ವರವರ ರಾವ್ ವಯಸ್ಸು, ಆರೋಗ್ಯ ಪರಿಗಣಿಸಿ: ಎನ್‌ಐಎಗೆ ಹೈಕೋರ್ಟ್ ಸಲಹೆ

Update: 2021-01-14 03:46 GMT

ಮುಂಬೈ, ಜ.14: ಎಲ್ಗರ್ ಪರಿಷತ್ ಪ್ರಕರಣದಲ್ಲಿ ಬಂಧಿತರಾಗಿರುವ ಖ್ಯಾತ ತೆಲುಗು ಕವಿ ಪಿ.ವಿ.ವರವರ ರಾವ್ ಅವರ ಜಾಮೀನು ಅರ್ಜಿಗೆ ಸಂಬಂಧಿಸಿದಂತೆ ಹೇಳಿಕೆ ಸಲ್ಲಿಸುವ ವೇಳೆ ಅವರ ವಯಸ್ಸು ಮತ್ತು ಆರೋಗ್ಯ ಸ್ಥಿತಿಯನ್ನು ಪರಿಗಣಿಸುವಂತೆ ಮುಂಬೈ ಹೈಕೋರ್ಟ್, ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಮತ್ತು ಮಹಾರಾಷ್ಟ್ರ ಸರಕಾರಕ್ಕೆ ಸಲಹೆ ನೀಡಿದೆ.

ರಾವ್ ಅವರ ಪತ್ನಿ ಪೆಂಡ್ಯಾಲಾ ಹೇಮಲತಾ ಅವರು ಪತಿಯ ಪರವಾಗಿ ಸಲ್ಲಿಸಿದ ಜಾಮೀನು ಅರ್ಜಿಯ ವಿಚಾರಣೆ ನಡೆಸುವ ವೇಳೆ ನ್ಯಾಯಮೂರ್ತಿ ಎಸ್.ಎಸ್.ಶಿಂಧೆ ನೇತೃತ್ವದ ನ್ಯಾಯಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿದೆ. ಅನಾರೋಗ್ಯ ಹಿನ್ನೆಲೆಯಲ್ಲಿ ರಾವ್ ಅವರಿಗೆ ಜಾಮೀನು ಮಂಜೂರು ಮಾಡುವಂತೆ ಅರ್ಜಿಯಲ್ಲಿ ಕೋರಲಾಗಿದೆ. ರಾವ್ ಅವರ ಆರೋಗ್ಯಸ್ಥಿತಿ ಹದಗೆಡುತ್ತಿರುವ ಬಗ್ಗೆ ಪತ್ನಿ ಸಲ್ಲಿಸಿದ ಮಧ್ಯಂತರ ಮನವಿಯ ಹಿನ್ನೆಲೆಯಲ್ಲಿ 2020ರ ನವೆಂಬರ್‌ನಲ್ಲಿ ರಾವ್ ಅವರನ್ನು ಹೈಕೋರ್ಟ್ ಮಧ್ಯಸ್ಥಿಕೆ ಬಳಿಕ ನಾನಾವತಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು.

ಹೆಚ್ಚುವರಿ ಸಾಲಿಸಿಟರ್ ಜನರಲ್ ಅನಿಲ್ ಸಿಂಗ್ ಅವರು ಎನ್‌ಐಎ ಪರವಾಗಿ ನಾನಾವತಿ ಆಸ್ಪತ್ರೆಯ ಎರಡು ಹೊಸ ವೈದ್ಯಕೀಯ ವರದಿಗಳನ್ನು ಸಲ್ಲಿಸಿದರು. ಇವುಗಳನ್ನು ಅಧ್ಯಯನ ಮಾಡಿದ ಬಳಿಕ ತಮ್ಮ ವಾದ ಮಂಡಿಸುವುದಾಗಿ ರಾವ್ ಪರ ವಕೀಲರು ಹೇಳಿದರು.

ಈ ಹಂತದಲ್ಲಿ "ರಾವ್ ಅವರ ವಯಸ್ಸು 80 ದಾಟಿದೆ. ಅವರ ವಯಸ್ಸು ಹಾಗೂ ಆರೋಗ್ಯ ಸ್ಥಿತಿಯನ್ನು ಪರಿಗಣಿಸಿ. ನಾವೆಲ್ಲರೂ ಮನುಷ್ಯರು. ಇದು ಅವರ ಆರೋಗ್ಯದ ಬಗೆಗಿನ ವಿಚಾರ" ಎಂದು ನ್ಯಾಯಮೂರ್ತಿಗಳು ಅಭಿಪ್ರಾಯಪಟ್ಟು, ವಿಚಾರಣೆ ಮುಂದೂಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News