ್ತಡವನ್ನು ತೀವ್ರಗೊಳಿಸಿದೆ. ಅಲ್ಲದೆ, ಇರಾನ್ ಅನ್ನು ಏಕಾಂಗಿಯಾಗಿರಿಸಲು ಗಲ್ಭ್ ಒಗ್ಗೂಡುವುದು ಅತ್ಯಗತ್ಯ ಎಂದು ಸೂಚಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News