ರಾಜ್ಯಕ್ಕೆ ಮೊದಲ ಹಂತದಲ್ಲಿ 7.95 ಲಕ್ಷ ವೈಲ್‍ಗಳು: ಸಚಿವ ಡಾ.ಕೆ.ಸುಧಾಕರ್

Update: 2021-01-12 14:35 GMT

ಬೆಂಗಳೂರು, ಜ.12: ರಾಜ್ಯಕ್ಕೆ ಮೊದಲ ಹಂತದಲ್ಲಿ ಕೊರೋನ ಲಸಿಕೆಯ 7.95 ಲಕ್ಷ ವೈಲ್‍ಗಳು ಬರಲಿವೆ. ಇದನ್ನು ಆನಂದರಾವ್ ವೃತ್ತದಲ್ಲಿರುವ ಸಂಗ್ರಹಾಗಾರದಲ್ಲಿ ಶೇಖರಣೆ ಮಾಡಿ ಇಡಲಾಗುವುದು ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು.

ಮಂಗಳವಾರ ಸದಾಶಿವನಗರದಲ್ಲಿರುವ ತಮ್ಮ ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಡ್ರಗ್ಸ್ ಕಂಟ್ರೋಲ್ ಜನರಲ್ ಆಫ್ ಇಂಡಿಯಾ ಕೋವಿಶೀಲ್ಡ್ ಲಸಿಕೆಗೆ ಈಗಾಗಲೆ ಪರವಾನಗಿ ನೀಡಿದೆ. ಕೇಂದ್ರ ಸರಕಾರ 1.1 ಕೋಟಿ ಡೋಸ್ ಲಸಿಕೆ ಖರೀದಿ ಮಾಡಿದೆ. ಒಂದು ಡೋಸ್‍ಗೆ 210 ರೂ. ನಿಗದಿ ಮಾಡಿದ್ದು, ಬೇರೆ ಯಾವ ದೇಶವೂ ಇಷ್ಟು ಕಡಿಮೆ ದರ ನಿಗದಿ ಮಾಡಿಲ್ಲ ಎಂದರು.

ಸೀರಂ ಇನ್ಸ್ ಟಿಟ್ಯೂಟ್ ಆಫ್ ಇಂಡಿಯಾದಿಂದ ಲಸಿಕೆ ಖರೀದಿಸಲಾಗಿದೆ. ಲಸಿಕೆ ಖರೀದಿಗೆ ಒಟ್ಟು 231 ಕೋಟಿ ರೂ. ಖರ್ಚು ಮಾಡಲಾಗಿದೆ. ರಾಜ್ಯಕ್ಕೆ ಮೊದಲ ಹಂತದಲ್ಲಿ 7.95 ಲಕ್ಷ ಕೋವಿಶೀಲ್ಡ್ ಲಸಿಕೆಯ ವೈಲ್ ಪೂರೈಕೆಯಾಗಲಿದೆ. ಪ್ರತಿ ಡೋಸ್‍ನಲ್ಲಿ 0.5 ಎಂಎಲ್ ಪ್ರಮಾಣವಿರುತ್ತದೆ. ಒಂದು ವೈಲ್‍ನಲ್ಲಿ 10 ಮಂದಿಗೆ ಲಸಿಕೆ ನೀಡಬಹುದು. ಮೊದಲ ಡೋಸ್ ಪಡೆದ 28 ದಿನಗಳ ಬಳಿಕ ಎರಡನೆ ಡೋಸ್ ಪಡೆಯಬೇಕು. ಲಸಿಕೆಯಿಂದ ದೇಹದಲ್ಲಿ ರೋಗ ನಿರೋಧಕ ಶಕ್ತಿ ಉತ್ಪತ್ತಿಯಾಗುತ್ತದೆ. ಇದು ಸಂಪೂರ್ಣ ಸುರಕ್ಷಿತ ಎಂದು ಅವರು ಹೇಳಿದರು.

ಇದು ಮಾರಾಟಕ್ಕಲ್ಲ ಎಂದು ಲಸಿಕೆಯ ವೈಲ್‍ನಲ್ಲಿ ಬರೆಯಲಾಗಿದೆ. ಆರೋಗ್ಯ ಕ್ಷೇತ್ರದ ಸಿಬ್ಬಂದಿ, ಕೊರೋನ ನಿಯಂತ್ರಣ ಮಾಡುವ ಅಧಿಕಾರಿ, ಸಿಬ್ಬಂದಿಗೆ ಲಸಿಕೆ ನೀಡಲಾಗುತ್ತದೆ. ಈ ಎಲ್ಲ ಪ್ರಕ್ರಿಯೆ ಮಾರ್ಗಸೂಚಿ ಪ್ರಕಾರ ನಡೆಯಲಿದೆ. ಲಸಿಕೆ ಪಡೆದ ಬಳಿಕ ಅವರ ಮೇಲೆ ಕೆಲ ಸಮಯದವರೆಗೆ ಸೂಕ್ಷ್ಮವಾಗಿ ನಿಗಾ ಇರಿಸಲಾಗುತ್ತದೆ ಎಂದು ಸುಧಾಕರ್ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News