ಕಾಂಗ್ರೆಸ್‌ನ ದಾರಿಯಲ್ಲಿ ಬಿಜೆಪಿ?

Update: 2021-01-06 19:30 GMT

ಕಾಂಗ್ರೆಸ್ ಮಾರಕ ಕಾಯಿಲೆಯೊಂದರಿಂದ ನರಳುತ್ತಿದೆ ಎಂಬುದನ್ನು ಹಲವು ಲಕ್ಷಣಗಳು ಸೂಚಿಸುತ್ತಿವೆ. ಬಿಜೆಪಿ ಕೂಡ ಅದೇ ಕಾಯಿಲೆಯಿಂದ ನರಳುತ್ತಿದೆ ಎಂಬುದು ಮಾತ್ರ ಅಷ್ಟೊಂದು ಸ್ಪಷ್ಟವಾಗಿ ಕಾಣಿಸುತ್ತಿಲ್ಲ. ಒಂದು ಪ್ರಜಾಪ್ರಭುತ್ವದಲ್ಲಿ ರಾಜಕೀಯ ಪಕ್ಷವೊಂದರ ಆರೋಗ್ಯವನ್ನು ಮೂರು ಮುಖ್ಯ ಅಂಶಗಳು ನಿರ್ಧರಿಸುತ್ತವೆ: ಪಕ್ಷದ ಸದಸ್ಯರಲ್ಲಿ ಸಹಮತವಿರುವ ಸಿದ್ಧಾಂತ, ನಿಷ್ಠಾವಂತ ಕಾರ್ಯಕರ್ತರು ಮತ್ತು ಪಕ್ಷದ ಒಳಗಿರುವ ಆಂತರಿಕ ಪ್ರಜಾಪ್ರಭುತ್ವ.

ಆರೆಸ್ಸೆಸ್‌ನ ಉನ್ನತ ನಾಯಕರು ಅದರ ರಾಜಕೀಯ ಅಂಗವಾಗಿರುವ ಬಿಜೆಪಿಯ ನಾಯಕತ್ವವನ್ನು ಯಾರು ವಹಿಸಬೇಕೆಂದು ನಿರ್ಧರಿಸುವುದರಿಂದ ಆಂತರಿಕ ಪ್ರಜಾಪ್ರಭುತ್ವ ಯಾವತ್ತೂ ಬಿಜೆಪಿಯ ಒಂದು ಪ್ರಮುಖ ಅಂಶವಾಗಿರಲಿಲ್ಲ. ಒಂದು ಮುಖ್ಯ ವ್ಯತ್ಯಾಸದೊಂದಿಗೆ ಈ ಪರಂಪರೆ ಈಗಲೂ ಮುಂದುವರಿಯುತ್ತಿದೆ: ಈ ಹಿಂದೆ ಅಟಲ್ ಬಿಹಾರಿ ವಾಜಪೇಯಿ ಹಾಗೂ ಎಲ್. ಕೆ. ಅಡ್ವಾಣಿಯವರಂತಹವರೂ ಸೇರಿ, ಬಿಜೆಪಿಯ ಅತ್ಯಂತ ಉನ್ನತ ನಾಯಕರಿಗೆ ಕೂಡ ತಮ್ಮ ಸುತ್ತ ವ್ಯಕ್ತಿಪೂಜೆಯ ಒಂದು ಪಂಥವನ್ನು ಸೃಷ್ಟಿಸಿಕೊಳ್ಳುವುದು ಸಾಧ್ಯವಾಗಲಿಲ್ಲ. ಆರೆಸ್ಸೆಸ್‌ನ ನಿಯಂತ್ರಣ ಇದಕ್ಕೆ ಭಾಗಶಃ ಕಾರಣವಾಗಿತ್ತು. ಪ್ರಧಾನಿ ನರೇಂದ್ರ ಮೋದಿಯವರ ಆಡಳಿತದಲ್ಲಿ ಇದು ಬದಲಾಗಿದೆ. ಪಕ್ಷದ ಏರಿಳಿತಗಳು, ಯಶಸ್ಸುಗಳು ಮೋದಿಯವರ ಬಾಳಿಕೆ ಯೊಂದಿಗೆ ಬಿಡಿಸಲಾಗದಂತೆ ತಳುಕು ಹಾಕಿಕೊಂಡಿವೆ. ‘‘ಇಂದಿರಾ ಈಸ್ ಇಂಡಿಯಾ’’ ಎಂಬ ಘೋಷಣೆಯ ಪ್ರತಿಧ್ವನಿಗಳು ‘‘ಮೋದಿ ಹೈ ತೋ ಮುಮ್ಕಿನ್ ಹೈ’’ (ಮೋದಿ ಇದ್ದರೆ ಅದು ಸಾಧ್ಯವಿದೆ) ಎಂಬ ಘೋಷಣೆಯಲ್ಲಿ ಕೇಳಿಬರುತ್ತಿವೆ. ಆದರೆ 1977ರಲ್ಲಿ ಇಂದಿರಾಗಾಂಧಿಯವರ ಭಾರೀ ಸೋಲು ತೋರಿಸಿಕೊಟ್ಟಿರುವ ಹಾಗೆ ವರ್ಚಸ್ಸು, ಪ್ರಭಾವಲಯ ಚಂಚಲ; ಕ್ಷಣಿಕ. ಮೋದಿಯವರ ವರ್ಚಸ್ಸು ಕುಂದಿತೆಂದರೆ ಅವರ ಪಕ್ಷದ ವರ್ಚಸ್ಸು ಕೂಡ ಕುಂದುತ್ತದೆ.

ತನ್ನ ಪೋಷಕ ಸಂಘಟನೆಯಾದ ಆರೆಸ್ಸೆಸ್‌ನಿಂದಾಗಿ ಬಿಜೆಪಿ ಸೈದ್ಧಾಂತಿಕ ಬದ್ಧತೆ ಮತ್ತು ನಿಷ್ಠಾವಂತ ಕಾರ್ಯಕರ್ತರು ಬಿಜೆಪಿಯ ಅತ್ಯಂತ ಬಲಿಷ್ಠ ಅಂಶಗಳಾಗಿವೆ. ಆದರೆ ಈಗ ಬಿಜೆಪಿ ಕೂಡ ತನ್ನ ಸಿದ್ಧಾಂತವನ್ನು ಅಮುಖ್ಯವಾಗಿಸುತ್ತ ಕಾಂಗ್ರೆಸ್‌ನ ಹೆಜ್ಜೆಗಳನ್ನು ಅನುಸರಿಸಿ ಹೋಗುತ್ತಿರುವಂತೆ ಕಾಣುತ್ತಿದೆ. ಬಿಜೆಪಿಯೇತರ ಸರಕಾರ ಗಳನ್ನು ಉರುಳಿಸಲು ಅದು ಇತರ ರಾಜಕೀಯ ಪಕ್ಷಗಳ ರಾಜಕಾರಣಿಗಳನ್ನು ತನ್ನೆಡೆಗೆ ಸೆಳೆದುಕೊಳ್ಳಲು ಎಲ್ಲಾ ರೀತಿಯ ಆಮಿಷಗಳನ್ನು ಒಡ್ಡುತ್ತಿದೆ. ಅದು ಈ ನಿಟ್ಟಿನಲ್ಲಿ ಕರ್ನಾಟಕದಲ್ಲಿ ಯಶಸ್ವಿಯಾಯಿತು. ಕರ್ನಾಟಕದಲ್ಲಿ ಹನ್ನೆರಡಕ್ಕೂ ಹೆಚ್ಚು ಮಂದಿ ಕಾಂಗ್ರೆಸ್ ಮತ್ತು ಜೆಡಿಎಸ್ ಎಂಎಲ್‌ಎಗಳು ಬಿಜೆಪಿಗೆ ಸೇರಿದರು. ಅವರಲ್ಲಿ ಹೆಚ್ಚುಕಮ್ಮಿ ಎಲ್ಲರಿಗೂ ಸಚಿವ ಸ್ಥಾನ ನೀಡಲಾಯಿತು.

ಬಿಜೆಪಿ ಮಧ್ಯಪ್ರದೇಶದಲ್ಲಿ ಇದಕ್ಕಿಂತಲೂ ದೊಡ್ಡದಾದ ಒಂದು ಬಹುಮಾನ ಗಳಿಸಿತು. ಕಾಂಗ್ರೆಸ್‌ನ ಪ್ರಮುಖ ನಾಯಕ ಜ್ಯೋತಿರಾದಿತ್ಯ ಸಿಂಧಿಯಾ ಅವರನ್ನು ಅವರ ಹಲವು ಹಿಂಬಾಲಕರೊಂದಿಗೆ ಬಿಜೆಪಿಗೆ ಪಕ್ಷಾಂತರ ಮಾಡುವಂತೆ ಆಮಿಷವೊಡ್ಡಿ ಅದು ಕಮಲ್‌ನಾಥ್ ಸರಕಾರವನ್ನು ಉರುಳಿಸಿತು. ರಾಜಸ್ಥಾನದಲ್ಲೂ ಅದು ಹೀಗೆಯೇ ಮಾಡುವಲ್ಲಿ ಬಹುಪಾಲು ಯಶಸ್ವಿಯಾಯಿತಾದರೂ ಕೊನೆಗಳಿಗೆಯಲ್ಲಿ ಸಚಿನ್ ಪೈಲಟ್ ಅಧೈರ್ಯ ತೋರಿದರು. ಈ ಪಕ್ಷಾಂತರ ನಾಟಕವನ್ನು ಪಶ್ಚಿಮ ಬಂಗಾಲದಲ್ಲೂ ಪುನರ್ ಅಭಿನಯಿಸಲಾಗುತ್ತಿದೆ.

ಆದರೆ ದೀರ್ಘಾವಧಿಯಲ್ಲಿ ಬಿಜೆಪಿಯ ಈ ತಂತ್ರ ಅದಕ್ಕೆ ವಿರುದ್ಧವಾಗುವ ಸಾಧ್ಯತೆಯಿದೆ. ಯಾಕೆಂದರೆ ಇಂದಿನ ‘ಆಯಾರಾಮ್’ಗಳು ಬಹಳ ಸುಲಭವಾಗಿ ನಾಳೆಯ ‘ಗಯಾರಾಮ್’ಗಳಾಗಬಲ್ಲರು. ಯಾಕೆಂದರೆ ಆರೆಸ್ಸೆಸ್ ಸಂಬಂಧದಿಂದಾಗಿ ಬಿಜೆಪಿಯ ಸಂಸ್ಕೃತಿಗೆ ನಿಷ್ಠರಾಗಿರುವ ಸದಸ್ಯರಿಗೆ ಇರುವಂತಹ ಸೈದ್ಧಾಂತಿಕ ಬದ್ಧತೆ, ನಿಷ್ಠೆ ಇತರ ಪಕ್ಷಗಳಿಂದ ಬಂದು ಬಿಜೆಪಿಗೆ ಸೇರಿಕೊಳ್ಳುವ ಸದಸ್ಯರಿಗೆ ಇರುವುದಿಲ್ಲ. ಬಿಜೆಪಿ ನಿಧಾನವಾಗಿ ಆದರೆ ಖಂಡಿತವಾಗಿಯೂ ಕಾಂಗ್ರೆಸ್‌ನ ಪ್ರತಿಬಿಂಬವಾಗುತ್ತಿದೆ. ಹಲವು ದಶಕಗಳ ಕಾಲ ಅಧಿಕಾರದ ಆಕರ್ಷಣೆಯ ಅಂಟು ಕಾಂಗ್ರೆಸ್ ಪಕ್ಷವನ್ನು ಹಿಡಿದಿಟ್ಟುಕೊಂಡಿದ್ದಂತೆ, ಈಗ ಬಿಜೆಪಿಯನ್ನು ಒಂದಾಗಿ ಹಿಡಿದಿಟ್ಟುಕೊಂಡಿರುವ ಅಂಟು ಅಧಿಕಾರ ಹಾಗೂ ಸಚಿವ ಸ್ಥಾನದ ಆಸೆ ಅಲ್ಲದೆ ಬೇರೇನೂ ಅಲ್ಲ. ಆದರೆ ಬಿಜೆಪಿಯ ಅದೃಷ್ಟ ಬದಲಾಗುವ ಅಥವಾ ಪಕ್ಷಾಂತರಿಗಳಿಗೆ ಅಧಿಕಾರದ ಹುದ್ದೆಗಳನ್ನು ನೀಡುವ ಪಕ್ಷದ ಸಾಮರ್ಥ್ಯ ಕ್ಷೀಣಿಸುವ ಲಕ್ಷಣಗಳು ಕಂಡು ಬಂದರೆ ಸಾಕು ಆಯಾರಾಮ್‌ಗಳು ಗಯಾರಾಮ್‌ಗಳಾಗುತ್ತಾರೆ. ಅವರು ಹತಾಶರಾಗಿ ಮತ್ತೆ ಪಕ್ಷಾಂತರಕ್ಕೆ ಹಾತೊರೆಯುತ್ತಾರೆ. ಇಂದಿನ ಪರಿಸ್ಥಿತಿಯ ಬೆಳವಣಿಗೆಗಳನ್ನು ಗಮನಿಸಿದರೆ, ಬಿಜೆಪಿಗೆ, ಕಾಂಗ್ರೆಸ್‌ಗೆ ಆದ ಗತಿಯೇ ಆಗುವ ಸಾಧ್ಯತೆಯಿದೆ.

ಕೃಪೆ: TheHindu

Writer - ಮುಹಮ್ಮದ್ ಅಯೂಬ್

contributor

Editor - ಮುಹಮ್ಮದ್ ಅಯೂಬ್

contributor

Similar News