ಯಾವತ್ತೂ ಬಿಕ್ಕಟ್ಟನ್ನು ವ್ಯರ್ಥಗೊಳಿಸಬೇಡಿ

Update: 2021-01-08 19:30 GMT

ಪ್ರಧಾನಿಯವರಿಗೆ ಮತ್ತು ಅವರ ಪಕ್ಷಕ್ಕೆ ಭಾರತದ ನಾಗರಿಕರ ಆರ್ಥಿಕ ಹಾಗೂ ಸಾಮಾಜಿಕ ಕಲ್ಯಾಣಕ್ಕಿಂತ ರಾಜಕೀಯ ಅಧಿಕಾರ, ಸೈದ್ಧಾಂತಿಕ ನಿಯಂತ್ರಣ ಮತ್ತು ವೈಯಕ್ತಿಕ ಕೀರ್ತಿ, ವೈಭವ ಹೆಚ್ಚು ಮುಖ್ಯವಾಗಿದೆ. ಆದ್ದರಿಂದಲೇ ಅವರು ಕೊರೋನ ಬಿಕ್ಕಟ್ಟನ್ನು ಭಾರತದ ಪ್ರಜಾಪ್ರಭುತ್ವ ಹಾಗೂ ಭಾರತದ ಪ್ರಭುತ್ವದ ಪರಂಪರೆಗಳನ್ನು ದುರ್ಬಲಗೊಳಿಸಲು ಬಳಸಿಕೊಂಡಿದ್ದಾರೆ ಅಥವಾ ದುರ್ಬಳಕೆ ಮಾಡಿಕೊಂಡಿದ್ದಾರೆ. ಆ ಮೂಲಕ ಅವರು ಬೇರೆ ಎಲ್ಲಕ್ಕಿಂತಲೂ ಹೆಚ್ಚಾಗಿ ಅಧಿಕಾರಶಾಹಿ ಹಾಗೂ ಬಹುಮತವಾದಿ (ಮೆಜಾರಿಟೇರಿಯನ್) ಸರಕಾರದ, ದೇಶದ ನಿರ್ಮಾಣವನ್ನು ಸುಗಮಗೊಳಿಸಬಯಸಿದ್ದಾರೆ. 


ಭಾರತೀಯರ ಆರೋಗ್ಯದ ಹಾಗೂ ಭಾರತದ ಪ್ರಜಾಪ್ರಭುತ್ವದ ಪಾಲಿಗೆ 2020 ಒಂದು ಕೆಟ್ಟ ವರ್ಷವಾಗಿತ್ತು. ಪ್ರವೃತ್ತಿ ಹಾಗೂ ನಂಬಿಕೆ ಎರಡರಲ್ಲೂ ಸರ್ವಾಧಿಕಾರಿ ಧೋರಣೆಯದಾಗಿರುವ ಮೋದಿ-ಶಾ ಪ್ರಭುತ್ವವು ಸಾಂವಿಧಾನಿಕ ಪ್ರಜಾಪ್ರಭುತ್ವವನ್ನು ಮತ್ತಷ್ಟು ಅಮುಖ್ಯಗೊಳಿಸಲು, ಇನ್ನಷ್ಟು ದುರ್ಬಲವಾಗಿಸಲು ಕೊರೋನ ಸಾಂಕ್ರಾಮಿಕವನ್ನು ಬಳಸಿಕೊಂಡಿತು. ಆ ಮೂಲಕ ಸರಕಾರ ದೇಶ ಹಾಗೂ ಸಮಾಜದ ಮೇಲೆ ತನ್ನ ಹಿಡಿತವನ್ನು ಮತ್ತಷ್ಟು ಬಲಪಡಿಸಿಕೊಂಡಿತು. ತನ್ನ ಮಹತ್ವಾಕಾಂಕ್ಷೆಯನ್ನು ಈಡೇರಿಸಿಕೊಳ್ಳುವ ನಿಟ್ಟಿನಲ್ಲಿ ಅದು ಭಾರತದ ಸಂಸತ್, ಭಾರತದ ಫೆಡರಲಿಸಂ, ಭಾರತದ ಪತ್ರಿಕೋದ್ಯಮ, ಪತ್ರಿಕೆಗಳು ಹಾಗೂ ಭಾರತದ ನಾಗರಿಕ ಸಮಾಜದ ಸಂಸ್ಥೆಗಳ ಮೇಲೆ ಹಲವು ರೀತಿಯ ದಾಳಿಗಳನ್ನು ನಡೆಸಿತು. ಇವುಗಳನ್ನು ಈಗ ಒಂದೊಂದಾಗಿ ಪರಿಗಣಿಸೋಣ.

ಗುಜರಾತ್‌ನ ಮುಖ್ಯಮಂತ್ರಿಯಾಗಿದ್ದ ವರ್ಷಗಳಲ್ಲಿ ಮೋದಿಯವರು ಸತತವಾಗಿ ಶಾಸನಾತ್ಮಕ ಪ್ರಕ್ರಿಯೆಗೆ ತನ್ನ ತಿರಸ್ಕಾರವನ್ನು ವ್ಯಕ್ತಪಡಿಸಿದ್ದರು. ಅವರು ಒಂದು ದಶಕದ ಕಾಲ ಅಧಿಕಾರದಲ್ಲಿದ್ದ ಬಳಿಕ ಸಿದ್ಧಪಡಿಸಲಾದ ವರದಿಯೊಂದು, ಗುಜರಾತ್ ರಾಜ್ಯ ರಚನೆಯಾದ ಬಳಿಕ ಅಧಿಕಾರದಲ್ಲಿದ್ದ ಎಲ್ಲಾ ಮುಖ್ಯಮಂತ್ರಿಗಳ ಪೈಕಿ ಮೋದಿಯವರು ಅತ್ಯಂತ ಕಡಿಮೆ ಶಾಸನಸಭಾ ಅಧಿವೇಶನವನ್ನು ನಡೆಸಿದ್ದಾರೆಂಬುದನ್ನು ಬಯಲುಗೊಳಿಸಿತು. ಅಸೆಂಬ್ಲಿ ಅಧಿವೇಶನ ನಡೆಯದೆ ತಿಂಗಳುಗಳೇ ಕಳೆದದ್ದೂ ಇದೆ. ಅಸೆಂಬ್ಲಿ ನಡೆದಾಗ ಕಾರ್ಯಸೂಚಿಯಲ್ಲಿದ್ದ ವಿಷಯಗಳನ್ನು ಒಂದೇ ದಿನದಲ್ಲಿ ಇತ್ಯರ್ಥಗೊಳಿಸಿ ಬಿಡಲಾಗುತ್ತಿತ್ತು ಮತ್ತು ಆ ದಿನದ ಹೆಚ್ಚಿನ ಸಮಯವನ್ನು ನಿಧನ ಹೊಂದಿದ್ದ ಸದನದ ಸದಸ್ಯರಿಗೆ ಶ್ರದ್ಧಾಂಜಲಿ ಅರ್ಪಿಸುವುದರಲ್ಲೇ ಕಳೆಯಲಾಗುತ್ತಿತ್ತು. ಎಲ್ಲರಿಗೂ ಚೆನ್ನಾಗಿ ತಿಳಿದಿರುವಂತೆ ವಿಪಕ್ಷಗಳ ಶಾಸಕರು ಎತ್ತಿದ ವಿಷಯಗಳನ್ನು ಮತ್ತು ತನ್ನದೇ ಪಕ್ಷದ ಶಾಸಕರ ಅಭಿಪ್ರಾಯಗಳನ್ನು ಕೂಡ ಕಡೆಗಣಿಸುವುದಷ್ಟೇ ಅಲ್ಲದೆ, ಮುಖ್ಯಮಂತ್ರಿ ಮೋದಿ ಪ್ರಮುಖ ನೀತಿ ನಿರ್ಧಾರಗಳ ಬಗ್ಗೆ ಸ್ವತಃ ತನ್ನ ಸಚಿವ ಸಂಪುಟದ ಜತೆ ಸಮಾಲೋಚನೆ ನಡೆಸುತ್ತಿದ್ದದ್ದು ತೀರಾ ಅಪರೂಪ.

ಸಮಾಲೋಚನೆಯ ಕುರಿತಾದ ತನ್ನ ಈ ತಿರಸ್ಕಾರವನ್ನು ಮೋದಿಯವರು ತನ್ನೊಂದಿಗೆ ದಿಲ್ಲಿಗೆ ಕೊಂಡು ಹೋಗಿದ್ದಾರೆ. ಅವರಿಗೆ ಸಂಸತ್ ಎಂಬುದು ಜನರನ್ನು ಆಕರ್ಷಿಸುವ ಭಾಷಣ ಮಾಡಲಿರುವ ಒಂದು ಸ್ಥಳ; ನಿರ್ಧಾರ ತೆಗೆದುಕೊಳ್ಳಲು ಚರ್ಚೆ, ಸಮಾಲೋಚನೆ ನಡೆಸಲು ಇರುವ ಒಂದು ಸದನವಲ್ಲ. ಲೋಕಸಭೆಯ ಸ್ಪೀಕರ್ ಹಾಗೂ ರಾಜ್ಯಸಭಾ ಅಧ್ಯಕ್ಷರ ಪಕ್ಷಪಾತಿ ಧೋರಣೆ ಅವರ ನಾಯಕನ ಯೋಚನಾ ರೀತಿಗೆ ಬಹುಪಾಲು ಹೊಂದುವಂತೆಯೇ ಇದೆ. ಅವರ ಕೆಳಗಿರುವವರು ಕೂಡ ಅವರ ಹಾಗೆಯೇ ವರ್ತಿಸುತ್ತಾರೆ. ಉದಾಹರಣೆಗೆ, ರಾಜ್ಯಸಭೆಯ ಮೂಲಕ ಕೃಷಿ ಮಸೂದೆಗಳು ಅಂಗೀಕಾರಗೊಂಡ ರೀತಿಯನ್ನೇ ಗಮನಿಸಿ: ಸಭೆಯ ಉಪಾಧ್ಯಕ್ಷ ಹರಿವಂಶ್ ನಿಜವಾದ ಮತದಾನಕ್ಕೆ ಅವಕಾಶ ನೀಡದೆ ಸಂಸತ್ತಿನ ಎಲ್ಲಾ ನಿಯಮಗಳನ್ನು ಉಲ್ಲಂಘಿಸಿ ಮಸೂದೆಗಳ ಅಂಗೀಕಾರಕ್ಕೆ ಅನುವು ಮಾಡಿಕೊಟ್ಟರು. ಪ್ರಜಾಸತ್ತಾತ್ಮಕ ಪ್ರಕ್ರಿಯೆಯಿಂದ ಹೀಗೆ ದೂರ ಸರಿದ ಬಗ್ಗೆ, ಲೋಕಸಭೆಯ ಮಾಜಿ ಮಹಾಕಾರ್ಯದರ್ಶಿ ಪಿ.ಡಿ.ಟಿ. ಆಚಾರಿ ಹೀಗೆ ಬರೆದಿದ್ದಾರೆ: ‘‘ಸಂಸತ್ತಿನ ವ್ಯವಸ್ಥೆಗಳು ವಿಪಕ್ಷಗಳಿಗೆ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುವಂತೆ ಹಾಗೂ ಆ ಬಳಿಕ ಸರಕಾರಕ್ಕೆ ತನ್ನ ಕ್ರಮವನ್ನು ತೆಗೆದುಕೊಳ್ಳುವಂತೆ ವಿನ್ಯಾಸಗೊಳಿಸಲ್ಪಟ್ಟಿವೆ. ಇವುಗಳಲ್ಲಿ ಮೊದಲನೆಯದು ಸಾಧ್ಯವಾಗದಿದ್ದಲ್ಲಿ ಒಂದು ಪ್ರಜಾಸತ್ತಾತ್ಮಕ ಸಂಸ್ಥೆಯಾಗಿ ಸಂಸತ್ ದೀರ್ಘ ಕಾಲ ಉಳಿಯಲಾರದು.’’

ಮೋದಿ ಭಕ್ತರು ಅಥವಾ ಮಾರ್ಗ ಮುಖ್ಯವಲ್ಲ ಗುರಿ ಮುಖ್ಯವೆಂದು ನಂಬುವವರು ಪ್ರಜಾಸತ್ತಾತ್ಮಕ ಕ್ರಮಗಳ ಈ ಉಲ್ಲಂಘನೆಗಳನ್ನು ನಿರ್ಲಕ್ಷಿಸಿ ಕೃಷಿ ಮಸೂದೆಗಳನ್ನು ‘ಐತಿಹಾಸಿಕ’ವೆಂದು ಸ್ವಾಗತಿಸಿದ್ದಾರೆ. ಇನ್ನೊಂದೆಡೆ ಪ್ರಜ್ಞಾವಂತರು ಹಾಗೂ ಇತಿಹಾಸದ ಆಳವಾದ ತಿಳುವಳಿಕೆ ಉಳ್ಳವರು ಸಂಸತ್ ಬಗ್ಗೆ ತೋರುವ ಇಂತಹ ತಿರಸ್ಕಾರದ ಕುರಿತು ನಮ್ಮನ್ನು ಎಚ್ಚರಿಸಿದ್ದಾರೆ. ಉದಾಹರಣೆಗೆ ಹಿರಿಯ ನ್ಯಾಯವಾದಿ ಅರವಿಂದ ದಾತಾರ್ ರವರ ಮಾತುಗಳು ಇವು: ‘‘ಕೃಷಿ ಮಸೂದೆಗಳನ್ನು ಸಂಸತ್ ಮೂಲಕ ಬಲವಂತವಾಗಿ ಅಂಗೀಕರಿಸದೆ ಇರುತ್ತಿದ್ದಲ್ಲಿ ಅಪಾರವಾದ ಆರ್ಥಿಕ ನಷ್ಟವನ್ನು ಹಾಗೂ ದಿಲ್ಲಿಯ ಸುತ್ತಮುತ್ತ ಸಾಮಾನ್ಯ ಜೀವನ ಅಸ್ತವ್ಯಸ್ತವಾಗುವುದನ್ನು ತಡೆಯಬಹುದಾಗಿತ್ತು.’’ ಕೇಂದ್ರ ಸಚಿವರು ನಗರ ನಕ್ಸಲರ, ಖಾಲಿಸ್ತಾನಿಗಳ ಹಾಗೂ ವಿಪಕ್ಷಗಳ ಮೇಲೆ ತಪ್ಪುಹೊರಿಸಿ ಅವುಗಳನ್ನು ದೂರಬಹುದು. ಆದರೆ ದಾತಾರ್ ಹೇಳುವಂತೆ, ‘‘ಸಂಸತ್ತಿನ ಉಭಯ ಸದನಗಳಲ್ಲಿ ರೈತ ಮಸೂದೆಗಳನ್ನು ಅತ್ಯಂತ ಅವಸರದಲ್ಲಿ ಅಂಗೀಕರಿಸಿದ್ದೇ ಸದ್ಯದ ಬಿಕ್ಕಟ್ಟಿಗೆ ಕಾರಣ. ಈ ಬಿಕ್ಕಟ್ಟು ಕೊರೋನ ಸಾಂಕ್ರಾಮಿಕ ಉಂಟು ಮಾಡಿರುವ ದೇಶದ ಆರ್ಥಿಕ ಸಂಕಷ್ಟಗಳನ್ನು ಇನ್ನಷ್ಟು ಉಲ್ಬಣಗೊಳಿಸದೆ ಇರುವುದಿಲ್ಲ.’’

ತೀರಾ ಇತ್ತೀಚೆಗೆ, ಕೇಂದ್ರ ಗೃಹಸಚಿವರು ಅಸ್ಸಾಂ ಮತ್ತು ಪಶ್ಚಿಮ ಬಂಗಾಳದಲ್ಲಿ ಬೃಹತ್ ರಾಜಕೀಯ ರ್ಯಾಲಿಗಳಲ್ಲಿ ಭಾಷಣ ಮಾಡುತ್ತಿರುವಾಗಲೇ ಕೊರೋನ ಸಾಂಕ್ರಾಮಿಕದ ನೆಪವೊಡ್ಡಿ ಸರಕಾರ ಸಂಸತ್ತಿನ ಚಳಿಗಾಲದ ಅಧಿವೇಶನವನ್ನು ರದ್ದುಗೊಳಿಸಿತು. ಗುಜರಾತ್ ನ ಮುಖ್ಯಮಂತ್ರಿಯಾಗಿ ನರೇಂದ್ರ ಮೋದಿಯವರು ನಾನು ‘ಸಹಕಾರಿ ಫೆಡರಲಿಸಂ’ನಲ್ಲಿ ನಂಬಿಕೆ ಇರುವವನೆಂದು ಹೇಳಿದ್ದರು. ಆದರೆ ದೇಶದ ಪ್ರಧಾನಿಯಾಗಿ ಅವರು ರಾಜ್ಯಗಳ ಹಕ್ಕುಗಳನ್ನು ಹಾಗೂ ಜವಾಬ್ದಾರಿಗಳನ್ನು ನಿರ್ದಯವಾಗಿ ಮೊಟಕುಗೊಳಿಸಿದ್ದಾರೆ. ಇಲ್ಲಿ ಕೂಡ ಕೃಷಿ ಮಸೂದೆ ಒಂದು ಉದಾಹರಣೆಯಾಗಬಹುದು. ಹರೀಶ್ ದಾಮೋದರನ್ ಹೇಳುವಂತೆ, ಸಂವಿಧಾನವು ‘ಕೃಷಿ’ ಹಾಗೂ ‘ಮಾರುಕಟ್ಟೆ’ಗಳನ್ನು ರಾಜ್ಯಗಳ ಯಾದಿಯಲ್ಲಿ ಇಟ್ಟಿರುವುದರಿಂದ ಈ ವಿಷಯಗಳಲ್ಲಿ ಕೇಂದ್ರ ಸರಕಾರವು ರಾಜ್ಯಗಳನ್ನು ಪ್ರೋತ್ಸಾಹಿಸಬಹುದು, ಒತ್ತಾಯಿಸಬಹುದು. ಆದರೆ ಅದು ತಾನೇ ಶಾಸನಗಳನ್ನು ರಚಿಸುವಂತಿಲ್ಲ. ಆದಾಗ್ಯೂ ರಾಜ್ಯಗಳ ಯಾದಿಯಲ್ಲಿರುವ ವ್ಯಾಪಾರ, ವಾಣಿಜ್ಯ ವಿಷಯಗಳನ್ನು ತಪ್ಪಾಗಿ ಅರ್ಥೈಸಿ ಕೇಂದ್ರ ಸರಕಾರವು ಈ ಮಸೂದೆಗಳನ್ನು ಸಂಸತ್ತಿನಲ್ಲಿ ಅಂಗೀಕಾರವಾಗುವಂತೆ ಮಾಡಿದೆ. ಫೆಡರಲ್ ತತ್ವದ ಮೇಲೆ ಕೊರೋನ ಸಾಂಕ್ರಾಮಿಕದ ಅವಧಿಯಲ್ಲಿ ಇನ್ನಷ್ಟು ಹೆಚ್ಚಿನ ದಾಳಿ ನಡೆದಿದೆ, ಗುರಿಯಾಗಿದೆ.

ವಸಾಹತುಶಾಹಿ ಯುಗದ ಕಾನೂನುಗಳ ಹಾಗೂ ರಾಷ್ಟ್ರೀಯ ಗಂಡಾಂತರ ನಿರ್ವಹಣೆ ಕಾಯ್ದೆಯ ಮೂಲಕ ಕೇಂದ್ರ ಸರಕಾರದ ಅಧಿಕಾರಗಳನ್ನು ಇನ್ನಷ್ಟು ಬಲಪಡಿಸಲಾಗಿದೆ. ಅದೇ ವೇಳೆ ವಿಪಕ್ಷಗಳ ಸರಕಾರಗಳಿರುವ ರಾಜ್ಯಗಳಲ್ಲಿ ಲಂಚ, ಒತ್ತಾಸೆ ಅಥವಾ ಬೆದರಿಕೆಯ ಮೂಲಕ ಶಾಸಕರನ್ನು ಬಿಜೆಪಿಗೆ ಸೇರುವಂತೆ ಮಾಡುವ ಮೂಲಕ ಅಲ್ಲಿಯ ರಾಜ್ಯ ಸರಕಾರಗಳನ್ನು ದುರ್ಬಲಗೊಳಿಸಲಾಗಿದೆ. ಮಧ್ಯಪ್ರದೇಶದಲ್ಲಿ ಹೊಸ ಸರಕಾರದ ಪ್ರತಿಜ್ಞಾವಿಧಿ ಮುಗಿಯುವವರೆಗೆ ಕಾದು ನಾಲ್ಕು ಗಂಟೆಗಳ ಅವಧಿಯಲ್ಲಿ ಒಂದು ಕರಾಳ ಲಾಕ್‌ಡೌನ್ ಘೋಷಿಸಿರುವುದು ಬಿಜೆಪಿ ಅಧಿಕಾರಕ್ಕೆ ಎಷ್ಟೊಂದು ಮಹತ್ವ ನೀಡುತ್ತದೆ ಮತ್ತು ಭಾರತೀಯರ ಆರೋಗ್ಯಕ್ಕೆ ಎಷ್ಟೊಂದು ಕಡಿಮೆ ಕಾಳಜಿ ತೋರಿಸುತ್ತದೆ ಎಂಬುದನ್ನು ಸ್ಪಷ್ಟಪಡಿಸಿದೆ.

ಫೆಡರಲ್ ತತ್ವದ ಮೇಲೆ ತಾನು ನಡೆಸಿದ ದಾಳಿಯಲ್ಲಿ, ಬಿಜೆಪಿ ನಿರ್ದಿಷ್ಟವಾಗಿ ಎರಡು ರಾಜ್ಯಗಳನ್ನು ಗುರಿಮಾಡಿದೆ: ಪಶ್ಚಿಮ ಬಂಗಾಳ ಮತ್ತು ಮಹಾರಾಷ್ಟ್ರ. ಇಲ್ಲಿ ಸಂವಿಧಾನಕ್ಕಿಂತ ಹಿಂದುತ್ವಕ್ಕೆ ಹೆಚ್ಚು ನಿಷ್ಠರಾಗಿರುವ ರಾಜ್ಯಪಾಲರುಗಳು ಹಾಗೂ ಕಾನೂನಿಗಿಂತ ತಮ್ಮ ಸಚಿವರಿಗೆ ಹೆಚ್ಚು ನಿಷ್ಠರಾಗಿರುವ ವಿಚಾರಣಾ ಏಜೆನ್ಸಿಗಳನ್ನು ಆಡಳಿತ ನಡೆಸುತ್ತಿರುವ ಸರಕಾರಗಳಿಗೆ ಕಿರುಕುಳ ನೀಡಲು ಮೋದಿ-ಶಾ ಆಡಳಿತವು ಬಳಸಿಕೊಂಡಿದೆ. ಈ ಬೆದರಿಸುವ ಕೆಲಸ ಎಷ್ಟೊಂದು ತೀವ್ರವಾಗಿದೆ ಎಂದರೆ ಬಿಜೆಪಿಯ ದೀರ್ಘಕಾಲದ ಮಿತ್ರ ಹಾಗೂ ಒಂದು ಕಾಲದ ಬಿಜೆಪಿ ನಿಷ್ಠ ಪಕ್ಷವಾಗಿರುವ ಸ್ವತಃ ಶಿವಸೇನೆ ಹೀಗೆ ಹೇಳಬೇಕಾಗಿ ಬಂತು: ‘‘ರಾಜ್ಯ ಸರಕಾರಗಳನ್ನು ಅಸ್ಥಿರಗೊಳಿಸುವಲ್ಲಿ ನಮ್ಮ ಪ್ರಧಾನಿ ಒಂದು ವಿಶೇಷ ಆಸಕ್ತಿ ತೋರಿಸುವುದರಿಂದ ಏನಾದೀತು? ಪ್ರಧಾನಿ ದೇಶಕ್ಕೆ ಸೇರಿದವರಾಗಿದ್ದಾರೆ. ದೇಶವು ಒಂದು ಒಕ್ಕೂಟವಾಗಿ (ಫೆಡರೇಶನ್) ಇದೆ. ಬಿಜೆಪಿ ಸರಕಾರಗಳಿಲ್ಲದ ರಾಜ್ಯಗಳು ಕೂಡ ರಾಷ್ಟ್ರೀಯ ಹಿತಾಸಕ್ತಿಗಳ ಬಗ್ಗೆ ಮಾತನಾಡುತ್ತವೆ. ಆದರೆ ಈಗ ಈ ಭಾವನೆಯನ್ನು ಕೊಲ್ಲಲಾಗುತ್ತಿದೆ.’’

ಗುಜರಾತಿನ ಮುಖ್ಯಮಂತ್ರಿಯಾಗಿದ್ದ ವರ್ಷಗಳಲ್ಲಿ ನರೇಂದ್ರ ಮೋದಿಯವರು ಅತ್ಯಂತ ಪಕ್ಷಾತೀತವಾದ ನಾಗರಿಕ ಸಮಾಜ ಸಂಸ್ಥೆಗಳ ಬಗ್ಗೆ ತೀವ್ರ ಅಪನಂಬಿಕೆ ಹೊಂದಿದವರಾಗಿದ್ದರು. ಈ ಅಪನಂಬಿಕೆಯನ್ನು ಅವರು ದಿಲ್ಲಿಗೂ ಕೊಂಡುಹೋಗಿದ್ದಾರೆ. 2020ರ ವರ್ಷದಲ್ಲಿ ಎನ್‌ಜಿಒಗಳ ಮೇಲೆ ಇರುವ ನಿರ್ಬಂಧಗಳನ್ನು ಇನ್ನಷ್ಟು ಬಿಗಿಗೊಳಿಸಲಾಯಿತು. ಹೊಸ ವಿದೇಶಿ ದೇಣಿಗೆ (ನಿಯಂತ್ರಣ) ಕಾಯ್ದೆಯು ಭಾರತದಲ್ಲಿ ಎನ್‌ಜಿಒಗಳನ್ನು ಹತ್ತಿಕ್ಕುವ ಮೂಲಕ ಶಿಕ್ಷಣ, ಆರೋಗ್ಯ, ಜನರ ಜೀವನೋಪಾಯಗಳು, ಲಿಂಗ ನ್ಯಾಯ ಮತ್ತು ಪ್ರಜಾಪ್ರಭುತ್ವದ ಮೇಲೆ ದೂರಗಾಮಿ ಪರಿಣಾಮಗಳನ್ನು ಬೀರಲಿದೆ.

ಪ್ರಧಾನಿಯಾದ ಬಳಿಕದ ಆರುವರೆ ವರ್ಷಗಳಲ್ಲಿ ಒಂದೇ ಒಂದು ಪತ್ರಿಕಾಗೋಷ್ಠಿಯನ್ನು ಕೂಡ ನಡೆಸದಿರುವ ಅವರ ಕ್ರಮ ಸ್ವಂತವಾಗಿ ಆಲೋಚಿಸುವ ಪತ್ರಕರ್ತರನ್ನು ಅವರು ಯಾವತ್ತೂ ಇಷ್ಟಪಟ್ಟಿಲ್ಲವೆಂಬುದನ್ನು ತೋರಿಸುತ್ತದೆ. 2020ರ ವರ್ಷದಲ್ಲಿ ಭಾರತದಲ್ಲಿ ಪತ್ರಿಕೆಗಳ ಮೇಲಣ ದಾಳಿ ಮತ್ತಷ್ಟು ಹೆಚ್ಚಾಯಿತು. ಮಾರ್ಚ್ ತಿಂಗಳ ಅಂತ್ಯದಲ್ಲಿ ಲಾಕ್‌ಡೌನ್ ಘೋಷಿಸಿದ ನಂತರ ಮೊದಲ ಎರಡು ತಿಂಗಳುಗಳಲ್ಲಿ ಸುಮಾರು 55 ಮಂದಿ ಪತ್ರಕರ್ತರ ವಿರುದ್ಧ ಎಫ್‌ಐಆರ್ ಹೂಡಲಾಯಿತು. ದೈಹಿಕವಾಗಿ ಅವರನ್ನು ಬೆದರಿಸಲಾಯಿತು ಹಾಗೂ ಬಂಧಿಸಲಾಯಿತು. ಉತ್ತರಪ್ರದೇಶ ಜಮ್ಮು ಮತ್ತು ಕಾಶ್ಮೀರ ಹಾಗೂ ಹಿಮಾಚಲ ಪ್ರದೇಶಗಳಲ್ಲಿ ಪತ್ರಕರ್ತರ ಮೇಲೆ ಗರಿಷ್ಠ ಸಂಖ್ಯೆಯಲ್ಲಿ ದಾಳಿಗಳು ನಡೆದವು. ಇವೆಲ್ಲ ಬಿಜೆಪಿ ಆಡಳಿತವಿರುವ ಅಥವಾ ಬಿಜೆಪಿ ನಿಯಂತ್ರಿತ ರಾಜ್ಯಗಳು. ಫ್ರೀ ಸ್ಪೀಚ್ ಕಲೆಕ್ಟಿವ್‌ನ ಒಂದು ವರದಿಯ ಪ್ರಕಾರ, 2020 ಭಾರತದಲ್ಲಿ ಪತ್ರಕರ್ತರ ಪಾಲಿಗೆ ಒಂದು ಕೆಟ್ಟ ವರ್ಷವಾಗಿತ್ತು... ಪತ್ರಕರ್ತರ ಹತ್ಯೆ ಹಾಗೂ ಅವರ ಮೇಲಣ ದಾಳಿಗಳು ಎಣೆಯಿಲ್ಲದೆ ಮುಂದುವರಿದಿವೆ. ಮಾಧ್ಯಮಗಳ ಒಳಗಡೆಯೇ ಸೆಲ್ಫ್ -ಸೆನ್ಸಾರ್‌ಶಿಪ್ ಎಲ್ಲರಿಗೂ ತಿಳಿದ ಗುಟ್ಟಾಗಿತ್ತು; ಸರಕಾರವು ಮಾಧ್ಯಮ ನೀತಿಗಳ, ಆನ್‌ಲೈನ್ ಮೀಡಿಯಾಕ್ಕೆ ದೇಣಿಗೆ ಹಾಗೂ ಆಡಳಿತಾತ್ಮಕ ತಂತ್ರಗಳ ಮೂಲಕ ಮಾಧ್ಯಮಗಳ ಮೇಲೆ ಮತ್ತಷ್ಟು ನಿಯಂತ್ರಣ ಸಾಧಿಸಲು ಪ್ರಯತ್ನಿಸಿತು. ವಿಶ್ವ ಪತ್ರಿಕಾ ಸ್ವಾತಂತ್ರ್ಯ ಸೂಚ್ಯಂಕದಲ್ಲಿ ಭಾರತ ಈಗ 142ನೇ ಸ್ಥಾನದಲ್ಲಿದೆ. ಇದು ನೇಪಾಳ, ಅಫ್ಘಾನಿಸ್ತಾನ ಮತ್ತು ಶ್ರೀಲಂಕಾಗಿಂತಲೂ ಕೆಳಗಿನ ಸ್ಥಾನವಾಗಿದೆ.

ಸಂಸತ್ ಒಕ್ಕೂಟ ತತ್ವ, ನಾಗರಿಕ ಸಮಾಜ ಸಂಘಟನೆಗಳು ಮತ್ತು ಪತ್ರಿಕಾರಂಗದ ಮೇಲೆ ನಡೆದ ದಾಳಿಗಳಲ್ಲದೆ, 2020 ಭಾರತದ ಬೃಹತ್ ಹಾಗೂ ದುರ್ಬಲ ಮುಸ್ಲಿಂ ಅಲ್ಪಸಂಖ್ಯಾತ ಸಮುದಾಯವನ್ನು ಮತ್ತಷ್ಟು ದೂರವಿಡುವುದನ್ನು ಕೂಡ ಕಂಡಿದೆ. ದೂರೀಕರಿಸುವ ಪ್ರಯತ್ನದಲ್ಲಿ ಗೃಹಸಚಿವ ಅಮಿತ್ ಶಾರವರ ಕೈವಾಡವು ಬಿಜೆಪಿಯ ಪಶ್ಚಿಮ ಬಂಗಾಳದ ಚುನಾವಣಾ ಪ್ರಚಾರದಲ್ಲಿ ಮತ್ತು ದಿಲ್ಲಿ ದೊಂಬಿಗಳನ್ನು ಪೊಲೀಸರು ಪಕ್ಷಪಾತ ಧೋರಣೆಯಿಂದ ನಿಭಾಯಿಸಿದ್ದರಲ್ಲಿ ಅತ್ಯಂತ ಸ್ಪಷ್ಟವಾಗಿ ಕಾಣಿಸುತ್ತದೆ. ಅಲಿಗಡ ಮುಸ್ಲಿಂ ವಿಶ್ವವಿದ್ಯಾನಿಲಯದಲ್ಲಿ ಇತ್ತೀಚೆಗೆ ಪ್ರಧಾನಿಯವರು ಭಾಷಣ ಮಾಡಿದರೂ ಬಿಜೆಪಿ ನಿಷ್ಠರ ಆಳವಾದ, ಒಳ ಮನಸ್ಸಿನ ಭಾವನೆಗಳನ್ನು, ಆದಿತ್ಯನಾಥರ ಬಹುಸಂಖ್ಯಾತವಾದ (ಮೆಜಾರಿಟೇರಿಯನಿಸಂ) ಪ್ರತಿನಿಧಿಸುತ್ತದೆ ಅಲ್ಲದೆ ಬೇರೇನೂ ಅಲ್ಲ.

ಕೃಷಿ ಮತ್ತು ಕಾರ್ಮಿಕರಿಗೆ ಸಂಬಂಧಿಸಿದ ಹೊಸ ಕಾನೂನು ಗಳನ್ನು ತಂದಾಗ ಮುಕ್ತಮಾರುಕಟ್ಟೆ ಅಂಕಣಕಾರರು ‘‘ಬಿಕ್ಕಟ್ಟು ವ್ಯರ್ಥವಾಗಲಿಲ್ಲ’’ ಎಂದು ಕಿರುಚುತ್ತಾ ಅವುಗಳನ್ನು ಮೆಚ್ಚಿ ಚಪ್ಪಾಳೆಯೊಂದಿಗೆ ಸ್ವಾಗತಿಸಿದರು. ಆ ಸ್ವಾಗತ, ಕರತಾಡನ ಸುಲಭವಾಗಿ ನಂಬಿ ಬಿಡುವಂತಹದ್ದಾಗಿತ್ತು. ಯಾಕೆಂದರೆ ಏರುಗತಿಯ ಆರ್ಥಿಕ ಬೆಳೆವಣಿಗೆಗೆ ಸಮಾನರ ನಡುವಣ ರಂಗ ಮತ್ತು ಕಾನೂನು ವ್ಯವಸ್ಥೆ (ರೂಲ್ ಆಫ್ ಲಾ) ಎರಡೂ ಬೇಕಾಗುತ್ತದೆ. ಮೋದಿ-ಶಾ ಆಡಳಿತದಲ್ಲಿ ಇವೆರಡೂ ಇಲ್ಲ, ಇರಲು ಸಾಧ್ಯವೂ ಇಲ್ಲ. ಚುನಾವಣಾ ಬಾಂಡ್ ಸ್ಕೀಮ್‌ಗೆ ಹಣ ನೀಡುವವರಿಗೆ ಸಿಗದಂತಹ ಆಯ್ಕೆಯ ಅವಕಾಶ ಹಣ ಹೂಡುವ ಬಂಡವಾಳ ಶಾಹಿಗಳಿಗೆ ದೊರಕುತ್ತದೆ. ಇತರ ಪಕ್ಷಗಳಿಂದ ಬಿಜೆಪಿಗೆ ಪಕ್ಷಾಂತರ ಮಾಡುವ ರಾಜಕಾರಣಿಗಳ ವಿರುದ್ಧ ಇರುವ ಎಲ್ಲ ಮೊಕದ್ದಮೆಗಳನ್ನು ಕೈಬಿಡಲಾಗುತ್ತದೆ. ಪೊಲೀಸರು, ಅಧಿಕಾರಿಗಳು ಹಾಗೂ ನ್ಯಾಯಾಲಯ ಕೂಡ ಕಾನೂನಿಗಿಂತ ಮಿಗಿಲಾಗಿ ತಮ್ಮ ರಾಜಕೀಯ ಯಜಮಾನರ ಹಿತಾಸಕ್ತಿಗಳಿಗೆ ಪೂರಕವಾಗಿ ಕೆಲಸ ಮಾಡುತ್ತವೆ.

ಸರಕಾರ ಮತ್ತು ಖಾಸಗಿ ರಂಗವನ್ನು ಉತ್ತರದಾಯಿಯಾಗಿ ಮಾಡಬೇಕಾದರೆ ಅದಕ್ಕೆ ಮುಕ್ತ ಪತ್ರಿಕೆಗಳ, ಸಂಸತ್‌ನಲ್ಲಿ ಅರ್ಥಪೂರ್ಣ ಚರ್ಚೆಯ ಹಾಗೂ ನಾಗರಿಕ ಸಮಾಜ ಸಂಘಟನೆಗಳ ಪಾರದರ್ಶಕ ಕಣ್ಗಾವಲು ಬೇಕಾಗುತ್ತದೆ. 2020ರಲ್ಲಿ ನಡೆದ ವಿದ್ಯಮಾನಗಳನ್ನು ಗಮನಿಸಿದರೆ ಹಿಂದಿಗಿಂತಲೂ ಇಂದು ಇವುಗಳು ಕಡಿಮೆ ಅಸ್ತಿತ್ವದಲ್ಲಿವೆ. ಅಂತಿಮವಾಗಿ ರಾಷ್ಟ್ರ, ಸರಕಾರ ಮತ್ತು ಆಳುವ ಪಕ್ಷ ಹಿಂದೂಗಳಲ್ಲದವರು ಹಿಂದೂಗಳಿಗಿಂತ ಕೀಳು ಎಂದು ಪರಿಗಣಿಸಿದಲ್ಲಿ ಸಾಮಾಜಿಕ ಸಾಮರಸ್ಯ ಸಾಧ್ಯವಾಗಲಾರದು.
                

Writer - ರಾಮಚಂದ್ರ ಗುಹಾ

contributor

Editor - ರಾಮಚಂದ್ರ ಗುಹಾ

contributor

Similar News