ಸಿಎಂ ಸ್ಥಾನದಿಂದ ಯಡಿಯೂರಪ್ಪರನ್ನು ವಜಾ ಮಾಡಲು ಆಗ್ರಹಿಸಿ ಕಾಂಗ್ರೆಸ್ ಧರಣಿ

Update: 2021-01-07 17:59 GMT

ಬೆಂಗಳೂರು, ಜ. 7: ಡಿನೋಟಿಫಿಕೇಷನ್ ಹಗರಣದ ತನಿಖೆಗೆ ನ್ಯಾಯಾಲಯ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿರುದ್ಧ ಆದೇಶಿಸಿದ್ದರೂ ಅವರು ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡದಿರುವುದನ್ನು ಖಂಡಿಸಿ ಕಾಂಗ್ರೆಸ್ ಪ್ರಚಾರ ಸಮಿತಿ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಗುರುವಾರ ಇಲ್ಲಿನ ಆನಂದ್ ರಾವ್ ವೃತ್ತದಲ್ಲಿನ ಗಾಂಧಿ ಪ್ರತಿಮೆ ಬಳಿ ಪ್ರತಿಭಟನೆ ನಡೆಸಿದ ಕಾರ್ಯಕರ್ತರು, ಮುಖ್ಯಮಂತ್ರಿ ಯಡಿಯೂರಪ್ಪ ಕೂಡಲೇ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿದರು. ಈ ಹಿಂದೆ ಜೈಲಿಗೆ ಹೋಗಿ ಬಂದಿರುವ ಬಿಎಸ್‍ವೈ ಅವರಿಗೆ ಕೇಂದ್ರದ ಬಿಜೆಪಿ ನಾಯಕರು ಬೆಂಬಲಿಸುತ್ತಿರುವುದು ಸ್ಪಷ್ಟ ಎಂದು ಮುಖಂಡರು ಟೀಕಿಸಿದರು.

ಭ್ರಷ್ಟಾಚಾರ ರಹಿತ ಆಡಳಿತ ನೀಡುತ್ತೇವೆನ್ನುವ ಪ್ರಧಾನಿ ಮೋದಿ, ಬಿಜೆಪಿ ಸರಕಾರದಲ್ಲೇ ಅತಿ ಹೆಚ್ಚು ಭ್ರಷ್ಟಾಚಾರ ನಡೆದಿರುವುದು ತಿಳಿದಿದ್ದರೂ ಮೌನಕ್ಕೆ ಶರಣಾಗಿದ್ದಾರೆ. ಯಡಿಯೂರಪ್ಪನ ಭ್ರಷ್ಟಾಚಾರದ ಹಣದಲ್ಲಿ ಪ್ರಧಾನಿ ಮೋದಿಯವರ ಪಾಲು ಎಷ್ಟು ಎಂಬುದನ್ನು ತಿಳಿಸಬೇಕು ಎಂದು ಕಾಂಗ್ರೆಸ್ ಮುಖಂಡರು ಆಗ್ರಹಿಸಿದರು.

ದೇಶದ ಬಗ್ಗೆ ಮಾತನಾಡುವ ಕನಿಷ್ಠ ನೈತಿಕತೆ ಇದ್ದರೆ ಪ್ರಧಾನಿ ಮೋದಿ ಕೂಡಲೇ ಮುಖ್ಯಮಂತ್ರಿ ಸ್ಥಾನದಿಂಧ ಯಡಿಯೂರಪ್ಪನವರನ್ನು ವಜಾ ಮಾಡಬೇಕು. ಇಲ್ಲವಾದರೆ ಯಾವುದೇ ಕಾರಣಕ್ಕೂ ಭ್ರಷ್ಟಾಚಾರ ವಿರುದ್ಧ ಮೋದಿ ಸೊಲ್ಲೆತ್ತಬಾರದು ಎಂದು ಮುಖಂಡರು ವಾಗ್ದಾಳಿ ನಡೆಸಿದರು.

ಪ್ರತಿಭಟನೆಯಲ್ಲಿ ಕಾಂಗ್ರೆಸ್ ಮುಖಂಡರಾದ ಎಸ್.ಮನೋಹರ್, ಜಿ.ಜನಾರ್ದನ್, ಎಂ. ಆನಂದ್, ಈ.ಶೇಖರ್, ಎಂ.ಎ.ಸಲೀಮ್, ಪ್ರಕಾಶ್, ಉಮೇಶ್, ಪುಟ್ಟರಾಜು, ಶಶಿಭೂಷಣ್, ಚಂದ್ರು ಹಾಗೂ ಪಕ್ಷದ ವಿವಿಧ ವಿಭಾಗಗಳ ಪದಾಧಿಕಾರಿಗಳು ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News