ಪೊಲೀಸರ ನಿರ್ಲಕ್ಷ್ಯದಿಂದ ಬಿಎಸ್ಪಿ ಮುಖಂಡನ ಹತ್ಯೆ ಆರೋಪ: ಠಾಣೆಯ ಮುಂಭಾಗ ಪ್ರತಿಭಟನೆ

Update: 2021-01-10 18:04 GMT

ಬೆಂಗಳೂರು, ಜ. 10: ಬಿಎಸ್ಪಿ ಬೆಂಗಳೂರು ಉತ್ತರ ಜಿಲ್ಲಾಧ್ಯಕ್ಷ ಶ್ರೀನಿವಾಸ್ ಹತ್ಯೆಗೆ ಪೊಲೀಸರ ನಿರ್ಲಕ್ಷ್ಯವೇ ಕಾರಣವೆಂದು ಆರೋಪಿಸಿ ರಾಜಗೋಪಾಲನಗರ ಪೊಲೀಸ್ ಠಾಣೆಯ ಮುಂಭಾಗ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಲಾಯಿತು.

ರವಿವಾರ ಕರ್ನಾಟಕ ಬಹುಜನ ಕ್ರಾಂತಿದಳ ಸಂಘಟನೆಯ ಮೂಲಕ ಸಾಮಾಜಿಕ ಚಟುವಟಿಕೆಯಲ್ಲಿ ತೊಡಗಿದ್ದ ಹಾಗೂ ದಲಿತ ಮೇಲೆ ನಡೆಯುತ್ತಿದ್ದ ದೌರ್ಜನ್ಯಗಳ ವಿರುದ್ಧ ಹೋರಾಟ ಮಾಡುತ್ತಿದ್ದ ಶ್ರೀನಿವಾಸಗೆ ದುಷ್ಕರ್ಮಿಗಳಿಂದ ಬೆದರಿಕೆ ಕರೆಗಳು ಬರುತ್ತಿದ್ದವು. ಈ ಬಗ್ಗೆ ಪೊಲೀಸರಿಗೆ ದೂರು ನೀಡಲಾಗಿತ್ತು. ಆದರೆ, ಪೊಲೀಸರು ಸೂಕ್ತ ತನಿಖೆ ನಡೆಸದೆ ನಿರ್ಲಕ್ಷ್ಯ ಮಾಡಿದ್ದಾರೆ. ಹೀಗಾಗಿ ದುಷ್ಕರ್ಮಿಗಳಿಂದ ದಲಿತ ಮುಖಂಡನನ್ನು ಕಳೆದುಕೊಳ್ಳುವಂತಾಯಿತು ಎಂದು ಪ್ರತಿಭಟನಾಕಾರರು ಆರೋಪಿಸಿದ್ದಾರೆ.

ಈ ವೇಳೆ ಬಿಎಸ್ಪಿ ಮುಖಂಡ ಗುರುಮೂರ್ತಿ ಮಾತನಾಡಿ, ದುಷ್ಕರ್ಮಿಗಳಿಂದ ಹತ್ಯೆಯಾದ ಶ್ರೀನಿವಾಸ್ ಬಿಎಸ್ಪಿಯಿಂದ ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಉಸ್ತುವಾರಿ ವಹಿಸಿಕೊಂಡು ಕಾರ್ಯನಿರ್ವಹಿಸುತ್ತಿದ್ದರು. ಅಲ್ಲಿನ ಮೂಲಭೂತ ಅವಶ್ಯಕತೆಗಳ ಈಡೇರಿಕೆಗೆ ಹೋರಾಟಗಳ ನಡೆಸುತ್ತಿದ್ದರು. ಈ ನಡುವೆ ಸ್ಲಂ ಭರತನೆಂಬ ರೌಡಿ ಕಳೆದ ಎರಡು ವರ್ಷದ ಹಿಂದೆ ಈತನಿಗೆ ಹಫ್ತಾ ವಸೂಲಿಗಾಗಿ ಕಿರುಕುಳ ನೀಡುತ್ತಿದ್ದ ಎನ್ನಲಾಗಿದೆ. ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಕೆಲವು ತಿಂಗಳುಗಳ ಹಿಂದೆ ಸ್ಲಂ ಭರತ ಎನ್‍ಕೌಂಟರ್ ನಿಂದ ಹತ್ಯೆಯಾದ. ಹೀಗಾಗಿ ಈತನ ಬೆಂಬಲಿಗರೇ ಬಿಎಸ್ಪಿ ಮುಖಂಡ ಶ್ರೀನಿವಾಸ್‍ರನ್ನು ಹತ್ಯೆ ಮಾಡಿದ್ದಾರೆಂದು ಅವರು ಆರೋಪಿಸಿದ್ದಾರೆ.

ಬೆಂಗಳೂರಿನಲ್ಲಿ ಇತ್ತೀಚಿನ ವರ್ಷಗಳಲ್ಲಿ ದಲಿತ ಯುವಕರನ್ನು ಗುರಿಯಾಗಿಸಿಕೊಂಡು ಹತ್ಯೆಗಳು ನಡೆಯುತ್ತಿವೆ. ಈ ಬಗ್ಗೆ ಪೊಲೀಸ್ ಇಲಾಖೆಯ ಗಮನಕ್ಕೂ ತರಲಾಗಿದೆ. ಆದರೂ ಪೊಲೀಸ್ ವ್ಯವಸ್ಥೆ ದಲಿತರ ಹತ್ಯೆ ಪ್ರಕರಣಗಳನ್ನು ನಿರ್ಲಕ್ಷ್ಯಿಸುವ ಮೂಲಕ ಪರೋಕ್ಷವಾಗಿ ಬೆಂಬಲಿಸುತ್ತಿದ್ದಾರೆಂಬ ಅನುಮಾನ ಕಾಡುತ್ತಿದೆ ಎಂದು ಅವರು ತಿಳಿಸಿದ್ದಾರೆ.

ದಲಿತ ಮುಖಂಡ ಶ್ರೀನಿವಾಸ್ ಹತ್ಯೆಯ ದುಷ್ಕರ್ಮಿಗಳನ್ನು ಬಂಧಿಸಿ ಸೂಕ್ತ ಕ್ರಮಕೈಗೊಳ್ಳಬೇಕು. ಇಲ್ಲದಿದ್ದರೆ, ಪೊಲೀಸ್ ವ್ಯವಸ್ಥೆಯ ಪಕ್ಷಪಾತ ಧೋರಣೆಯ ವಿರುದ್ಧ ರಾಜ್ಯಾದ್ಯಂತ ಹೋರಾಟ ಹಮ್ಮಿಕೊಳ್ಳಲಾಗುವುದೆಂದು ಅವರು ಎಚ್ಚರಿಕೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News