×
Ad

ಸಂಸದ ಪಿ.ಸಿ.ಮೋಹನ್ ರಾಜೀನಾಮೆಗೆ ಆಗ್ರಹಿಸಿ ಕಾಂಗ್ರೆಸ್ ಧರಣಿ

Update: 2021-01-10 17:35 IST
ಸಂಸದ ಪಿ.ಸಿ.ಮೋಹನ್

ಬೆಂಗಳೂರು. ಆ.10: ಬಿಜೆಪಿ ಸಂಸದ ಪಿ.ಸಿ.ಮೋಹನ್ ಚುನಾವಣಾ ಆಯೋಗಕ್ಕೆ ಸಲ್ಲಿಸಿರುವ ಆಸ್ತಿ ವಿವರದಲ್ಲಿ ಆಸ್ತಿಗಳ ಮಾಹಿತಿ ಮರೆಮಾಚಿರುವ ಹಿನ್ನಲೆಯಲ್ಲಿ ಕೂಡಲೇ ಸಂಸತ್ ಸ್ಥಾನಕ್ಕೆ ರಾಜೀನಾಮೆ ನೀಡಿ, ತನಿಖೆಗೆ ಸಹಕರಿಸಬೇಕು ಎಂದು ಕಾಂಗ್ರೆಸ್ ಕಾರ್ಯಕರ್ತರು ಆಗ್ರಹಿಸಿದರು.

ರವಿವಾರ ನಗರದ ಕಾಂಗ್ರೆಸ್ ಭವನದ ಗಾಂಧಿ ಪ್ರತಿಮೆ ಬಳಿ ಪ್ರತಿಭಟನೆ ನಡೆಸಿದ ಕಾಂಗ್ರೆಸ್ ಪ್ರಚಾರ ಸಮಿತಿಯ ಬೆಂಗಳೂರು ಜಿಲ್ಲಾ ಮುಖಂಡರು, ಕಾರ್ಯಕರ್ತರು, ಬಿಜೆಪಿ ಪಕ್ಷ ಹಾಗೂ ಪಿ.ಸಿ.ಮೋಹನ್ ವಿರುದ್ಧ ಘೋಷಣೆ ಕೂಗಿ ಆಕ್ರೋಶ ಹೊರಹಾಕಿದರು.

ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಕಾಂಗ್ರೆಸ್ ಮುಖಂಡ ಎಸ್.ಮನೋಹರ್, ಬಿಜೆಪಿ ನಾಯಕರಿಗೆ ಭ್ರಷ್ಟಾಚಾರ ಡಿನೋಟಿಫಿಕೇಷನ್ ಪ್ರಕರಣಗಳು ಮಾಮೂಲಿಯಾಗಿದೆ ಜತೆಗೆ ವಾಮಮಾರ್ಗದಲ್ಲಿ ಅಧಿಕಾರ ಹಿಡಿಯುವ ಪ್ರವೃತ್ತಿಯನ್ನು ಬಿಜೆಪಿ ಕರಗತ ಮಾಡಿಕೊಂಡಿದೆ. ರಾಜ್ಯದ ಜನರ ಅಭಿವೃದ್ಧಿ ಜನರ ಸಂಕಷ್ಟದ ಬಗ್ಗೆ ಬಿಜೆಪಿ ನಾಯಕರಿಗೆ ಕಿಂಚಿತ್ತೂ ಕಾಳಜಿಯಿಲ್ಲ ಎಂದು ವಾಗ್ದಾಳಿ ನಡೆಸಿದರು.

ಪಿ.ಸಿ.ಮೋಹನ್ ಚುನಾವಣಾ ಆಯೋಗಕ್ಕೆ ಸಲ್ಲಿಸಿರುವ ಅಫಿಡೆವಿಟ್‍ನಲ್ಲಿ ದೇವನಹಳ್ಳಿ ತಾಲೂಕಿನ ಲಕ್ಷ್ಮೀಪುರದ ದೇವಸ್ಥಾನ ಟ್ರಸ್ಟ್‍ಗೆ ಸಂಬಂಧಪಟ್ಟ ನಲ್ವತ್ತು ಎಕರೆ ಜಾಗವನ್ನು ತಮ್ಮ ಸ್ವಂತ ಕಂಪನಿ ಹೆಸರಿನಲ್ಲಿ ಖರೀದಿಸಿದ್ದಾರೆ. ಈ ಆಸ್ತಿಯ ವಿವರವನ್ನು ಏಕೆ ಸಲ್ಲಿಸಿಲ್ಲ ಎಂದು ಪ್ರಶ್ನಿಸಿದ ಅವರು, ಇದು ಒಂದು ರೀತಿ ರಾಜ್ಯದ ಜನತೆಗೆ ವಂಚಿಸಿದಂತಾಗಿದೆ. ಆದ್ದರಿಂದ ಕೂಡಲೇ ಸಂಸತ್ ಸದಸ್ಯ ಸ್ಥಾನಕ್ಕೆ ರಾಜಿನಾಮೆ ನೀಡಬೇಕೆಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಬಿಬಿಎಂಪಿ ಮಾಜಿ ಮೇಯರ್ ಎಂ.ರಾಮಚಂದ್ರಪ್ಪ, ಕಾಂಗ್ರೆಸ್ ಮುಖಂಡರಾದ ಜಿ.ಜನಾರ್ದನ್, ಎಆನಂದ್ ಜಯಸಿಂಹ, ಸಲೀಂ ಸೇರಿದಂತೆ ಪ್ರಮುಖರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News