×
Ad

ಚು.ಆಯೋಗಕ್ಕೆ ಸುಳ್ಳು ಮಾಹಿತಿ ನೀಡಿದ ಆರೋಪ: ಸಂಸದ ಪಿ.ಸಿ.ಮೋಹನ್ ತನಿಖೆ ನಡೆಸಲು ಜನಪ್ರತಿನಿಧಿಗಳ ಕೋರ್ಟ್‍ಗೆ ಆದೇಶ

Update: 2021-01-07 22:38 IST

ಬೆಂಗಳೂರು, ಜ.7: 2014 ಮತ್ತು 2019ರ ಲೋಕಸಭಾ ಚುನಾವಣೆ ವೇಳೆ ಚುನಾವಣಾ ಆಯೋಗಕ್ಕೆ ಆಸ್ತಿ ಮಾಹಿತಿ ಕುರಿತಂತೆ ಸುಳ್ಳು ಮಾಹಿತಿ ನೀಡಿದ ಆರೋಪದಡಿ ದಾಖಲಿಸಿರುವ ಪ್ರಕರಣವನ್ನು ರದ್ದುಪಡಿಸುವಂತೆ ಕೋರಿ ಸಂಸದ ಪಿ.ಸಿ. ಮೋಹನ್ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ. ಜತೆಗೆ ತನಿಖೆ ನಡೆಸಲು ಜನಪ್ರತಿನಿಧಿಗಳ ವಿಶೇಷ ಕೋರ್ಟ್‍ಗೆ ಆದೇಶಿಸಿದೆ. 

ಪ್ರಕರಣದ ತನಿಖೆ ನಡೆಸಲು ಜನಪ್ರತಿನಿಧಿಗಳ ವಿಶೇಷ ಕೋರ್ಟ್ ನೀಡಿರುವ ಆದೇಶವನ್ನು ರದ್ದುಪಡಿಸುವಂತೆ ಕೋರಿ ಸಂಸದ ಮೋಹನ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ಏಕಸದಸ್ಯ ನ್ಯಾಯಪೀಠ, ಅರ್ಜಿಯನ್ನು ವಜಾಗೊಳಿಸಿದೆ.

ಬೆಂಗಳೂರು ಹೊರವಲಯದ ದೇವನಹಳ್ಳಿಯ ಲಕ್ಷ್ಮೀಪುರ ಗ್ರಾಮದಲ್ಲಿ 33 ಕೋಟಿಗೂ ಅಧಿಕ ಮೌಲ್ಯದ 42 ಎಕರೆ 14 ಗುಂಟೆ ಜಮೀನಿನ ಮಾಹಿತಿ ನೀಡಿಲ್ಲ ಎಂದು ಆರೋಪಿಸಿ ಟಿ. ಆರ್. ಆನಂದ್ ವಿಶೇಷ ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಿಸಿದ್ದರು. ವಿಶೇಷ ನ್ಯಾಯಾಲಯ ದೂರಿನ ತನಿಖೆ ನಡೆಸಲು ಬೆಂಗಳೂರು ದಕ್ಷಿಣ ವಿಭಾಗದ ಉಪ ಪೊಲೀಸ್ ಆಯುಕ್ತರಿಗೆ 2019 ನ.8ರಂದು ಆದೇಶಿಸಿತ್ತು.

ಈ ಆದೇಶ ರದ್ದು ಕೋರಿದ್ದ ಪಿ.ಸಿ.ಮೋಹನ್ ಅವರು, ತಾವು ಯಾವುದೇ ಮಾಹಿತಿ ಮುಚ್ಚಿಟ್ಟಿಲ್ಲ. ಪಿ.ಸಿ ರಿಯಾಲ್ಟಿ ಎಂಬ ಸಂಸ್ಥೆಗೆ ಆಸ್ತಿ ಖರೀದಿಸಲಾಗಿದ್ದು, ಈ ಸಂಸ್ಥೆಯೊಂದಿಗೆ ಪಾಲುದಾರಿಕೆಯನ್ನಷ್ಟೇ ಹೊಂದಿದ್ದೇವೆ. ಹಾಗೆಯೇ, ತಮ್ಮ ವಿರುದ್ಧದ ಆರೋಪಗಳು ಅಂಸಜ್ಞೇಯ ಅಪರಾಧ ಕೃತ್ಯದ ಸ್ವರೂಪದವಾಗಿದ್ದು, ಪೊಲೀಸ್ ತನಿಖೆಗೆ ಆದೇಶಿಸಿರುವ ವಿಶೇಷ ನ್ಯಾಯಾಲಯದ ಕ್ರಮ ಸರಿಯಲ್ಲ ಎಂದಿದ್ದರು.

ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್, ಅರ್ಜಿದಾರರ ವಿರುದ್ಧದ ಆರೋಪಗಳಲ್ಲಿ ಸಂಜ್ಞೇಯ ಅಪರಾಧ ಕೃತ್ಯಗಳಿರುವುದಕ್ಕೆ ದಾಖಲೆಗಳಿಲ್ಲ. ಹೀಗಾಗಿ, ದೂರಿನ ತನಿಖೆ ನಡೆಸಲು ಪೊಲೀಸರಿಗೆ ಆದೇಶಿಸುವ ಅಗತ್ಯವಿಲ್ಲ. ಆದರೆ, ಪ್ರಕರಣಕ್ಕೆ ಸಂಬಂಧಿಸಿದ ದಾಖಲೆಗಳನ್ನು ಗಮನಿಸಿದರೆ, ಚುನಾವಣಾ ನಾಮಪತ್ರದಲ್ಲಿ ಆಸ್ತಿ ಕುರಿತು ಸುಳ್ಳು ಮಾಹಿತಿ ಮತ್ತು ಸುಳ್ಳು ಸಾಕ್ಷ್ಯ ಒದಗಿಸಿರುವುದು ಮೇಲ್ನೋಟಕ್ಕೆ ಕಂಡುಬರುತ್ತಿದೆ. ಹೀಗಾಗಿ, ವಿಶೇಷ ನ್ಯಾಯಾಲಯವೇ ಪ್ರಕರಣದ ಕಾಗ್ನಿಜೆನ್ಸ್ ತೆಗೆದುಕೊಂಡು ವಿಚಾರಣೆ ನಡೆಸಬೇಕು ಎಂದು ನಿರ್ದೇಶಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News