ವೈದ್ಯಕೀಯ ವಿದ್ಯಾರ್ಥಿಗಳನ್ನೇ ಗುರಿಯಾಗಿಸಿ 500ಕ್ಕೂ ಹೆಚ್ಚು ಲ್ಯಾಪ್ ಟಾಪ್ ಗಳನ್ನು ಕದ್ದ ಕಳ್ಳ: ಕಾರಣವೇನು ಗೊತ್ತೇ?

Update: 2021-01-14 12:24 GMT

ರಾಜಕೋಟ್,ಜ.14: ಆರು ವರ್ಷಗಳ ಹಿಂದೆ ಕೆಲ ವೈದ್ಯಕೀಯ ವಿದ್ಯಾರ್ಥಿಗಳು ಚೆನ್ನೈನಲ್ಲಿ ತನ್ನ ಪ್ರಿಯತಮೆಯ ಆಕ್ಷೇಪಾರ್ಹ ವೀಡಿಯೋಗಳನ್ನು ಚಿತ್ರೀಕರಿಸಿ ಅದನ್ನು ವೈರಲ್ ಮಾಡಿದ ನಂತರ ಇಡೀ ವೈದ್ಯಕೀಯ ವಿದ್ಯಾರ್ಥಿ ಸಮುದಾಯವನ್ನು ದ್ವೇಷಿಸಲು ಆರಂಭಿಸಿದ ಯುವಕನೊಬ್ಬ ವೈದ್ಯಕೀಯ ವಿದ್ಯಾರ್ಥಿಗಳನ್ನೇ ಟಾರ್ಗೆಟ್ ಮಾಡಿ ದೇಶದ ವಿವಿಧೆಡೆಗಳ ಮೆಡಿಕಲ್ ಕಾಲೇಜ್‍ಗಳ ಹಾಸ್ಟೆಲ್‍ನಿಂದ 500ಕ್ಕೂ ಹೆಚ್ಚು ಲ್ಯಾಪ್ ಟಾಪ್‍ಗಳನ್ನು ಕದ್ದಿರುವ ಅಪರೂಪದ ಪ್ರಕರಣ  ಈ ಲ್ಯಾಪ್ ಟಾಪ್ ಕಳ್ಳನ ಬಂಧನದೊಂದಿಗೆ ಅನಾವರಣಗೊಂಡಿದೆ.

ಬುಧವಾರ ಜಾಮ್ನಗರ್ ಪೊಲೀಸರು ತಮಿಳ್‍ಸೆಲ್ವನ್ ಕಣ್ಣನ್ ಎಂಬ 24 ವರ್ಷದ ಯುವಕನನ್ನು ಬಂಧಿಸಿದಾಗ ಪೊಲೀಸರಿಗೆ ಮೇಲಿನ ಕಥೆ ತಿಳಿದು ಬಂದಿತ್ತು. ಕಣ್ಣನ್ 2015ರಿಂದ ಲ್ಯಾಪ್ ಟಾಪ್‍ಗಳನ್ನು ಕದಿಯುತ್ತಿದ್ದ ಎಂದೂ ತಿಳಿದು ಬಂದಿದೆ.

ಜಾಮ್ನಗರ್‌ ನ ಎಂಪಿ ಶಾ ಮೆಡಿಕಲ್ ಕಾಲೇಜ್‍ನ ವಿದ್ಯಾರ್ಥಿನಿಯರ ಹಾಸ್ಟೆಲ್‍ನ ಒಂದು ಕೊಠಡಿಯಿಂದ ಆರು ಲ್ಯಾಪ್ ಟಾಪ್ ಗಳು ಕಳವಾದ ನಂತರ ತನಿಖೆ ಆರಂಭಿಸಿದ ಪೊಲೀಸರು ತಮಿಳ್‍ಸೆಲ್ವನ್‍ನನ್ನು ಬಂಧಿಸಿದ್ದಾರೆ. ಈತ ಅಂತರ್ಜಾಲದಲ್ಲಿ ವೈದ್ಯಕೀಯ ಕಾಲೇಜುಗಳ ಹೆಸರು ವಿಳಾಸಗಳನ್ನು ಹುಡುಕುತ್ತಿದ್ದ ಹಾಗೂ ಲ್ಯಾಪ್ ಟಾಪ್ ಗಳನ್ನೇ ಕದ್ದು ಮಾರಾಟ ಮಾಡುತ್ತಿದ್ದ. ಆರಂಭದಲ್ಲಿ ದಕ್ಷಿಣ ಭಾರತದ ಕಾಲೇಜುಗಳನ್ನು ಟಾರ್ಗೆಟ್ ಮಾಡಿದ್ದ ಈತ  ನಂತರ ಉತ್ತರ  ಭಾರತದತ್ತ ಹೆಜ್ಜೆ ಹಾಕಿದ್ದ. ಗುಜರಾತ್‍ನ ಜಾಮ್ನಗರ್ ಹಾಸ್ಟೆಲ್‍ನಲ್ಲಿ ಡಿಸೆಂಬರ್ 26ರಂದು ಆತ ಲ್ಯಾಪ್ ಟಾಪ್ ಕಳವು ಮಾಡಿದ ನಂತರ ಇದೀಗ ಪೊಲೀಸರ ಅತಿಥಿಯಾಗಿದ್ದಾನೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News