ಗೋಹತ್ಯೆ ನಿಷೇಧ ಕಾಯ್ದೆ ವಿರೋಧಿಸಿ ಬೃಹತ್ ಸಮಾವೇಶ: ಡಾ.ಎ.ಖಾಸೀಮ್ ಸಾಬ್

Update: 2021-01-10 12:34 GMT

ಬೆಂಗಳೂರು, ಜ.10: ವಿಧಾನ ಪರಿಷತ್ತಿನಲ್ಲಿ ಅಂಗೀಕಾರಕ್ಕೆ ಬಾಕಿಯಿರುವ ವಿವಾದಿತ 2020ನೆ ಸಾಲಿನ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ವಿಧೇಯಕವನ್ನು ಅಧ್ಯಾದೇಶ(ಸುಗ್ರೀವಾಜ್ಞೆ)ದ ಮೂಲಕ ಜಾರಿಗೆ ತಂದಿರುವುದನ್ನು ವಿರೋಧಿಸಿ ಮುಂದಿನ ದಿನಗಳಲ್ಲಿ ರಾಜ್ಯ ಮಟ್ಟದ ಬೃಹತ್ ಸಮಾವೇಶ ಹಮ್ಮಿಕೊಳ್ಳಲಾಗುವುದು ಎಂದು ಗೋಹತ್ಯೆ ನಿಷೇಧ ಮಸೂದೆ ವಿರೋಧಿ ಜನಾಂದೋಲನದ ರಾಜ್ಯ ಸಂಚಾಲಕ ಡಾ.ಎ.ಖಾಸೀಮ್ ಸಾಬ್ ತಿಳಿಸಿದ್ದಾರೆ.

ರವಿವಾರ ನಗರದ ಹಮೀದ್ ಷಾ ಕಾಂಪ್ಲೆಕ್ಸ್ ನ ಉರ್ದು ಹಾಲ್‍ನಲ್ಲಿ ರಾಜ್ಯ ಮಟ್ಟದ 2ನೆ ಚಿಂತನಾ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಈ  ರಾಜ್ಯ ಮಟ್ಟದ ಬೃಹತ್ ಸಮಾವೇಶವನ್ನು ಬೆಂಗಳೂರಿನಲ್ಲಿ ಹಮ್ಮಿಕೊಳ್ಳಲಾಗುತ್ತಿದ್ದು, ಈ ಸಮಾವೇಶದಲ್ಲಿ 10ಸಾವಿರಕ್ಕೂ ಹೆಚ್ಚು ಜನರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ವಿಧೇಯಕ-2020 ವಿರೋಧಿ ಜನಾಂದಲೋನದ ರಾಜ್ಯಮಟ್ಟದ 2ನೆ ಚಿಂತನಾ ಸಭೆಯು ಜ.10ರಂದು ಬೆಂಗಳೂರು, ಕೋಲಾರ ಸೇರಿ ರಾಜ್ಯದ 10 ಜಿಲ್ಲೆಗಳಲ್ಲಿ ನಡೆದಿದೆ. ಇದೇ ರೀತಿಯಾಗಿ 3ನೆ ಚಿಂತನಾ ಸಭೆಯೂ ನಡೆಯಲಿದೆ ಎಂದು ಹೇಳಿದರು.

ಹಝ್ರತ್ ಟಿಪ್ಪು ಸುಲ್ತಾನ್ ಸಂಯುಕ್ತ ರಂಗದ ಪ್ರಧಾನ ಕಾರ್ಯದರ್ಶಿ ಡಾ.ದಾವೂದ್ ಇಕ್ಬಾಲ್ ಮಾತನಾಡಿ, ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ವಿಧೇಯಕ-2020 ಜಾರಿಯಿಂದ ಮುಸ್ಲಿಮರಿಗೆ ಮಾತ್ರವಲ್ಲದೇ ದಲಿತರು ಮತ್ತು ಕೃಷಿಕರಿಗೂ ಅನ್ಯಾಯವಾಗಲಿದ್ದು, ಈ ಕಾಯ್ದೆಯನ್ನು ವಾಪಸ್ ಪಡೆಯಬೇಕೆಂದು ಒತ್ತಾಯಿಸಿದರು.

ಬೆಂಗಳೂರಿನ ಮುಸ್ಲಿಮ್ ಧಾರ್ಮಿಕ ಮುಖಂಡ ಮೌಲಾನ ಮುನಾವರ್ ಸಾಬ್ ಮಾತನಾಡಿದರು. ಈ ಸಂದರ್ಭದಲ್ಲಿ ಎಸ್‍ಡಿಪಿಐ ಮುಖಂಡ ಫಯಾಜ್ ಅಹ್ಮದ್, ಭಾರತೀಯ ಮಾನವ ಹಕ್ಕುಗಳ ಹೋರಾಟಗಾರ ಕೋದಂಡರಾಮ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News