ಏನಿದು ಸೆರೆಬ್ರಲ್ ಪಾಲ್ಸಿ?

Update: 2021-01-05 12:59 GMT

ಮಗುವಿನ ಜನನಕ್ಕೆ ಮುನ್ನ,ಜನನದ ಸಂದರ್ಭ ಮತ್ತು ಜನನದ ನಂತರ ಮಿದುಳಿಗೆ ಉಂಟಾಗುವ ಹಾನಿಯಿಂದಾಗಿ ಕಾಣಿಸಿಕೊಳ್ಳುವ ವೈಕಲ್ಯಗಳ ಸಮೂಹವನ್ನು ಸೆರೆಬ್ರಲ್ ಪಾಲ್ಸಿ ಎಂದು ಕರೆಯಲಾಗುತ್ತದೆ. ಇದು ನರಮಂಡಲಕ್ಕೆ ಸಂಬಂಧಿಸಿದ ಕಾಯಿಲೆಯಾಗಿದ್ದು ಚಲನವಲನ ಕುಂಠಿತಗೊಳ್ಳುವುದು ಮತ್ತು ನರಗಳು ಸರಿಯಾಗಿ ಕಾರ್ಯ ನಿರ್ವಹಿಸದಿರುವುದು ಇದರ ವೈಶಿಷ್ಟ್ಯಗಳಾಗಿವೆ. ಸೆರೆಬ್ರಲ್ ಪಾಲ್ಸಿಯಿಂದ ಪೀಡಿತರು ಚಲನವಲನದ ಮತ್ತು ಕೈಗಳ ಬಳಕೆಯ ಸಮಸ್ಯೆಯನ್ನು ಹೊಂದಿರುತ್ತಾರೆ. ಸಂವಹನದ ಸಮಸ್ಯೆಯೂ ಅವರಿಗಿರುತ್ತದೆ.

 ಸೆರೆಬ್ರಲ್ ಪಾಲ್ಸಿಯನ್ನುಂಟು ಮಾಡುವ ಹಲವಾರು ಕಾರಣಗಳಿವೆ. ಸಮಸ್ಯೆಯ ಲಕ್ಷಣಗಳು ಮಗು ಜನಿಸಿದಾಗ ಅಥವಾ ತಿಂಗಳುಗಳು ಅಥವಾ ವರ್ಷಗಳ ಬಳಿಕ ಪ್ರಕಟಗೊಳ್ಳಬಹುದು. ಮಿದುಳಿಗೆ ಸಾಕಷ್ಟು ಆಮ್ಲಜನಕದ ಕೊರತೆ,ತಾಯಿಯಲ್ಲಿ ಜರ್ಮನ್ ದಡಾರಗಳಂತಹ ಸೋಂಕುಗಳು,ಗರ್ಭಾವಸ್ಥೆಯ ಮೊದಲ 4-5 ತಿಂಗಳುಗಳಲ್ಲಿ ಟೊಕ್ಸೊಪ್ಲಾಸ್ಮಾಸಿಸ್ ಆಗುವುದು ಇವೆಲ್ಲ ಸೆರೆಬ್ರಲ್ ಪಾಲ್ಸಿಗೆ ಕಾರಣವಾಗುತ್ತವೆ. ತಾಯಿಗೆ ಮಧುಮೇಹ,ಹೃದಯ ಸಮಸ್ಯೆ,ತೀವ್ರ ಅಸ್ತಮಾ ಮತ್ತು ಥೈರಾಯ್ಡ್ ಸಮಸ್ಯೆಗಳಿದ್ದರೂ ಮಗು ಸೆರೆಬ್ರಲ್ ಪಾಲ್ಸಿಗೆ ತುತ್ತಾಗುವ ಸಾಧ್ಯತೆಗಳಿರುತ್ತವೆ. ಗರ್ಭಿಣಿಯಾಗಿದ್ದಾಗ ವೈದ್ಯರ ಸಲಹೆ ಪಡೆಯದೆ ಔಷಧಿ ಸೇವನೆ, ಪ್ರಸವಪೂರ್ವ ನೋವಿನ ಸಂದರ್ಭದಲ್ಲಿ ಅಥವಾ ಪ್ರಸವದ ವೇಳೆ ಮಿದುಳಿಗೆ ಪೆಟ್ಟು,ಮಿದುಳು ರಕ್ತಸ್ರಾವ,ಫೋರ್ಸೆಪ್‌ಗಳ ಬಕೆ, ಅವಧಿಗೆ ಮುನ್ನವೇ ಜನನ ಇವೂ ಈ ಸಮಸ್ಯೆಯನ್ನುಂಟು ಮಾಡುತ್ತವೆ. ಆದರೆ ಸೆರೆಬ್ರಲ್ ಪಾಲ್ಸಿಗೆ ನಿಖರವಾದ ಕಾರಣವನ್ನು ಹೇಳುವುದು ಕಷ್ಟ.

ಸೆರೆಬ್ರಲ್ ಪಾಲ್ಸಿಯನ್ನು ಸಮಸ್ಯೆಯ ಲಕ್ಷಣಗಳು,ತೀವ್ರತೆ ಮತ್ತು ತೊಂದರೆಗಳನ್ನು ಅವಲಂಬಿಸಿ ಸ್ಪಾಸ್ಟಿಕ್,ಅಥೆಟಾಯ್ಡಿ,ಅಟಾಕ್ಸಿಕ್ ಮತ್ತು ಮಿಕ್ಸಡ್ ಹೀಗೆ ನಾಲ್ಕು ವಿಧಗಳಲ್ಲಿ ವರ್ಗೀಕರಿಸಲಾಗಿದೆ.

ವಿಷಾದದ ವಿಷಯವೆಂದರೆ ಮಗು ಒಮ್ಮೆ ಸೆರೆಬ್ರಲ್ ಪಾಲ್ಸಿಗೆ ತುತ್ತಾದರೆ ಜೀವನಪರ್ಯಂತ ಅದರೊಂದಿಗೆ ಬಾಳಬೇಕಾಗುತ್ತದೆ. ಆರಂಭದ ಹಂತದಲ್ಲಿಯೇ ಇದನ್ನು ಪತ್ತೆ ಹಚ್ಚಿದರೆ ಚಿಕಿತ್ಸೆಯನ್ನು ಬೇಗನೇ ಆರಂಭಿಸಬಹುದು. ನಿರ್ದಿಷ್ಟವಾದ ಚಿಕಿತ್ಸೆಯಿಲ್ಲವಾದರೂ ಮಗುವನ್ನು ತನ್ನ ಕೆಲಸಗಳನ್ನು ಸ್ವತಂತ್ರವಾಗಿ ಮಾಡಿಕೊಳ್ಳಲು ಸಮರ್ಥವಾಗಿಸುವುದು ಚಿಕಿತ್ಸೆಯ ಮುಖ್ಯ ಉದ್ದೇಶವಾಗಿರುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News