ತೀವ್ರ ಅಸ್ತಮಾ ದಾಳಿಯನ್ನು ಸುಲಭವಾಗಿ ನಿಭಾಯಿಸುವುದು ಹೇಗೆ?

Update: 2021-01-11 12:13 GMT

ಅಸ್ತಮಾವನ್ನು ಶ್ವಾಸನಾಳದ ಅತಿಯಾದ ಪ್ರತಿಕ್ರಿಯಾತ್ಮಕತೆ ಯೊಂದಿಗೆ ಗುರುತಿಸಿಕೊಂಡಿರುವ ದೀರ್ಘಕಾಲಿಕ ಉರಿಯೂತ ಕಾಯಿಲೆ ಎಂದು ವ್ಯಾಖ್ಯಾನಿಸಬಹದು. ಅಸ್ತಮಾ ರೋಗಿಯು ಯಾವುದೇ ಅಲರ್ಜಿಕಾರಕ,ಧೂಳು,ವೈರಸ್ ಇತ್ಯಾದಿಗಳ ಸಂಪರ್ಕಕ್ಕೆ ಬಂದಾಗಿ ಶ್ವಾಸನಾಳ ಸಂಕುಚಿತಗೊಳ್ಳುತ್ತದೆ ಮತ್ತು ತೀವ್ರ ಅಸ್ತಮಾ ದಾಳಿಗೆ ಕಾರಣವಾಗುತ್ತದೆ. ಇದು ಉಬ್ಬಸ, ಉಸಿರುಗಟ್ಟುವಿಕೆ, ಎದೆಯಲ್ಲಿ ಬಿಗಿತ ಮತ್ತು/ಅಥವಾ ಕೆಮ್ಮು ಇತ್ಯಾದಿಗಳು ಪುನರಾವರ್ತನೆಗೊಳ್ಳುವಂತೆ ಮಾಡುತ್ತದೆ.

ತೀವ್ರ ಅಸ್ತಮಾ ದಾಳಿಗೆ ಗುರಿಯಾದವರಿಗೆ ಈ ಕೆಳಗಿನ ಅನುಭವಗಳಾಗಬಹುದು.

* ಉಸಿರಾಡಿಸಲು ಕಷ್ಟ ಹೆಚ್ಚುತ್ತಲೇ ಹೋಗುವುದು

* ಉಬ್ಬಸ ಮತ್ತು ಕೆಮ್ಮಿನ ಪುನರಾರ್ವತನೆ ಹೆಚ್ಚಾಗುವುದು

* ಎದೆಯ ಬಿಗಿದಂತಹ ಅನುಭವ

* ಶ್ವಾಸಕೋಶಗಳ ಕಾರ್ಯನಿರ್ವಹಣೆಯಲ್ಲಿ ತೀವ್ರ ಕುಸಿತ ಮತ್ತು ಇದಕ್ಕೆ ತುರ್ತು ವೈದ್ಯಕೀಯ ನೆರವು ಅಗತ್ಯವಾಗಬಹುದು

ತೀವ್ರ ಅಸ್ತಮಾ ದಾಳಿಯಿಂದ ನರಳುತ್ತಿರುವವರು ಕೆಲವು ಸರಳ ಕ್ರಮಗಳನ್ನು ಅನುಸರಿಸುವ ಮೂಲಕ ಅದನ್ನು ಸುಲಭವಾಗಿ ನಿಭಾಯಿಸಬಹುದಾಗಿದೆ.

1: ನಿಮ್ಮ ಸ್ಥಿತಿಯ ಬಗ್ಗೆ ಮಾಹಿತಿ ಮತ್ತು ಅರಿವು ಇರಲಿ

ನೀವು ತೀವ್ರ ಅಸ್ತಮಾ ದಾಳಿಯಿಂದ ನರಳುತ್ತಿದ್ದರೆ ಮತ್ತು ಆ ಸ್ಥಿತಿಯ ಬಗ್ಗೆ ನಿಮಗೆ ಯಾವುದೇ ಮಾಹಿತಿ ಇಲ್ಲದಿದ್ದರೆ ನಿಮಗೆ ಆತಂಕವುಂಟಾಗುವುದು ಸಹಜವಾಗಿದೆ. ಆದ್ದರಿಂದ ಅಸ್ತಮಾ ರೋಗಿಗಳು ತಮ್ಮ ಸ್ಥಿತಿಯ ಬಗ್ಗೆ ಚೆನ್ನಾಗಿ ಅರಿವು ಹೊಂದಿರಬೇಕು. ಇದಕ್ಕಾಗಿ ಸಂಬಂಧಿಸಿದ ಪುಸ್ತಕಗಳನ್ನು ಓದಬಹುದು. ಆನ್‌ಲೈನ್‌ನಲ್ಲಿ ಮಾಹಿತಿಗಳನ್ನು ತಿಳಿದುಕೊಳ್ಳಲು ಬಯಸಿದ್ದರೆ ನೀವು ಅಧಿಕೃತ ಮೂಲಗಳನ್ನೇ ಅನುಸರಿಸುತ್ತೀರಿ ಎನ್ನುವುದನ್ನು ಖಚಿತಪಡಿಸಿಕೊಳ್ಳಿ. ಸರ್ಚ್ ಇಂಜಿನ್ನ ಪ್ರತಿಯೊಂದನ್ನೂ ನೀವು ನಂಬಬೇಕಿಲ್ಲ.

ನಿಮ್ಮ ವೈದ್ಯರೊಂದಿಗೆ ಮಾತನಾಡಿ ನಿಮ್ಮ ಸ್ಥಿತಿಯ ಬಗ್ಗೆ ಚೆನ್ನಾಗಿ ತಿಳಿದಿರುವ ಅವರಿಂದ ನಿಮ್ಮ ಪ್ರಶ್ನೆಗೆ ಉತ್ತರಗಳನ್ನು ತಿಳಿದುಕೊಳ್ಳಿ. ಇದರಿಂದ ನಿಮ್ಮ ಸ್ಥಿತಿಯ ಬಗ್ಗೆ ಸೂಕ್ಷ್ಮ ವಿವರಗಳು ನಿಮಗೆ ಗೊತ್ತಾಗುವುದು ಮಾತ್ರವಲ್ಲ,ತೀವ್ರ ಅಸ್ತಮಾ ದಾಳಿಯ ಲಕ್ಷಣಗಳನ್ನು ನಿಭಾಯಿಸಲು ನಿಮಗೆ ಹೆಚ್ಚಿನ ಕ್ಷಮತೆಯನ್ನೂ ನೀಡುತ್ತದೆ.

2: ನಿಮ್ಮ ಕುಟುಂಬದ ಪಾತ್ರವೂ ಮುಖ್ಯ

ನಿಮ್ಮ ಸ್ಥಿತಿಯ ಬಗ್ಗೆ ನಿಮ್ಮ ಕುಟುಂಬಕ್ಕೆ ಮತ್ತು ಸ್ನೇಹಿತ ಬಳಗಕ್ಕೂ ಎಲ್ಲ ಮಾಹಿತಿಯಿರುವುದು ಅಪೇಕ್ಷಣೀಯವಾಗಿದೆ. ಏಕೆಂದರೆ ತೀವ್ರ ಅಸ್ತಮಾ ದಾಳಿಯ ಸಂದರ್ಭದಲ್ಲಿ ಅಥವಾ ಲಕ್ಷಣಗಳು ತೀವ್ರ ಬಿಗಡಾಯಿಸಿದಾಗ ನಿಮ್ಮ ಕುಟುಂಬ ಸದಸ್ಯರು ಮತ್ತು ಪ್ರೀತಿಪಾತ್ರರಿಗೆ ನೀವು ಈ ಸ್ಥಿತಿಯನ್ನು ಎದುರಿಸಲು ನೆರವಾಗಲು ಕ್ರಿಯಾ ಯೋಜನೆಯ ಬಗ್ಗೆ ಗೊತ್ತಿರುತ್ತದೆ. ಅಲ್ಲದೆ ನೀವು ವೈದ್ಯರನ್ನು ಭೇಟಿಯಾಗಲು ತೆರಳುವಾಗ ನಿಮ್ಮ ಸ್ಥಿತಿಯ ಬಗ್ಗೆ ಚೆನ್ನಾಗಿ ತಿಳಿದಿರುವ ನಿಮ್ಮ ಕುಟುಂಬದ ಕನಿಷ್ಠ ಒಬ್ಬ ಸದಸ್ಯರಾದರೂ ನಿಮ್ಮ ಜೊತೆಯಲ್ಲಿರಲಿ.

3: ನಿಮ್ಮ ವೈದ್ಯರೊಂದಿಗೆ ಭೇಟಿಯನ್ನೆಂದೂ ತಪ್ಪಿಸಬೇಡಿ

 ನಿಮ್ಮ ವೈದ್ಯರ ಕ್ಲಿನಿಕ್‌ಗೆ ನಿಯಮಿತವಾಗಿ ಭೇಟಿಗಳನ್ನು ನೀಡುವ ಮೂಲಕ ನಿಮ್ಮ ಸ್ಥಿತಿಯಲ್ಲಿ ಸುಧಾರಣೆಯ ಬಗ್ಗೆ ತಿಳಿದುಕೊಳ್ಳುವುದು ಬುದ್ಧಿವಂತಿಕೆಯಾಗುತ್ತದೆ. ನಿಯಮಿತ ಮಧ್ಯಂತರಗಳಲ್ಲಿ ವೈದ್ಯರನ್ನು ಭೇಟಿಯಾಗುವುದರಿಂದ ನಿಮ್ಮ ಅಸ್ತಮಾ ಸ್ಥಿತಿಯ ಮೇಲೆ ನಿಗಾಯಿರಿಸಲು ಮತ್ತು ಅಗತ್ಯವಾದರೆ ಚಿಕಿತ್ಸಾ ವಿಧಾನವನ್ನು ಬದಲಿಸಲು ಅವರಿಗೆ ಅನುಕೂಲವಾಗುತ್ತದೆ. ವೈದ್ಯರು ನಿಯಮಿತವಾಗಿ ನಿಮ್ಮ ಸ್ಥಿತಿಯ ಮೇಲೆ ಗಮನವಿಡುವುದರಿಂದ ದಿಢೀರ್ ತೊಂದರೆಗಳು ಉಂಟಾಗುವುದನ್ನು ತಡೆಯಲು ನಿಮಗೆ ಸಾಧ್ಯವಾಗುತ್ತದೆ.

  4: ನಿರ್ದಿಷ್ಟ ಸೂಚನೆಗಳೊಂದಿಗೆ ಅಸ್ತಮಾ ಔಷಧಿಗಳ ಬಳಕೆಯ ಬಗ್ಗೆ ಲಿಖಿತ ಅಸ್ತಮಾ ಕ್ರಿಯಾ ಯೋಜನೆಯು ತೀವ್ರ ಅಸ್ತಮಾ ದಾಳಿಯನ್ನು ಗುರುತಿಸಲು ಮತ್ತು ಅದನ್ನು ಸೂಕ್ತವಾಗಿ ಎದುರಿಸಲು ರೋಗಿಗಳಿಗೆ ನೆರವಾಗುತ್ತದೆ. ಸಮಯಕ್ಕೆ ಸರಿಯಾಗಿ ಔಷಧಿಗಳ ಸೇವನೆ ಅಸ್ತಮಾ ಲಕ್ಷಣಗಳನ್ನು ನಿರ್ವಹಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಅಸ್ತಮಾ ರೋಗಿಗಳು ನಾಲ್ಕು ಜನರೆದುರು ಇನ್‌ಹೇಲರ್‌ಗಳನ್ನು ಬಳಸಲು ಹಿಂಜರಿಯಬೇಕಿಲ್ಲ ಮತ್ತು ಎಲ್ಲಿಗೆ ಹೋದರೂ ಇನ್‌ಹೇಲರ್ ಜೊತೆಯಲ್ಲಿಯೇ ಇರುವಂತೆ ನೋಡಿಕೊಳ್ಳಬೇಕು.

ಒಟ್ಟಾರೆಯಾಗಿ ಹೇಳುವುದಾದರೆ ತೀವ್ರ ಅಸ್ತಮಾ ಕೊಂಚ ಅಳುಕನ್ನು ಹುಟ್ಟಿಸುತ್ತದೆ ನಿಜ,ಆದರೆ ಅಸ್ತಮಾ ಬಗ್ಗೆ ಸರಿಯಾದ ತಿಳುವಳಿಕೆ ಮತ್ತು ಚಿಕಿತ್ಸಾ ವಿಧಾನಗಳ ಬಗ್ಗೆ ಸೂಕ್ತ ಅರಿವು ಇದ್ದರೆ ನಿಮ್ಮ ಅಸ್ತಮಾ ಲಕ್ಷಣಗಳನ್ನು ನಿಭಾಯಿಸುವುದು ನಿಮಗೆ ಸಮಸ್ಯೆಯಾಗುವುದಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News