ಟಿ-ಟ್ವೆಂಟಿ ಕ್ರಿಕೆಟ್: 37 ಎಸೆತಗಳಲ್ಲಿ ಶತಕ ಬಾರಿಸಿ ದಾಖಲೆ ನಿರ್ಮಿಸಿದ ‘ಕೇರಳದ ಅಝರುದ್ದೀನ್’

Update: 2021-01-14 06:47 GMT

ಮುಂಬೈ,ಜ.14: ಸಯ್ಯದ್ ಮುಷ್ತಾಕ್ ಅಲಿ ಟಿ20 ಟ್ರೋಫಿಯ ಇತಿಹಾಸದಲ್ಲಿ ಎರಡನೆ ಅತಿ ವೇಗದ ಶತಕ ಬಾರಿಸಿದ ಕೀರ್ತಿಗೆ ಕೇರಳದ ಮುಹಮ್ಮದ್ ಅಝರುದ್ದೀನ್ ಪಾತ್ರರಾಗಿದ್ದಾರೆ. ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಪಂದ್ಯಾಟದಲ್ಲಿ ಮುಂಬೈ ತಂಡದ ವಿರುದ್ಧ 26ರ ಹರೆಯದ ಅಝರುದ್ದೀನ್ ಕೇವಲ 37 ಎಸೆತಗಳಲ್ಲಿ ಶತಕ ಬಾರಿಸಿದ್ದಾರೆ. ಒಟ್ಟು 54 ಎಸೆತಗಳನ್ನು ಎದುರಿಸಿದ ಅವರು 137 ರನ್ ಗಳಿಸಿದ್ದು, ಇನ್ನಿಂಗ್ಸ್ ನಲ್ಲಿ 9 ಬೌಂಡರಿ ಮತ್ತು 11 ಸಿಕ್ಸರ್ ಗಳು ಸೇರಿವೆ.

ಕಾಸರಗೋಡಿನ ತಳಂಗರ ಎಂಬ ಪ್ರದೇಶದಲ್ಲಿ ಬಿ.ಕೆ ಮೊಯ್ದು ಮತ್ತು ನಫೀಸಾ ದಂಪತಿಗಳಿಗೆ 1994ರ ಮಾರ್ಚ್ ನಲ್ಲಿ ಜನಿಸಿದ ಻ಝರುದ್ದೀನ್ ಗೆ ಮೊದಲು ಅಜ್ಮಲ್ ಎಂದು ಹೆಸರಿಡುವುದಾಗಿ ತೀರ್ಮಾನಿಸಲಾಗಿತ್ತು. ಆದರೆ ಇವರ ಪ್ರಥಮ ಪುತ್ರ ಕಮರುದ್ದೀನ್ ಭಾರತೀಯ ಕ್ರಿಕೆಟ್ ತಂಡದ ನಾಯಕರಾಗಿದ್ದ ಮುಹಮ್ಮದ್ ಅಝರುದ್ದೀನ್ ರ ಅಭಿಮಾನಿಯಾಗಿದ್ದ ಕಾರಣ ತನ್ನ ಕಿರಿಯ ಸಹೋದರನಿಗೆ ‘ಮುಹಮ್ಮದ್ ಅಝರುದ್ದೀನ್’ ಎಂದು ಹೆಸರಿಟ್ಟಿದ್ದಾಗಿ timesofindia.com ವರದಿ ಮಾಡಿದೆ.

ಇದೀಗ 26 ವರ್ಷಗಳಲ್ಲಿ ಕೇರಳದ ಈ ಅಝರುದ್ದೀನ್ ತನ್ನ ಸಹೋದರನ ಕನಸನ್ನು ಸಾಕ್ಷಾತ್ಕರಿಸುವಲ್ಲಿ ಮುನ್ನಡೆಯುತ್ತಿದ್ದಾರೆ. “ನಾನು ಭಾರತ ತಂಡದ ಮಾಜಿ ಕಪ್ತಾನ ಅಝರುದ್ದೀನ್ ರನ್ನು ಟಿವಿಯಲ್ಲಿ ನೋಡಿ ಬೆಳೆದವನಲ್ಲ. ನನ್ನ ಸಹೋದರರೆಲ್ಲಾ ಅವರ ಅಭಿಮಾನಿಗಳು. ಬಳಿಕ ನಾನು ಯೂಟ್ಯೂಬ್ ನಲ್ಲಿ ಅವರ ಆಟದ ಶೈಲಿಯನ್ನು ನೋಡಿ ಪ್ರಭಾವಿತನಾಗಿದ್ದೆ” ಎಂದು ಅಝರುದ್ದೀನ್ ಹೇಳುತ್ತಾರೆ.

“ಆತ ಭಾರತ ಕ್ರಿಕೆಟ್ ತಂಡ ಅಝರುದ್ದೀನ್ ರೀತಿಯಲ್ಲೇ ಬ್ಯಾಟ್ ಬೀಸುತ್ತಾರೆ. ಅವರು ಅಝರುದ್ದೀನ್ ರಂತೆಯೇ ಮುಂಗೈಯನ್ನು ಬಳಸುವಲ್ಲಿ ಪರಿಣಿತರಾಗಿದ್ದಾರೆ. ಎಷ್ಟೇ ಒತ್ತಡದ ಸಂದರ್ಭದಲ್ಲೂ ಉತ್ತಮ ಪ್ರದರ್ಶನ ತೋರುತ್ತಾರೆ. ಇವರಿಗೆ ಉತ್ತಮ ಭವಿಷ್ಯವಿದೆ” ಎಂದು ಅವರ ಕೇರಳ ಕ್ರಿಕೆಟ್ ಅಸೋಸಿಯೇಶನ್ ನ ಕೋಚ್ ಬಿಜುಮೋನ್ ಎನ್. ಹೇಳುತ್ತಾರೆ.

ಸದ್ಯ ಮುಹಮ್ಮದ್ ಅಝರುದ್ದೀನ್ ಕೇರಳದ ರಣಜಿ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ. ಕರ್ನಾಟಕ ಗಡಿ ಭಾಗದ ಕಾಸರಗೋಡಿನ ಯುವಕ ತಮ್ಮ ಅದ್ಭುತ ಪ್ರದರ್ಶನದ ಮೂಲಕ ತಮ್ಮ ಹೆಸರಿಗೆ ಅನ್ವರ್ಥವಾಗಿದ್ದಾರೆ. ಮುಂದೆ ಐಪಿಎಲ್ ಹಾಗೂ ಭಾರತೀಯ ಕ್ರಿಕೆಟ್ ತಂಡದಲ್ಲೂ ಸ್ಥಾನ ಗಿಟ್ಟಿಸಿಕೊಳ್ಳುತ್ತಾರೆಯೇ ಎಂದು ಕಾದು ನೋಡಬೇಕಾಗಿದೆ.

Full View Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News