ಬೆಂಗಳೂರಿನ ರಾಮಕೃಷ್ಣ ಮಠದ ಅಧ್ಯಕ್ಷ ಸ್ವಾಮಿ ಹರ್ಷಾನಂದ ನಿಧನ

Update: 2021-01-12 16:43 GMT

ಬೆಂಗಳೂರು, ಜ.12: ಬೆಂಗಳೂರಿನ ಬಸವನಗುಡಿಯಲ್ಲಿರುವ ರಾಮಕೃಷ್ಣ ಮಠದ ಅಧ್ಯಕ್ಷ ಸ್ವಾಮಿ ಹರ್ಷಾನಂದ(91) ಅವರು ವಿಧಿವಶರಾಗಿದ್ದಾರೆ.

ಮಂಗಳವಾರ ಮಧ್ಯಾಹ್ನ ಸುಮಾರಿಗೆ ಹೃದಯಾಘಾತದಿಂದ ಅವರು ಕೊನೆಯುಸಿರೆಳೆದಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಸ್ವಾಮಿ ವಿವೇಕಾನಂದರ ಅನುಯಾಯಿಯಾಗಿದ್ದ ಸ್ವಾಮಿ ಹರ್ಷಾನಂದ ಅವರು ವಿವೇಕಾನಂದರ ಜನ್ಮದಿನವಾದ ಇಂದೇ ಇಹಲೋಕ ತ್ಯಜಿಸಿದ್ದಾರೆ. ಧಾರ್ಮಿಕತೆ ಬಗ್ಗೆ ಅವರು ಹಲವು ಪುಸ್ತಕಗಳನ್ನು ಬರೆದಿದ್ದರು.

ಅಂತಿಮ ದರ್ಶನ: ಮಂಗಳವಾರ ಸಂಜೆಯಿಂದಲೇ ಶ್ರೀ ರಾಮಕೃಷ್ಣ ವಿದ್ಯಾರ್ಥ ಮಂದಿರದಲ್ಲಿ ಪಾರ್ಥಿವ ಶರೀರದ ಸಾರ್ವಜನಿಕ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿದ್ದು, ಬುಧವಾರ ಮಧ್ಯಾಹ್ನ ಅಂತಿಮ ಸಂಸ್ಕಾರಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ರಾಮಕೃಷ್ಣಾಶ್ರಮದ ಪ್ರಮುಖರು ಮಾಹಿತಿ ನೀಡಿದ್ದಾರೆ.

ಸಂತಾಪ: ಸ್ವಾಮಿ ಹರ್ಷಾನಂದ ಅವರ ನಿಧನಕ್ಕೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದು, ರಾಮಕೃಷ್ಣ ಪರಮಹಂಸ ಹಾಗೂ ಸ್ವಾಮಿ ವಿವೇಕಾನಂದರ ತತ್ವಾದರ್ಶಗಳನ್ನು ಎತ್ತಿ ಹಿಡಿದ ವಿದ್ವಾಂಸರು ಅವರು. ಉತ್ತಮ ವಾಗ್ಮಿಗಳೂ ಆಗಿದ್ದರು ಎಂದು ಮುಖ್ಯಮಂತ್ರಿ ಸ್ಮರಿಸಿದ್ದಾರೆ.

ಭಗವಂತನು ಅವರಿಗೆ ಮೋಕ್ಷವನ್ನು ಕರುಣಿಸಲಿ. ಅವರ ಅನುಯಾಯಿಗಳಿಗೆ ಅವರ ಅಗಲಿಕೆಯ ನೋವನ್ನು ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸುವುದಾಗಿ ಮುಖ್ಯಮಂತ್ರಿಗಳು ತಮ್ಮ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.

'ಬೆಂಗಳೂರು ಬಸವನಗುಡಿಯ ಶ್ರೀ ರಾಮಕೃಷ್ಣ ಮಠದ ಸ್ವಾಮಿ ಹರ್ಷಾನಂದ್ ಜೀ ಮಹಾರಾಜ್ ಅವರು ಸಮಾಜದ ಒಳಿತಿಗಾಗಿ ಅವಿಶ್ರಾಂತವಾಗಿ ಶ್ರಮಿಸಿದ್ದರು. ಅವರ ಸಹಾನುಭೂತಿಯ ಸ್ವಭಾವ ಮತ್ತು ವಿವಿಧ ಶ್ರೇಣಿಯ ವಿಷಯಗಳ ಬಗ್ಗೆ ಅವರಿಗಿದ್ದ ಸೂಕ್ಷ್ಮ ಜ್ಞಾನವನ್ನು ಮರೆಯಲು ಸಾಧ್ಯವೇ ಇಲ್ಲ. ಅವರ ಭಕ್ತವೃಂದಕ್ಕೆ ಸಂತಾಪವನ್ನು ಸೂಚಿಸುತ್ತೇನೆ. ಓಂ ಶಾಂತಿ '' ಎಂದು ಪ್ರಧಾನಿ ಮೋದಿ ಕನ್ನಡದಲ್ಲಿ ಟ್ವೀಟ್ ಮಾಡಿ ಸಂತಾಪ ಸೂಚಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News