ಬಿಬಿಎಂಪಿಗಾಗಿ 1.05 ಲಕ್ಷ ಕೋವಿಶೀಲ್ಡ್ ವ್ಯಾಕ್ಸಿನ್ ಸಂಗ್ರಹ: ಆಯುಕ್ತ ಮಂಜುನಾಥ ಪ್ರಸಾದ್

Update: 2021-01-13 18:23 GMT

ಬೆಂಗಳೂರು, ಜ.13: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ)ಗೆ 1.05ಲಕ್ಷ ಕೋವಿಶೀಲ್ಡ್ ವ್ಯಾಕ್ಸಿನ್‍ಗಳನ್ನು ಪಡೆಯಲಾಗಿದ್ದು, ಬಿಬಿಎಂಪಿಯ ದಾಸಪ್ಪ ಆಸ್ಪತ್ರೆಯಲ್ಲಿ ದಾಸ್ತಾನು ಮಾಡಲಾಗಿದೆ ಎಂದು ಬಿಬಿಎಂಪಿ ಆಯುಕ್ತ ಮಂಜುನಾಥ ಪ್ರಸಾದ್ ತಿಳಿಸಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಬಿಎಂಪಿ ವ್ಯಾಪ್ತಿಯಲ್ಲಿ ಗುರುತಿಸಿರುವ ಆರೋಗ್ಯ ಕಾರ್ಯಕರ್ತರಿಗಾಗಿ ಮೊದಲನೇ ಕಂತಿನಲ್ಲಿ 1,05,000 ಕೋವಿಶೀಲ್ಡ್ ವ್ಯಾಕ್ಸಿನ್‍ಗಳನ್ನು ನೀಡಿದ್ದು, ಉಳಿದ ವ್ಯಾಕ್ಸಿನ್‍ಗಳನ್ನು ಮುಂದಿನ ಕಂತಿನಲ್ಲಿ ನೀಡಲಿದ್ದಾರೆ. ಜ. 16 ರಂದು ಪಾಲಿಕೆ ವ್ಯಾಪ್ತಿಯ 6 ಕೇಂದ್ರಗಳಲ್ಲಿ ಕೋವಿಶೀಲ್ಡ್ ಲಸಿಕೆ ವಿತರಣಾ ಕಾರ್ಯಕ್ರಮದ ಉದ್ಘಾಟನೆ ನಡೆಯಲಿದೆ ಎಂದು ಮಾಹಿತಿ ನೀಡಿದ್ದಾರೆ.

ರಾಜ್ಯ ಸರಕಾರದ ನಿರ್ದೇಶನದ ಪ್ರಕಾರ ಪಾಲಿಕೆ ವ್ಯಾಪ್ತಿಯಲ್ಲಿ 6 ಕಡೆ(ವಿಕ್ಟೋರಿಯಾ ಆಸ್ಪತ್ರೆ, ಕೆ.ಸಿ.ಜನರಲ್ ಆಸ್ಪತ್ರೆ, ಸಿ.ವಿ.ರಾಮನ್ ನಗರ ಜಿ.ಎಚ್, ಜಯನಗರ ಜಿ.ಎಚ್, ಸೆಂಟ್ ಜಾನ್ಸ್ ಮೆಡಿಕಲ್ ಕಾಲೇಜು ಹಾಗೂ ಮಲ್ಲಸಂದ್ರ ಪ್ರಾಥಮಿಕ ಆರೋಗ್ಯ ಕೇಂದ್ರ)ಗಳಲ್ಲಿ ಉದ್ಘಾಟನೆ ಮಾಡಲಾಗುತ್ತದೆ. ಪ್ರಮುಖವಾಗಿ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಉದ್ಘಾಟಿಸಲಾಗುತ್ತದೆ. ಆ ದಿನ ಪ್ರತಿ ಕೇಂದ್ರದಲ್ಲಿಯೂ 100 ಆರೋಗ್ಯ ಕಾರ್ಯಕರ್ತರಿಗೆ ಲಸಿಕೆ ನೀಡಲಾಗುತ್ತಿದ್ದು, ಎಲ್ಲಾ ಆರೋಗ್ಯ ಕಾರ್ಯಕರ್ತರಿಗೆ ದೂರವಾಣಿ ಮೂಲಕ ಕರೆ ಮಾಡಿ ತಿಳಿಸಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.

ಪಾಲಿಕೆ ವ್ಯಾಪ್ತಿಯ 760 ಕೇಂದ್ರಗಳಲ್ಲಿ ಲಸಿಕೆ ನೀಡಲು ಸ್ಥಳಗಳನ್ನು ಗುರುತಿಸಲಾಗಿದ್ದು, ಪಾಲಿಕೆ ವತಿಯಿಂದ ಎಲ್ಲಾ ರೀತಿಯ ಸಿದ್ಧತೆಗಳನ್ನು ಸಂಪೂರ್ಣವಾಗಿ ಮಾಡಿಕೊಳ್ಳಲಾಗಿದೆ. ಪ್ರತಿಯೊಂದು ಕೇಂದ್ರಗಳಿಗೆ ಯಾರು ಫಲಾನುಭವಿಗಳು ಬರಬೇಕು, ಅಲ್ಲಿ ಏನೆಲ್ಲಾ ವ್ಯವಸ್ಥೆಗಳಿರಬೇಕು, ಲಸಿಕಾ ಕೇಂದ್ರದಲ್ಲಿ ಕಾಯುವ ಕೊಠಡಿ, ಲಸಿಕೆ ನೀಡುವ ಕೊಠಡಿ ಹಾಗೂ ಪರಿವೀಕ್ಷಣಾ ಕೊಠಡಿ, ವೈ-ಫೈ, ಲಸಿಕೆ ನೀಡುವ ಸಿಬ್ಬಂದಿ ಹಾಗೂ ಸೆಕ್ಟರ್ ಅಧಿಕಾರಿಗಳ ನಿಯೋಜನೆ ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಕೋವಿಶೀಲ್ಡ್ ವ್ಯಾಕ್ಸಿನ್ ಅನ್ನು ಎರಡು ರೆಫ್ರಿಜಿರೇಟರ್ ನಲ್ಲಿ ಇಡಲಾಗಿದೆ. ಪಾಲಿಕೆ ವ್ಯಾಪ್ತಿಯ 148 ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಕೋಲ್ಡ್ ಚೈನ್ ಪಾಯಿಂಟ್‍ಗಳನ್ನಾಗಿ ಮಾಡಿದ್ದು, ವ್ಯಾಕ್ಸಿನ್ ನೀಡುವ ಹಿಂದಿನ ದಿನ ಅಗತ್ಯ ವ್ಯಾಕ್ಸಿನ್‍ಗಳನ್ನು ವಾಹನದ ಮೂಲಕ ಕೋಲ್ಡ್ ಚೈನ್ ಪಾಯಿಂಟ್‍ಗಳಿಗೆ ಕಳುಹಿಸಿಕೊಡಲಾಗುತ್ತದೆ. ಕೋಲ್ಡ್ ಚೈನ್ ಪಾಯಿಂಟ್‍ಗಳಿಂದ ಲಸಿಕೆ ನೀಡುವ ಕೇಂದ್ರಗಳಿಗೆ ಲಸಿಕೆ ನೀಡುವ ದಿನ ತೆಗೆದುಕೊಂಡು ಹೋಗಲಾಗುತ್ತದೆ. ಇದಕ್ಕೆ ರಸ್ತೆ ಮಾರ್ಗ ನಕ್ಷೆಯನ್ನು ಈಗಾಗಲೇ ಸಿದ್ದಪಡಿಸಿಕೊಳ್ಳಲಾಗಿದೆ.

ಈ ವೇಳೆ ವಿಶೇಷ ಆಯುಕ್ತರು(ಆರೋಗ್ಯ) ರಾಜೇಂದ್ರ ಚೋಳನ್, ಮುಖ್ಯ ಆರೋಗ್ಯಾಧಿಕಾರಿ(ಸಾರ್ವಜನಿಕ ಆರೋಗ್ಯ) ಡಾ. ವಿಜೇಂದ್ರ ಹಾಗೂ ಇನ್ನಿತರೆ ಸಂಬಂಧಪಟ್ಟ ಅಧಿಕಾರಿಗಳು ಉಪಸ್ಥಿತರಿದ್ದರು.

ಮುಖ್ಯಾಂಶಗಳು:

-ಪಾಲಿಕೆ ವ್ಯಾಪ್ತಿಯ 760 ಕೇಂದ್ರಗಳ ಪೈಕಿ 6 ಕೇಂದ್ರಗಳಲ್ಲಿ ಜ.16 ರಂದು ಲಸಿಕೆ ನೀಡುತ್ತಿದ್ದು, ಉಳಿದ ಕೇಂದ್ರದಲ್ಲಿ ಕೇಂದ್ರ ಸರಕಾರ ಸೂಚನೆ ಬಂದ ಕೂಡಲೆ ಪ್ರಾರಂಭಿಸಲಾಗುವುದು ಎಂದರು.

-ಜ.16ರಿಂದ ಬೆಳಗ್ಗೆ 9ರಿಂದ ಸಂಜೆ 5 ಗಂಟೆಯವರೆಗೆ ಲಿಸಿಕೆ ನೀಡಲಿದ್ದು, ಮೂರು ದಿನದೊಳಗೆ ಮೊದಲ ಹಂತದಲ್ಲಿ ಗುರುತಿಸಿರುವ ಆರೋಗ್ಯ ಕಾರ್ಯಕರ್ತರಿಗೆ ಲಸಿಕೆ ನೀಡುವ ಕಾರ್ಯಕ್ರಮ ಮುಗಿಯಲಿದೆ.

-ಲಸಿಕೆ ನೀಡುವ ವೇಳೆ ಪ್ರತಿ ಲಸಿಕೆ ವಿತರಣೆ ಕೇಂದ್ರಕ್ಕೂ ಆಂಬ್ಯುಲೆನ್ಸ್ ಹಾಗೂ ಆಸ್ಪತ್ರೆಯನ್ನು ಲಿಂಕ್ ಮಾಡಲಾಗಿರುತ್ತದೆ. ಲಸಿಕೆ ನೀಡುವ ಸಮಯದಲ್ಲಿ ಫಲಾನುಭವಿಗಳ ಆರೋಗ್ಯದಲ್ಲಿ ಏರುಪೇರಾದಲ್ಲಿ ಕೂಡಲೆ ಆಂಬ್ಯುಲೆನ್ಸ್ ಮೂಲಕ ಆಸ್ಪತ್ರೆಗೆ ಕರೆದೊಯ್ಯಲು ವ್ಯವಸ್ಥೆ ಮಾಡಿಕೊಳ್ಳಲಾಗಿದೆ.

-ಮೊದಲನೇ ಹಂತದಲ್ಲಿ ಆರೋಗ್ಯ ಕಾರ್ಯಕರ್ತರಿಗೆ ಲಸಿಕೆ ನೀಡಲಾಗುತ್ತಿದೆ. ಎರಡನೇ ಹಂತದಲ್ಲಿ ಪಾಲಿಕೆಯ ಎಲ್ಲಾ ಸಿಬ್ಬಂದಿ, ಪೊಲೀಸ್ ಇಲಾಖೆ ಸಿಬ್ಬಂದಿ, ಕಂದಾಯ ಇಲಾಖೆ ಅಧಿಕಾರಿಗಳು ಸೇರಿದಂತೆ ಫ್ರಂಟ್ ಲೈನ್ ವರ್ಕರ್ಸ್‍ಗಳ ಪಟ್ಟಿ ಸಿದ್ಧಪಡಿಸಲಾಗುತ್ತಿದೆ.

-ಮೂರನೇ ಹಂತದಲ್ಲಿ ಮತದಾರರ ಪಟ್ಟಿಯ ಆಧಾರ ಮೂಲಕ ಫಲಾನುಭವಿಗಳನ್ನು ಗುರುತಿಸಿ 50 ವರ್ಷ ಹಾಗೂ ಅದಕ್ಕಿಂತ ಮೇಲ್ಪಟ್ಟವರಿಗೆ ಮತ್ತು 50 ವರ್ಷಕ್ಕಿಂತ ಕೆಳಗಿರುವ ಅನ್ಯ ಖಾಯಿಲೆಗಳಿಂದ ಬಳಲುತ್ತಿರುವ(ಕೋಮ್ ಆರ್ಬಿಟ್) ವ್ಯಕ್ತಿಗಳಿಗೆ ಲಸಿಕೆ ನೀಡಲಾಗುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News