ಅಪ್ರಾಪ್ತ ವಯಸ್ಸಿನ ಬಾಲಕರಿಗೆ ಲೈಂಗಿಕ ಕಿರುಕುಳ ನೀಡಿದ ಬಿಜೆಪಿ ಮುಖಂಡನ ಬಂಧನ

Update: 2021-01-14 08:56 GMT

ಲಕ್ನೋ,ಜ.14: ಅಪ್ರಾಪ್ತ ವಯಸ್ಸಿನ ಬಾಲಕರಿಗೆ ಲೈಂಗಿಕ ಕಿರುಕುಳ ನೀಡಿದ್ದಾರೆಂಬ ಆರೋಪದ ಮೇರೆಗೆ ಬಿಜೆಪಿ ಮುಖಂಡನನ್ನು ಬುಧವಾರ ಪೊಲೀಸರು ಬಂಧಿಸಿದ್ದಾರೆಂದು theindianexpress.com ವರದಿ ಮಾಡಿದೆ. ಬಿಜೆಪಿ ಕಚೇರಿಯ ಅಧ್ಯಕ್ಷನಾಗಿದ್ದ ರಾಮ್‌ ಬಿಹಾರಿ ಎಂಬಾತನನ್ನು ಪೊಲೀಸರು ಬಂಧಿಸಿ ಜಲೌನ್‌ ನ ಸ್ಥಳೀಯ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ನ್ಯಾಯಾಲಯವು ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದೆ ಎಂದು ತಿಳಿದು ಬಂದಿದೆ.

ಬಿಜೆಪಿ ಪಕ್ಷಕ್ಕೆ ಸೇರುವ ಮುಂಚೆ ರಾಮ್‌ ಬಿಹಾರಿ ಕಂದಾಯ ಅಧಿಕಾರಿಯಾಗಿದ್ದು, 2017ರಲ್ಲಿ ನಿವೃತ್ತಿ ಹೊಂದಿದ ಬಳಿಕ ರಾಜಕೀಯ ಸೇರಿದ್ದ ಎನ್ನಲಾಗಿದೆ. ಈತ ಅಪ್ರಾಪ್ತ ವಯಸ್ಸಿನ ಮಕ್ಕಳಿಗೆ ಲೈಂಗಿಕ ಕಿರುಕುಳ ನೀಡಿ, ಅದನ್ನು ತನ್ನ ಕೊಠಡಿಯಲ್ಲಿರುವ ಸಿಸಿಟಿವಿ ಕ್ಯಾಮರಾದಲ್ಲಿ ರೆಕಾರ್ಡ್‌ ಮಾಡುತ್ತಿದ್ದ ಎಂದು ವರದಿ ತಿಳಿಸಿದೆ. ಇಬ್ಬರು ಬಾಲಕರನ್ನು ಮಾತ್ರವಲ್ಲದೇ ಇನ್ನೂ ಐವರು ಅಪ್ರಾಪ್ತ ವಯಸ್ಸಿನ ಬಾಲಕರಿಗೂ ಈತ ಕಿರುಕುಳ ನೀಡಿದ್ದಾನೆ ಎಂದು ಬಾಲಕರು ಆರೋಪಿಸಿದ್ದಾರೆ.

ದಿನಗೂಲಿ ಕೆಲಸ ಮಾಡುವವರ ಮಕ್ಕಳನ್ನೇ ಈತ ಬಳಸಿಕೊಳ್ಳುತ್ತಿದ್ದ ಎಂದು ವರದಿ ತಿಳಿಸಿದೆ. ಪ್ರಕರಣಕ್ಕೆ ಕುರಿತಾದಂತೆ ಪೊಲೀಸರು ಬಿಹಾರಿ ಮನೆಗೆ ದಾಳಿ ನಡೆಸಿದ್ದು, ಈ ವೇಳೆ ಹಲವಾರು ಆಕ್ಷೇಪಾರ್ಹ ವೀಡಿಯೋಗಳಿದ್ದ ಲ್ಯಾಪ್‌ ಟಾಪ್‌, ಡಿವಿಡಿ ಹಾಗೂ ಇನ್ನಿತರ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

ಈ ಕುರಿತು ಮಾತನಾಡಿದ ಬಿಜೆಪಿ ಜಲೌನ್‌ ಜಿಲ್ಲಾಧ್ಯಕ್ಷ ರಾಮೇಂದ್ರ ಸಿಂಗ್‌, ಪ್ರಕರಣವು ಬೆಳಕಿಗೆ ಬರುತ್ತಿದ್ದಂತೆಯೇ ಬಿಹಾರಿಯನ್ನು ಪಕ್ಷದಿಂದ ಉಚ್ಛಾಟಿಸಲಾಗಿದೆ. ಆತನ ಪ್ರಾಥಮಿಕ ಸದಸ್ಯತ್ವವನ್ನೂ ರದ್ದುಪಡಿಸಲಾಗಿದೆ ಎಂದು ಹೇಳಿಕೆ ನೀಡಿದ್ದಾರೆ ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News