ಕೋತಿಯಂತೆ ಮಾತಾಡುವ ಸಂಸದನಿಗೂ ಉತ್ತರಿಸುವೆ: ತೇಜಸ್ವಿ ಸೂರ್ಯ ವಿರುದ್ಧ ಬಡಗಲಪುರ ನಾಗೇಂದ್ರ ಕಿಡಿ

Update: 2021-01-10 11:56 GMT

ಬೆಂಗಳೂರು, ಜ.10: ಕೇಂದ್ರ ಸರಕಾರ ಜಾರಿಗೊಳಿಸಿರುವ ರೈತ ವಿರೋಧಿ ಕಾನೂನುಗಳ ಕುರಿತು ಯಾವುದೇ ರೀತಿಯ ವಾಸ್ತವಕತೆ ಗೊತ್ತಿಲ್ಲದೆ, ಕೋತಿಯಂತೆ ಮಾತನಾಡುವ ಬೆಂಗಳೂರಿನ ದಕ್ಷಿಣ ಕ್ಷೇತ್ರದ ಬಿಜೆಪಿ ಲೋಕಸಭಾ ಸದಸ್ಯನಿಗೂ ಉತ್ತರಿಸುತ್ತೇನೆ ಎಂದು ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಅವರು ತೇಜಸ್ವಿ ಸೂರ್ಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರವಿವಾರ ನಗರದ ಗಾಂಧಿ ಭವನದಲ್ಲಿ ಜಾಗೃತ ಕರ್ನಾಟಕ ಆಯೋಜಿಸಿದ್ದ, ರೈತ ವಿರೋಧಿ ಕಾಯ್ದೆಗಳು, ಕರ್ನಾಟಕಕ್ಕೆ ಆಗಿರುವ ಅನ್ಯಾಯಕ್ಕೇನು ಪ್ರತಿಕ್ರಿಯೆ? ಕುರಿತು ಹಮ್ಮಿಕೊಂಡಿದ್ದ ಸಂವಾದವನ್ನುದ್ದೇಶಿಸಿ ಅವರು ಮಾತನಾಡಿದರು.

ಕೃಷಿ ಕಾಯ್ದೆಗಳ ಪರವಾಗಿ ಮಾತನಾಡುವ ಭರದಲ್ಲಿ ಕೆಲವರು ರೈತರ ಹೋರಾಟದ ನೈತಿಕ ಶಕ್ತಿಯನ್ನು ಎದುರಿಸಲಾಗದೆ ಅಪಪ್ರಚಾರ ಮಾಡುತ್ತಿದ್ದಾರೆ. ಈ ಪೈಕಿ ಬೆಂಗಳೂರಿನ ದಕ್ಷಿಣ ಕ್ಷೇತ್ರದ ಬಿಜೆಪಿ ಲೋಕಸಭಾ ಸದಸ್ಯನೂ ಒಬ್ಬ. ಹಾಗಾಗಿ, ಕೇಂದ್ರ ಸರಕಾರದ ಕೃಷಿ ಕಾಯ್ದೆಗಳ ದುಷ್ಪರಿಣಾಮ ಕುರಿತು ಜ.16ರಂದು ಬೆಂಗಳೂರಿನ ಕೊಂಡಜ್ಜಿ ಬಸಪ್ಪ ಸಭಾಂಗಣದಲ್ಲಿ ಬಹಿರಂಗ ಸಂವಾದ ಹಮ್ಮಿಕೊಳ್ಳಲಾಗಿದ್ದು, ಕೃಷಿ ಕಾಯ್ದೆಗಳ ಪರವಾಗಿ ಮಾತನಾಡುವವರು ಈ ಬಹಿರಂಗ ಸಂವಾದದಲ್ಲಿ ಮುಕ್ತವಾಗಿ ಭಾಗವಹಿಸಬಹುದು ಎಂದು ಹೇಳಿದರು.

ಈ ಸಂವಾದದಲ್ಲಿ ಸ್ವರಾಜ್ ಇಂಡಿಯಾ ಮುಖ್ಯಸ್ಥ ಯೋಗೇಂದ್ರ ಯಾದವ್, ಪಂಜಾಬ್ ರಾಜ್ಯದ ರೈತ ಮುಖಂಡ ಪಾಲ್ಗೊಳ್ಳಲಿದ್ದಾರೆ ಎಂದ ಅವರು, ನೂತನ ಕೃಷಿ ಕಾನೂನುಗಳ ರದ್ದತಿಗಾಗಿ ಹೊಸದಿಲ್ಲಿ ಅನೇಕ ಗಡಿ ಪ್ರದೇಶಗಳಲ್ಲಿ ದೇಶದ ವಿವಿಧೆಡೆಗಳಿಂದ ಬಂದಿರುವ ಸಹಸ್ರಾರು ರೈತರು ಚಳಿ, ಮಳೆ ಎನ್ನದೇ ಟೆಂಟ್ ಗಳಲ್ಲಿ ವಾಸಿಸುತ್ತಾ ಕಳೆದ 40 ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದಾರೆ. ಆದರೆ, ಕೇಂದ್ರ ಸರಕಾರ ಇತ್ತ ಗಮನವೇ ನೀಡಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ದಿಲ್ಲಿಯಲ್ಲಿ ನಡೆಯುತ್ತಿರುವ ಚಳವಳಿ ಕೇವಲ ಪಂಜಾಬ್‍ಗೆ ಮಾತ್ರ ಸೀಮಿತ ಅಲ್ಲ, ಇದು ಭಾರತದ ಚಳವಳಿ. ಕೇಂದ್ರ ಸರಕಾರ ಉದ್ಯಮಿಗಳ ಹಿತ ಕಾಯಲು ಇಂಥ ಹೊಸ ಕಾನೂನುಗಳನ್ನು ತಂದಿದೆ. ಈ ಬಗ್ಗೆ ನಾವು ಜನಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕಾಗಿದೆ ಎಂದು ನಾಗೇಂದ್ರ ನುಡಿದರು.

ತಮಿಳು ವ್ಯವಸಾಯಿಗಳ್ ಸಂಘದ ಸೆಲ್ವಮುತ್ತು ಮಾತನಾಡಿ, ರೈತ ಬೆಳೆದ ಉತ್ಪನ್ನಗಳಿಗೆ ಉತ್ತಮ ಮಾರುಕಟ್ಟೆ, ಬೆಲೆ, ಸೌಕರ್ಯ ಕಲ್ಪಿಸಿ ಕೊಡುವ ಕಾನೂನು ಎಪಿಎಂಸಿಯನ್ನೇ ಬಲಿ ಪಡೆದುಕೊಳ್ಳುವ ದುರುದ್ದೇಶ ಹೊಂದಿರುವುದು ಇಲ್ಲಿ ಸ್ಪಷ್ಟವಾಗುತ್ತದೆ. ಇಲ್ಲಿಯವರೆಗೂ ಕೃಷಿ ಉತ್ಪನ್ನ ಮಾರಾಟ ಸಮಿತಿ ಮೇಲಿನ ಎಲ್ಲ ಕಾರ್ಯಗಳನ್ನು ನಿರ್ವಹಿಸುತ್ತಿತ್ತು. ಆದರೀಗ ಕಾರ್ಪೋರೇಟ್ ಸಂಸ್ಥೆಗಳೂ ಭಾಗಿಯಾಗಿರುವುದರಿಂದ ಎಪಿಎಂಸಿ ಮುಚ್ಚುವ ಸಂಭವವಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಜಾಗೃತ ಕರ್ನಾಟಕದ ಡಾ.ಎಚ್.ವಿ.ವಾಸು ಮಾತನಾಡಿ, ರಾಜ್ಯದಲ್ಲಿ ಬರ ಇದ್ದು, ರಾಜಸ್ತಾನಕ್ಕಿಂತ ಅತಿ ಹೆಚ್ಚಾಗಿ ನಮ್ಮ ತಾಲೂಕುಗಳಲ್ಲಿ ಪರಿಸ್ಥಿತಿ ಭೀಕರವಾಗಿದೆ. ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ, ಗ್ರಾಮೀಣ ಭಾಗದ ಕೃಷಿ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಬೇಕು ಎಂದು ಅವರು ಒತ್ತಾಯಿಸಿದರು.

ಸಂವಾದದಲ್ಲಿ ಆಂಧ್ರದ ರೈತು ಸ್ವರಾಜ್ಯ ವೇದಿಕೆಯ ಕಿರಣ್ ಕುಮಾರ್, ಹೈದರಾಬಾದ್ ಕರ್ನಾಟಕ ಹೋರಾಟ ಸಮಿತಿ ರಾಜ್ಯ ಉಪಾಧ್ಯಕ್ಷ ಡಾ.ರಝಾಕ್ ಉಸ್ತಾದ್ ಸೇರಿದಂತೆ ಪ್ರಮುಖರು ಪಾಲ್ಗೊಂಡಿದ್ದರು.

ಬೆಂಗಳೂರಿನಲ್ಲೂ ಟ್ರಾಕ್ಟರ್ ಪ್ರತಿಭಟನೆ

ಮೂರು ಕೃಷಿ ಕಾನೂನುಗಳ ವಿರುದ್ಧ ರಾಷ್ಟ್ರ ರಾಜಧಾನಿ ಹೊಸದಿಲ್ಲಿಯಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆ ಬೆಂಬಲಿಸಿ ಜ.26ರಂದು ಬೆಂಗಳೂರಿನಲ್ಲಿ ಟ್ರಾಕ್ಟರ್, ಟ್ರಾಲಿ ಮತ್ತು ಕೃಷಿ ಉಪಕರಣಗಳ ಜೊತೆ ಬೃಹತ್ ಪ್ರತಿಭಟನೆ ನಡೆಸಲಾಗುವುದು.

-ಬಡಗಲಪುರ ನಾಗೇಂದ್ರ, ರಾಜ್ಯಾಧ್ಯಕ್ಷ, ಕರ್ನಾಟಕ ರಾಜ್ಯ ರೈತ ಸಂಘ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News