ಯು.ಕೆ.ಯಿಂದ ವಿಮಾನ ಸಂಚಾರ ಪುನರ್ ಆರಂಭ: ಜ.10ಕ್ಕೆ ಬೆಂಗಳೂರಿಗೆ ಆಗಮಿಸಲಿರುವ ಮೊದಲ ವಿಮಾನ

Update: 2021-01-09 15:18 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ಜ.9: ಕೊರೋನ ರೂಪಾಂತರಿ ವೈರಸ್ ಹರಡುವ ಭೀತಿಯಿಂದ ಕೆಲವು ದಿನಗಳ ಹಿಂದೆ ಸ್ಥಗಿತಗೊಂಡಿದ್ದ ಯು.ಕೆ.ಯಿಂದ ಬರುವ ವಿಮಾನಗಳ ಸಂಚಾರ ಪುನರ್ ಆರಂಭಗೊಂಡಿದ್ದು, ರವಿವಾರ(ಜ.10) ಮುಂಜಾನೆ 4 ಗಂಟೆ ಸುಮಾರಿಗೆ ಯು.ಕೆ.ಯಿಂದ ಸುಮಾರು 330 ಪ್ರಯಾಣಿಕರನ್ನು ಒಳಗೊಂಡ ಮೊದಲ ವಿಮಾನ ಬೆಂಗಳೂರು ಅಂತರ್ ರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತಲುಪಲಿದೆ.

ಈ ಹಿನ್ನೆಲೆಯಲ್ಲಿ ಶನಿವಾರ ಪ್ರಯಾಣಿಕರ ಆರೋಗ್ಯ ತಪಾಸಣೆಗಾಗಿ ಕೈಗೊಂಡಿರುವ ಸಿದ್ಧತೆಗಳ ಕುರಿತು ವಿಮಾನ ನಿಲ್ದಾಣದಲ್ಲಿ ಪರಿಶೀಲನೆ ನಡೆಸಿದ ಬಳಿಕ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಸುದ್ದಿಗಾರರೊಂದಿಗೆ ಮಾತನಾಡಿದರು.

ಯು.ಕೆ.ಯಿಂದ ಬರುವ ಪ್ರಯಾಣಿಕರು ತಮ್ಮೊಂದಿಗೆ ಕೋವಿಡ್ ಪರೀಕ್ಷೆಯ ವರದಿಯನ್ನು ತೆಗೆದುಕೊಂಡು ಬಂದಿದ್ದರೂ ಕೂಡ ಇಲ್ಲಿ ಪುನಃ ಅವರಿಗೆ ಆರ್‍ಟಿಪಿಸಿಆರ್ ಪರೀಕ್ಷೆ ಮಾಡುವುದನ್ನು ಕಡ್ಡಾಯಗೊಳಿಸಲಾಗಿದೆ. ಬೆಂಗಳೂರು ಅಂತರ್‍ರಾಷ್ಟ್ರೀಯ ವಿಮಾನ ನಿಲ್ದಾಣ ಪ್ರಾಧಿಕಾರದವರು ಹಾಗೂ ಆರೋಗ್ಯ ಇಲಾಖೆಯ ಅಧಿಕಾರಿಗಳು ಇಲ್ಲಿ ಪ್ರಯಾಣಿಕರ ಆರೋಗ್ಯ ತಪಾಸಣೆಗಾಗಿ ಉತ್ತಮವಾದ ವ್ಯವಸ್ಥೆಯನ್ನು ಮಾಡಿದ್ದಾರೆ ಎಂದು ಅವರು ಹೇಳಿದರು.

ಆರ್‍ಟಿಪಿಸಿಆರ್ ಪರೀಕ್ಷೆಯ ಫಲಿತಾಂಶ ಬರಲು 3 ರಿಂದ 4 ಗಂಟೆ ಸಮಯ ಬೇಕಾಗುತ್ತದೆ. ವರದಿಯಲ್ಲಿ ನೆಗೆಟಿವ್ ಬಂದರೆ ಅಂತಹ ಪ್ರಯಾಣಿಕರು ವಿಮಾನ ನಿಲ್ದಾಣದಿಂದ ಹೊರಗಡೆ ಹೋಗಬಹುದು. ಯು.ಕೆ. ಹೊರತುಪಡಿಸಿ ಬೇರೆ ದೇಶಗಳಿಂದ ಬರುವ ಪ್ರಯಾಣಿಕರು ಇಲ್ಲಿಗೆ ಬರುವ 72 ಗಂಟೆ ಮುಂಚಿತವಾಗಿ ಕೋವಿಡ್ ಪರೀಕ್ಷೆಯನ್ನು ಮಾಡಿಸಿಕೊಂಡಿರುವ ವರದಿಯನ್ನು ಪ್ರದರ್ಶಿಸಿದರೆ, ಅಂತಹ ಪ್ರಯಾಣಿಕರ ಅಗತ್ಯ ವಿವರಗಳನ್ನು ಪಡೆದುಕೊಂಡು ಅವರನ್ನು ಕಳುಹಿಸಿಕೊಡಲಾಗುವುದು ಎಂದು ಸುಧಾಕರ್ ತಿಳಿಸಿದರು.

ಯಾರಾದರೂ ಪ್ರಯಾಣಿಕರು ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳದೆ ಪ್ರಯಾಣ ಮಾಡಿರುವುದು ಕಂಡು ಬಂದರೆ, ಅಂತಹವರಿಗೆ ವಿಮಾನ ನಿಲ್ದಾಣದಲ್ಲೆ ಉಚಿತವಾಗಿ ಸರಕಾರದ ವತಿಯಿಂದ ಪರೀಕ್ಷೆ ಮಾಡಿಸಲಾಗುವುದು. ಕೋವಿಡ್ ಪಾಸಿಟಿವ್ ಬರುವವರನ್ನು ಸಾಂಸ್ಥಿಕ ಕ್ವಾರಂಟೈನ್‍ಗೆ ಒಳಪಡಿಸಲಾಗುವುದು. ಸರಕಾರದಿಂದ ನಿಗದಿಗೊಳಿಸಿರುವ ಆಸ್ಪತ್ರೆಗಳಿಗೆ ಅಂತಹವರನ್ನು ದಾಖಲಿಸಲಾಗುವುದು ಎಂದು ಅವರು ಹೇಳಿದರು.

ಐಸಿಎಂಆರ್ ಮೂಲಕ ಅನುಮೋದನೆ ಪಡೆದುಕೊಂಡಿರುವ ಖಾಸಗಿ ಸಂಸ್ಥೆಯೊಂದು ಕೇವಲ 15 ರಿಂದ 20 ನಿಮಿಷಗಳಲ್ಲಿ ಆರ್‍ಟಿಪಿಸಿಆರ್ ಪರೀಕ್ಷೆಯ ಫಲಿತಾಂಶ ನೀಡುವುದಾಗಿ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ. ಕ್ಷಿಪ್ರ ಗತಿಯಲ್ಲಿ ವರದಿ ನೀಡಲು 4500 ರೂ.ಶುಲ್ಕ ನಿಗದಿಗೊಳಿಸಿದ್ದಾರೆ. ಆದರೆ, ಈ ಬಗ್ಗೆ ಇನ್ನೂ ನಾವು ಅನುಮೋದನೆ ನೀಡಿಲ್ಲ ಎಂದು ಸುಧಾಕರ್ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News