ಮೂತ್ರಕೋಶ ನೋವು: ಲಕ್ಷಣಗಳು ಮತ್ತು ಕಾರಣಗಳು

Update: 2021-01-09 18:36 GMT

ಮೂತ್ರಕೋಶವು ನಮ್ಮ ಶರೀರದ ಪ್ರಮುಖ ಅಂಗಗಳಲ್ಲೊಂದಾಗಿದ್ದು,ಮೂತ್ರವಿಸರ್ಜನೆಯ ಮುಖ್ಯ ಕಾರ್ಯವನ್ನು ನಿರ್ವಹಿಸುತ್ತದೆ. ಇದು ಅಸ್ಥಿಕುಹರದ ಮಧ್ಯದಲ್ಲಿರುವ ಪೊಳ್ಳಾದ ಬಲೂನ್ ಆಕಾರದ ಸ್ನಾಯುವಾಗಿದೆ. ಮೂತ್ರ ತುಂಬಿದಾಗ ಈ ಕೋಶವು ಹಿಗ್ಗುತ್ತದೆ ಮತ್ತು ಮೂತ್ರವು ಖಾಲಿಯಾದಾಗ ಸಂಕುಚಿತಗೊಳ್ಳುತ್ತದೆ. ಮೂತ್ರ ವಿಸರ್ಜನಾ ನಾಳದ ಮೂಲಕ ಮೂತ್ರವು ವಿಸರ್ಜನೆಗೊಳ್ಳುವ ಮುನ್ನ ಮೂತ್ರಪಿಂಡಗಳಿಂದ ಮೂತ್ರನಾಳದ ಮೂಲಕ ಬರುವ ಮೂತ್ರವು ಈ ಕೋಶದಲ್ಲಿ ಸಂಗ್ರಹವಾಗಿರುತ್ತದೆ.

ಮೂತ್ರಪಿಂಡ ನೋವು ಪುರುಷರು ಮತ್ತು ಮಹಿಳೆಯರಲ್ಲಿ ಸಾಮಾನ್ಯವಾಗಿದ್ದರೂ,ಕಾರಣಗಳು ಮಾತ್ರ ವಿಭಿನ್ನವಾಗಿರುತ್ತವೆ. ಕಾರಣವನ್ನು ಅವಲಂಬಿಸಿ ನೋವು ಸೌಮ್ಯ ಸ್ವರೂಪದ್ದಾಗಿರಬಹುದು ಅಥವಾ ತೀವ್ರವೂ ಆಗಿರಬಹುದು.

ಮೂತ್ರಕೋಶ ನೋವಿನ ಲಕ್ಷಣಗಳು

ಮೂತ್ರಪಿಂಡ ನೋವಿನ ಲಕ್ಷಣಗಳೇ ಕಾಯಿಲೆಗಳಲ್ಲ ಮತ್ತು ಇವು ಇನ್ನಷ್ಟು ಸೋಂಕಿಗೆ ಕಾರಣವಾಗಬಹುದಾದ್ದರಿಂದ ರೋಗಿಗೆ ಇಂತಹ ಲಕ್ಷಣಗಳ ಅನುಭವವಾದಾಗ ಅವುಗಳನ್ನು ಎಚ್ಚರಿಕೆಯಿಂದ ಗಮನಿಸಬೇಕು.

* ಮೂತ್ರ ವಿಸರ್ಜನೆಗೆ ಕಷ್ಟ

ರೋಗಿಗೆ ಮೂತ್ರ ವಿಸರ್ಜನೆ ಮಾಡಲು ಕಷ್ಟವಾಗುವುದು ಅಥವಾ ಸಾಧ್ಯವಾಗದಿರುವುದು ಈ ನೋವಿನ ಅತ್ಯಂತ ಸಾಮಾನ್ಯ ಲಕ್ಷಣವಾಗಿದೆ. ರೋಗಿಯು ದೀರ್ಘ ಸಮಯದವರೆಗೆ ಮೂತ್ರವನ್ನು ವಿಸರ್ಜಿಸದಿದ್ದಾಗ ಮೂತ್ರಕೋಶವು ವಿಸ್ತರಿಸುತ್ತದೆ ಮತ್ತು ಹೊಟ್ಟೆಯ ಕೆಳಭಾಗಗಳಲ್ಲಿ ನೋವು ಆರಂಭಗೊಳ್ಳುತ್ತದೆ. ನೋವು ಸೌಮ್ಯದಿಂದ ತೀವ್ರ ಸ್ವರೂಪದ್ದಾಗಿರಬಹುದು.

* ದೀರ್ಘಕಾಲದ ಧಾರಣ

 ಹೊಟ್ಟೆಯ ಕೆಳಭಾಗವು ಪೂರ್ಣವಾಗಿ ತುಂಬಿಕೊಂಡಿರುವಂತೆ ಅನುಭವವಾಗುತ್ತದೆ. ಈ ಸ್ಥಿತಿಯನ್ನು ಕಡೆಗಣಿಸಿದರೆ ಅದು ಕ್ರಮೇಣ ಇನ್ನಷ್ಟು ಹೆಚ್ಚುತ್ತದೆ ಮತ್ತು ದೀರ್ಘಕಾಲಿಕ ಧಾರಣ ಅಥವಾ ಮೂತ್ರಕೋಶದಲ್ಲಿ ದೀರ್ಘಕಾಲ ಮೂತ್ರ ಸಂಗ್ರಹಗೊಳ್ಳಲು ಕಾರಣವಾಗುತ್ತದೆ. ರೋಗಿಯು ದೀರ್ಘಕಾಲದವರೆಗೆ ಮೂತ್ರವನ್ನು ವಿಸರ್ಜಿಸದಿದ್ದರೆ ಮತ್ತು ವಿಸರ್ಜಿಸುವ ಪ್ರಯತ್ನ ಮಾಡಿದಾಗ ಕೆಲವೇ ಹನಿಗಳಷ್ಟು ಮೂತ್ರ ಹೋಗುತ್ತದೆ. ರೋಗಿಗೆ ಎಲ್ಲವೂ ಸರಿಯಾಗಿದೆ ಎಂಬ ಭಾವನೆ ಉಂಟಾಗಬಹುದು,ಆದರೆ ಇದು ಮೂತ್ರಕೋಶವು ಸಂಪೂರ್ಣವಾಗಿ ತುಂಬಿಕೊಂಡಿದೆ ಎನ್ನುವುದನ್ನು ಸೂಚಿಸುತ್ತದೆ.

* ಹೊಟ್ಟೆಯ ಕೆಳಭಾಗದಲ್ಲಿ ನೋವು

ಮೂತ್ರಕೋಶವು ಪೂರ್ಣವಾಗಿ ತುಂಬಿಕೊಂಡಾಗಲೂ ಹೊಟ್ಟೆಯ ಕೆಳಭಾಗದಲ್ಲಿ ನೋವು ಉಂಟಾಗುತ್ತದೆ ಮತ್ತು ರೋಗಿಯು ಮೂತ್ರವನ್ನು ವಿಸರ್ಜಿಸಿದಾಗ ನೋವು ಕಡಿಮೆಯಾಗುತ್ತದೆ.

* ಉರಿ

ಇದು ವಿಭಿನ್ನ ಬಗೆಯ ನೋವು ಆಗಿದ್ದು,ವ್ಯಕ್ತಿಯು ಮೂತ್ರವನ್ನು ವಿಸರ್ಜಿಸುವಾಗ ತೀವ್ರ ಉರಿಯ ಅನುಭವವಾಗುತ್ತದೆ. ಇದು ತುಂಬ ಅಹಿತಕರ ಅನುಭವವಾಗಿದ್ದು,ಉರಿಯು ಕೆಲವು ನಿಮಿಷಗಳ ಕಾಲವೂ ಇರಬಹುದು.

ಯಾವುದೇ ನಿರ್ಧಾರಕ್ಕೆ ಬರುವ ಮುನ್ನ ವೈದ್ಯರು ಇತರ ಹಲವಾರು ಲಕ್ಷಣಗಳನ್ನೂ ಪರೀಕ್ಷಿಸುತ್ತಾರೆ. ರೋಗಿಗೆ ಮೂತ್ರಕೋಶದ ನೋವು ಇದ್ದಾಗ ಪದೇ ಪದೇ ಮೂತ್ರವಿಸರ್ಜನೆ,ತುರ್ತಾಗಿ ಮೂತ್ರ ವಿಸರ್ಜಿಸಬೇಕೆನ್ನುವ ತುಡಿತ,ಮೂತ್ರ ವಿಸರ್ಜನೆಯ ಮೇಲೆ ನಿಯಂತ್ರಣವಿಲ್ಲದಿರುವುದು,ಮೂತ್ರದಲ್ಲಿ ರಕ್ತ ಹೋಗುವುದು ಇವು ಇಂತಹ ಇತರ ಲಕ್ಷಣಗಳಾಗಿವೆ.

ಕಾರಣಗಳು

ಮೇಲೆ ಉಲ್ಲೇಖಿಸಿರುವ ಲಕ್ಷಣಗಳ ಆಧಾರದಲ್ಲಿ ವೈದ್ಯರು ಮೂತ್ರಕೋಶ ನೋವಿಗೆ ಕಾರಣವನ್ನು ನಿರ್ಧರಿಸುತ್ತಾರೆ ಮತ್ತು ಸೂಕ್ತ ಚಿಕಿತ್ಸೆಗಾಗಿ ಕೆಲವು ಪರೀಕ್ಷೆಗಳನ್ನು ನಡೆಸುತ್ತಾರೆ.

1. 60-70ರ ಪ್ರಾಯವಾದಾಗ ಪುರುಷರಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುವ ಸಮಸ್ಯೆಯೆಂದರೆ ಪ್ರಾಸ್ಟೇಟ್ ಗ್ರಂಥಿಯು ದೊಡ್ಡದಾಗುವುದು ಮತ್ತು ಇದು ಮೂತ್ರಕೋಶ ನೋವಿಗೆ ಸಾಮಾನ್ಯ ಕಾರಣವಾಗಿದೆ. ಹೀಗಾಗಿ ವಯಸ್ಸಾದ ವ್ಯಕ್ತಿಗಳಲ್ಲಿ ಮೂತ್ರಕೋಶ ನೋವು ಕಾಣಿಸಿಕೊಂಡರೆ ವೈದ್ಯರು ಅದಕ್ಕೆ ಪ್ರಾಸ್ಟೇಟ್ ಗ್ರಂಥಿಯ ದೊಡ್ಡದಾಗುವಿಕೆಯು ಕಾರಣವಾಗಿದೆಯೇ ಎನ್ನುವುದನ್ನು ಮೊದಲು ತಪಾಸಣೆ ನಡೆಸುತ್ತಾರೆ.

2. ಮಹಿಳೆಯರಲ್ಲಿ ಮೂತ್ರಕೋಶವು ದುರ್ಬಲಗೊಂಡಿದ್ದರೆ ಅಥವಾ ಶ್ರೋಣಿಯ ಭಾಗದಲ್ಲಿ ಸ್ನಾಯು ಸೆಳೆತವುಂಟಾಗುತ್ತಿದ್ದರೆ ಮೂತ್ರಕೋಶ ನೋವು ಕಾಣಿಸಿಕೊಳ್ಳುತ್ತದೆ. ಹೀಗಾಗಿ ಪುರುಷರು ಮತ್ತು ಮಹಿಳೆಯರಲ್ಲಿ ವಿಭಿನ್ನ ಕಾರಣಗಳು ಮೂತ್ರಕೋಶ ನೋವನ್ನುಂಟು ಮಾಡುತ್ತವೆ.

3. ಮೂತ್ರ ವಿಸರ್ಜನೆ ಮಾಡುವಾಗ ಉರಿಯುತ್ತಿದ್ದರೆ ಜ್ವರವೂ ಕಾಣಿಸಿಕೊಳ್ಳಬಹುದು. ಇವು ಮೂತ್ರಕೋಶದ ಸೋಂಕಿನ ಲಕ್ಷಣಗಳಾಗಿವೆ. ಇವು ರೋಗಿಯಲ್ಲಿ ಮೂತ್ರನಾಳ ಸೋಂಕು ಉಂಟಾಗಿದೆ ಎನ್ನುವುದನ್ನು ಸೂಚಿಸುತ್ತವೆ. ಈ ಲಕ್ಷಣಗಳು ಕಾಣಿಸಿಕೊಂಡಾಗ ರೋಗಿಯು ಮೂತ್ರಪರೀಕ್ಷೆಗೆ ಒಳಗಾಗಬೇಕಾಗುತ್ತದೆ.

4. ಕೆಲವೊಮ್ಮೆ ರೋಗಿಗೆ ನೋವು,ಉರಿಯ ಜೊತೆಗೆ ಮೂತ್ರದಲ್ಲಿ ರಕ್ತವೂ ಹೋಗಬಹುದು. ಇದು ಮೂತ್ರಕೋಶದಲ್ಲಿ ಕಲ್ಲುಗಳಿರುವ ಸಾಧ್ಯತೆಯನ್ನು ಸೂಚಿಸುತ್ತದೆ ಮತ್ತು ಈ ಕಲ್ಲುಗಳು ಮೂತ್ರಪಿಂಡಗಳಿಂದ ಮೂತ್ರಕೋಶದೊಳಗೆ ಬಿದ್ದಿರಬಹುದು. ಹೀಗಾಗಿ ಇದೂ ಮೂತ್ರಕೋಶದ ತೊಂದರೆಗಳಿಗೆ ಕಾರಣಗಳಲ್ಲಿ ಸೇರಿದೆ.

5. ಅಪರೂಪಕ್ಕೆ ಟ್ಯೂಮರ್‌ನಿಂದಲೂ ಮೂತ್ರಕೋಶ ನೋವು ಉಂಟಾಗಬಹುದು.

ಚಿಕಿತ್ಸೆ

 ಮೂತ್ರಕೋಶ ನೋವಿಗೆ ಕಾರಣವನ್ನು ಅವಲಂಬಿಸಿ ಪ್ರತಿರೋಗಿಗೂ ಚಿಕಿತ್ಸಾ ಕ್ರಮವು ವಿಭಿನ್ನವಾಗಿರುತ್ತದೆ. ಪ್ರಾಸ್ಟೇಟ್ ಗ್ರಂಥಿಯು ದೊಡ್ಡದಾಗಿ ಮೂತ್ರಕೋಶದಲ್ಲಿ ನೋವಾಗುತ್ತಿದ್ದರೆ ವೈದ್ಯರು ಔಷಧಿಗಳನ್ನು ಸೂಚಿಸುತ್ತಾರೆ. ಆದರೆ ಔಷಧಿಗಳು ಕೆಲಸ ಮಾಡದಿದ್ದರೆ ಶಸ್ತ್ರಚಿಕಿತ್ಸೆ ಅಗತ್ಯವಾಗಬಹುದು. ಮಹಿಳೆಯರಲ್ಲಿ ಮೂತ್ರಕೋಶವು ದುರ್ಬಲಗೊಂಡಿದ್ದರೆ ಅದು ಬಲಗೊಳ್ಳಲು ಔಷಧಿಗಳನ್ನು ನೀಡಲಾಗುತ್ತದೆ. ಕೆಲವೊಮ್ಮೆ ಮೂತ್ರಕೋಶದಿಂದ ಮೂತ್ರ ಹೊರಹೋಗುವ ದ್ವಾರವು ಬಿಗಿಯಾಗಿದ್ದರೆ ಸರಿಪಡಿಸಲು ಶಸ್ತ್ರಚಿಕಿತ್ಸೆ ಅಗತ್ಯವಾಗಬಹುದು. ಸೋಂಕಿನಿಂದ ಮೂತ್ರಕೋಶ ನೋವು ಉಂಟಾಗಿದ್ದರೆ ಆ್ಯಂಟಿಬಯಾಟಿಕ್‌ಗಳ ಮೂಲಕ ಅದನ್ನು ಗುಣಪಡಿಸಲಾಗುತ್ತದೆ. ಮೂತ್ರಕೋಶದಲ್ಲಿ ಕಲ್ಲುಗಳಿದ್ದರೆ ಶಸ್ತ್ರಚಿಕಿತ್ಸೆ ಮೂಲಕ ಅದನ್ನು ಹೊರತೆಗೆಯಬೇಕಾಗುತ್ತದೆ. ಟ್ಯೂಮರ್‌ನಿಂದ ಮೂತ್ರಕೋಶ ನೋವಿದ್ದರೆ ವೈದ್ಯರು ಬಯಾಪ್ಸಿಯನ್ನು ನಡೆಸಿ ಶಸ್ತ್ರಚಿಕಿತ್ಸೆ ಮೂಲಕ ಟ್ಯೂಮರ್‌ನ್ನು ತೆಗೆದುಹಾಕುತ್ತಾರೆ. ಹೀಗೆ ಚಿಕಿತ್ಸೆಯು ಮೂತ್ರಕೋಶ ನೋವಿಗೆ ಕಾರಣಗಳನ್ನು ಅವಲಂಬಿಸಿರುತ್ತದೆ.

ದ್ರವಗಳ ಹೆಚ್ಚಿನ ಸೇವನೆ, ಮಲಬದ್ಧತೆಯನ್ನುಂಟು ಮಾಡುವ ಆಹಾರಗಳಿಂದ ದೂರವಿರುವುದು,ಚಹಾ ಅಥವಾ ಕಾಫಿಯನ್ನು ಅತಿಯಾಗಿ ಸೇವಿಸದಿರುವುದು ಇವೇ ಮೊದಲಾದ ಜೀವನಶೈಲಿ ಬದಲಾವಣೆಗಳ ಮೂಲಕ ಮೂತ್ರಕೋಶ ನೋವು ಉಂಟಾಗದಂತೆ ಎಚ್ಚರಿಕೆಯನ್ನು ವಹಿಸಬಹುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News