ಕವಿಗೆ ಅವಲೋಕಿಸುವ, ಶೋಧಿಸುವ ಬಂಡಾಯ ಅಗತ್ಯ: ಎಚ್.ಎಸ್.ವೆಂಕಟೇಶಮೂರ್ತಿ

Update: 2021-01-12 11:40 GMT

ಬೆಂಗಳೂರು, ಜ.12: ಸೂಕ್ಷ್ಮ ಮನಸಿನ ಕವಿಗಳು ಎಲ್ಲರ ಪರವಾಗಿ ಮಾತನಾಡುವುದಕ್ಕಿಂತ ತನಗೆ ಅನಿಸಿದ್ದನ್ನು ಪಿಸು ದನಿಯ ಮೂಲಕ ವ್ಯಕ್ತಪಡಿಸುತ್ತಾರೆಂದು ಹಿರಿಯ ಸಾಹಿತಿ ಎಚ್.ಎಸ್.ವೆಂಕಟೇಶಮೂರ್ತಿ ತಿಳಿಸಿದ್ದಾರೆ.

ಮಂಗಳಾರ ಶ್ರೀಮತಿ ಸರಳರಂಗನಾಥ ರಾವ್ ಸ್ಮಾರಕ ಪ್ರತಿಷ್ಠಾನ ನಗರದ ವಿದ್ಯಾಭವನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕವಯತ್ರಿ ಶೋಭಾ ಹಿರೇಕೈ ಕಂಡ್ರಾಜಿಗೆ ಸರಳಾ ರಂಗನಾಥ ರಾವ್ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ಅವರು, ಕವಿಗೆ ತನಗೆ ಅನಿಸಿದನ್ನು ಅವಲೋಕಿಸುವ, ಶೋಧಿಸುವ ಬಂಡಾಯ ಪ್ರವೃತ್ತಿ ಅಗತ್ಯವಿರುತ್ತದೆ ಎಂದು ತಿಳಿಸಿದ್ದಾರೆ.

ಕವಯತ್ರಿ ಶೋಭಾ ಹಿರೇಕೈ ಅವರ ಕಾವ್ಯ ಸಂಗ್ರಹದಲ್ಲಿ ಸಮಾಜಕ್ಕೆ ಹಿತವಾಗುವ ಕಾವ್ಯಗಳು ಹಾಗೂ ತನ್ನ ಅನುಭವಕ್ಕೆ ಬಂದ, ತನಗೆ ಅನಿಸಿದ್ದನ್ನು ಪಿಸು ದನಿಯಲ್ಲಿ ವ್ಯಕ್ತಪಡಿಸಿರುವ ಕಾವ್ಯಗಳೆರಡು ಇವೆ. ಹೀಗಾಗಿ ಅವರಿಂದ ಕಾವ್ಯ ಕ್ಷೇತ್ರಕ್ಕೆ ಸಾಕಷ್ಟು ನಿರೀಕ್ಷೆಗಳಿವೆ ಎಂದು ಅವರು ತಿಳಿಸಿದ್ದಾರೆ.

ನಾವು ಜೀವನದ ಪ್ರತಿ ಹಂತದಲ್ಲೂ ಏನನ್ನೋ ಪಡೆಯುವಾಗ ಮತ್ತೇನನ್ನೋ ಕಳೆದುಕೊಳ್ಳುತ್ತಿರುತ್ತೇವೆ. ಕವಿ ಈ ಕಳೆದುಕೊಳ್ಳುವಾಗಿನ ತಳಮಳಗಳನ್ನು ಅನುಭವಿಸುತ್ತಾನೆ. ಈ ಪ್ರವೃತ್ತಿಯೇ ಕವಿಯೊಬ್ಬನ ಮೊದಲು ಮೆಟ್ಟಿಲಾಗುತ್ತದೆ ಎಂದು ಅವರು ಅಭಿಪ್ರಾಯಿಸಿದ್ದಾರೆ.

ಹಿರಿಯ ಪತ್ರಕರ್ತ ಜಿ.ಎನ್.ರಂಗನಾಥ ರಾವ್ ಮಾತನಾಡಿ, ನನ್ನ ಪತ್ನಿ ಸರಳಾ ನನ್ನೆಲ್ಲಾ ಪತ್ರಿಕಾ ವ್ಯವಸಾಯ, ಸಾಹಿತ್ಯ ರಚನೆಯ ಹಿಂದಿನ ಚೈತನ್ಯ ಹಾಗೂ ಪ್ರೇರಣೆಯಾಗಿದ್ದಳು. ನನ್ನ ಬರಹದ, ಬದುಕಿನ ಮೊದಲ ವಿಮರ್ಶಕಿಯಾಗಿದ್ದಳು. ಹೀಗಾಗಿ ಅವಳ ಹೆಸರಿನಲ್ಲಿ ಪ್ರತಿಷ್ಠಾನ ಸ್ಥಾಪಿಸಿ, ಪ್ರತಿವರ್ಷ ಕವಯತ್ರಿ ಒಬ್ಬರಿಗೆ ಪ್ರಶಸ್ತಿ ನೀಡಲು ಉದ್ದೇಶಿಸಿದ್ದೇವೆಂದು ತಿಳಿಸಿದ್ದಾರೆ. 

ಪ್ರಶಸ್ತಿ ಸ್ವೀಕರಿಸಿ ಶೋಭಾ ಹಿರೇಕೈ ಮಾತನಾಡಿ, ನನ್ನ ಬರವಣಿಗೆಯ ಜವಾಬ್ದಾರಿಯನ್ನು ಹೆಚ್ಚಿಸಿಕೊಳ್ಳಲು, ನನ್ನೊಳಗೆ ಆತ್ಮವಿಶ್ವಾಸ ಮೂಡಿಸಿಕೊಳ್ಳಲು ಈ ಪ್ರಶಸ್ತಿ ನನಗೆ ಪ್ರೇರಣೆ ಒದಗಿಸಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

ಕಾರ್ಯಕ್ರಮದಲ್ಲಿ ಸಾಹಿತಿ ಚಿಂತಾಮಣಿ ಕೊಡ್ಲೆಕೆರೆ, ರಾಘವೇಂದ್ರ ತೀರ್ಥ, ಮಾವಿನಕೆರೆ ರಂಗನಾಥನ್ ಮುಂತಾದ ಸಾಹಿತ್ಯಾಸಕ್ತರು ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News