ಕೇರಳ: ಜಿಲ್ಲಾಧಿಕಾರಿಯ ವರ್ಗಾವಣೆಗೆ ಕಣ್ಣೀರಾದ ಜನತೆ; ಕಾರಣವೇನು ಗೊತ್ತೇ?

Update: 2021-01-14 17:29 GMT
photo: facebook/PBNoohIAS

ಪತ್ತನತ್ತಿಟ್ಟಂ,ಜ.14: ಕೇರಳದ ಪತ್ತನತ್ತಿಟ್ಟಂ ಜಿಲ್ಲೆಯಲ್ಲಿ 2018ರ ಪ್ರಳಯದ ಸಂದರ್ಭದಲ್ಲಿ ಸಂಪೂರ್ಣ ಜನಜೀವನವೇ ಅಸ್ತವ್ಯಸ್ತವಾಗಿತ್ತು. ಈ ಸಂದರ್ಭದಲ್ಲಿ ಬಿಳಿ ವಸ್ತ್ರವನ್ನು ಧರಿಸಿರುವ ವ್ಯಕ್ತಿಯೋರ್ವರು ತಮ್ಮ ಹೆಗಲ ಮೇಲೆ ಗೋಣಿಚೀಲವನ್ನು ಹೊತ್ತುಕೊಂಡು ಹೋಗುತ್ತಿರುವ ಫೋಟೊವೊಂದು ಸಾಮಾಜಿಕ ತಾಣದಲ್ಲಿ ವೈರಲ್‌ ಆಗಿತ್ತು. ಈ ವ್ಯಕ್ತಿ ಬೇರಾರೂ ಅಲ್ಲ, ಪತ್ತನಂತಿಟ್ಟ ಜಿಲ್ಲಾಧಿಕಾರಿಯಾಗಿದ್ದ ಪಿ.ಬಿ ನೂಹ್‌. ಎರಡು ಬಾರಿಯ ಪ್ರಳಯ, ಕೋವಿಡ್‌, ಲಾಖ್‌ ಡೌನ್‌ ಇವೆಲ್ಲವನ್ನೂ ಸಮರ್ಪಕವಾಗಿ ನಿಭಾಯಿಸಿದ್ದ ಪಿ.ಬಿ. ನೂಹ್‌ ಈಗ ವರ್ಗಾವಣೆಗೊಳ್ಳುತ್ತಿದ್ದಾರೆ.

ಪತ್ತನಂತಿಟ್ಟದಿಂದ ಪಾಲಕ್ಕಾಡ್‌ ಜಿಲ್ಲೆಗೆ ಸಹಕಾರಿ ರಿಜಿಸ್ಟ್ರಾರ್‌ ಆಗಿ ವರ್ಗಾವಣೆಗೊಳ್ಳುತ್ತಿರುವ ಕುರಿತು ನೂಹ್‌ ರವರು ತಮ್ಮ ಫೇಸ್‌ ಬುಕ್‌ ನಲ್ಲಿ ತಿಳಿಸಿದ್ದೇ ತಡ, ಅವರ ಪೋಸ್ಟ್‌ ಗೆ ಕಮೆಂಟ್‌ ಗಳ ಸುರಿಮಳೆಯೇ ಹರಿದು ಬಂದಿದೆ. ತಮ್ಮ ಅಧಿಕೃತ ಪೇಸ್ಬುಕ್‌ ಪೇಜ್‌ ನಲ್ಲಿ “ಹೋಗಲು ಸಮಯವಾಗಿದೆ, ಪ್ರೀತಿಯ ಪತ್ತನಂತಿಟ್ಟ, ನಿಮ್ಮನ್ನೆಲ್ಲಾ ಮಿಸ್‌ ಮಾಡಿಕೊಳ್ಳುತ್ತಿದ್ದೇನೆ” ಎಂದು ಬರೆದುಕೊಂಡಿದ್ದಾರೆ. ಕೂಡಲೇ ಹಲವಾರು ಪ್ರತಿಕ್ರಿಯೆಗಳು, ಧನ್ಯವಾದ ಮೆಸೇಜ್‌ ಗಳು ಹರಿದು ಬರಲು ಪ್ರಾರಂಭವಾಯಿತು.

ಪಿ.ಬಿ ನೂಹ್‌ ಜೂನ್‌ 2018ರಲ್ಲಿ ಪತ್ತನಂತಿಟ್ಟ ಜಿಲ್ಲಾಧಿಕಾರಿಯಾಗಿ ನೇಮಕಗೊಂಡ ಎರಡೇ ತಿಂಗಳಿನಲ್ಲಿ ಕೇರಳವು ಅತೀ ದೊಡ್ಡ ಪ್ರಳಯಕ್ಕೀಡಾಯಿತು. ಈ ಸಂದರ್ಭದಲ್ಲಿ ಅಲ್ಲಿನ ನಿವಾಸಿಗಳನ್ನು ತೆರವುಗೊಳಿಸುವ ಕಾರ್ಯವನ್ನು ಜಿಲ್ಲಾಧಿಕಾರಿಗಳಿಗೆ ವಹಿಸಲಾಯಿತು. ನೂಹ್‌ ರೊಂದಿಗೆ ಸಹಕರಿಸಲು ಈ ಹಿಂದಿನ ಜಿಲ್ಲಾಧಿಕಾರಿ ಹರಿಕಿಶೋರ್‌ ರನ್ನೂ ಸರಕಾರ ನೇಮಿಸಿತು. ಇವರಿಬ್ಬರೂ ಸೇರಿಕೊಂಡು ಸರಿಸುಮಾರು ದೈನಂದಿನ 20 ಗಂಟೆಗಳ ಕಾಲ ಕೆಲಸ ನಿರ್ವಹಿಸಿದರು. ಕಂಟ್ರೋಲ್‌ ರೂಮ್‌ ಗಳನ್ನು ಸ್ಥಾಪಿಸಿದರು. ಜನರ ನಡುವೆಯೇ ನಿಂತು ಹೆಗಲು ನೀಡಿ ಕೆಲಸ ನಿರ್ವಹಿಸಿದರು. ವಸ್ತುಗಳ ಸಾಗಾಟದಲ್ಲೂ ನೆರವಾದರು.

ಫೋಟೊ: thenewsminute.com

2019ರಲ್ಲೂ ಪ್ರಳಯ ಮರುಕಳಿಸಿತು. ಈ ಸಂದರ್ಭದಲ್ಲೂ ಪಿ.ಬಿ ನೂಹ್ ಅದನ್ನು ಸಮರ್ಪಕವಾಗಿ ನಿರ್ವಹಿಸಿದರು. ಪ್ರಖ್ಯಾತ ತೀರ್ಥಕ್ಷೇತ್ರ ಶಬರಿಮಲೆಯೂ ಪತ್ತನತ್ತಿಟ್ಟಂ ಜಿಲ್ಲೆಯಲ್ಲಿದೆ. ಸುಪ್ರೀಂ ಕೋರ್ಟ್‌ ಮಹಿಳೆಯರಿಗೂ ಶಬರಿಮಲೆ ಪ್ರವೇಶ ಮಾಡಬಹುದು ಎಂದು ತೀರ್ಪು ಹೊರಡಿಸಿದಾಗ ಹಲವಾರು ಪ್ರತಿಭಟನೆಗಳು, ಹಿಂಸಾಚಾರಗಳು ನಡೆದವು. ಈ ಸಂದರ್ಭದಲ್ಲಿ ಪರಿಸ್ಥಿತಿಯನ್ನು ತಿಳಿಗೊಳಿಸಲು ನೂಹ್‌ ಪಟ್ಟ ಶ್ರಮ ಅಪಾರ ಎನ್ನುತ್ತಾರೆ ಜಿಲ್ಲೆಯ ಜನತೆ.

ಇನ್ನು2020ರಲ್ಲಿ ಪ್ರಳಯ ಉಂಟಾಗದಿದ್ದರೂ ಕೋವಿಡ್‌ ಸಾಂಕ್ರಾಮಿಕ ಪ್ರಾರಂಭವಾಯಿತು. ಪತ್ತನತ್ತಿಟ್ಟಂ ಜಿಲ್ಲೆಯಲ್ಲಿ ದೇಶದಲ್ಲಿಯೇ ಮೊದಲ 5 ಪ್ರಕರಣಗಳು ದಾಖಲಾಗಿತ್ತು.  ದೇಶದ ಮೊದಲ ಹಾಟ್ ಸ್ಪಾಟ್‌ ಪತ್ತನತ್ತಿಟ್ಟಂ ಆಗಿತ್ತು. ಈ ಸಂದರ್ಭದಲ್ಲಿ ಸೋಂಕಿತರು ಪ್ರಯಾಣಿಸಿದ ಮ್ಯಾಪ್‌ ಅನ್ನು ಮೊದಲು ತಯಾರಿಸಿದ್ದು ಪತ್ತನತ್ತಿಟ್ಟಂ ಜಿಲ್ಲೆ ಆಗಿತ್ತು. ದೇಶದ ಉಳಿದ ಭಾಗಗಳ್ಲಿ ಮೊದಲ ಪ್ರಕರಣ ಕಂಡು ಬರುವ ಮೊದಲೇ ಈ ಜಿಲ್ಲೆಯಲ್ಲಿ ಲಾಕ್‌ ಡೌನ್‌, ಕಾಲ್ ಸೆಂಟರ್‌ ಗಳು, ಅಂತಾರಾಷ್ಟ್ರೀಯ ಪ್ರಯಾಣಿಕರ ತಪಾಸಣೆ ಹಾಗೂ ಕ್ವಾರಂಟೈನ್‌ ವ್ಯವಸ್ಥೆಯನ್ನು ಪ್ರಾರಂಭಿಸಿದ ಕೀರ್ತಿ ಪಿ.ಬಿ ನೂಹ್‌ ರಿಗೆ ಸಲ್ಲುತ್ತದೆ.

ದಿನವೂ ಫೇಸ್‌ ಬುಕ್‌ ಮುಖಾಂತರ ಲೈವ್‌ ಬಂದು, ಕೋವಿಡ್‌ ಸೋಂಕಿತರ ಕುರಿತು ಮಾಹಿತಿ, ಪರಿಸ್ಥಿತಿಯ ಅವಲೋಕನ ಮುಂತಾದವುಗಳನ್ನು ಜನರ ಮುಂದಿಡುತ್ತಿದ್ದರು. ಇದೀಗ ಆ ಜಿಲ್ಲೆಯನ್ನು ತೊರೆದು ಹೋಗುತ್ತಿರುವ ವೇಳೆ ಸಹಜವಾಗಿಯೇ ನೂಹ್‌ ರಿಗೆ ಧನ್ಯವಾದದ ಮಹಾಪೂರವೇ ಹರಿದು ಬರಲು ಪ್ರಾರಂಭವಾಗಿದೆ.

“ನೀವು ತೋರಿಸಿರುವ ದಾರಿಯಲ್ಲಿ ನಾವು ನಡೆಯುತ್ತೇವೆ. ಕಳೆದ ಮೂರು ವರ್ಷಗಳು ನಮಗೆ ಪರೀಕ್ಷೆಯ ಅವಧಿಯಾಗಿತ್ತು. ನಾವು ಈ ಪರೀಕ್ಷೆಯನ್ನು ನಿಮ್ಮಿಂದಾಗಿ ಗೆದ್ದುಕೊಂಡಿದ್ದೇವೆ” ಎಂದು ವ್ಯಕ್ತಿಯೋರ್ವರು ಪ್ರತಿಕ್ರಿಯಿಸಿದ್ದಾರೆ. “ನಾವು ನಿಮ್ಮ ಕೈಗಳಲ್ಲಿ ಅತ್ಯುತ್ತಮ ಸುರಕ್ಷತೆಯನ್ನು ಅನುಭವಿಸಿದ್ದೇವೆ. ನಿಮ್ಮ ಕುರಿತು ನಮಗೆ ಹೆಮ್ಮೆಯಿದೆ ಎಂದು ಇನ್ನೋರ್ವ ಬಳಕೆದಾರರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News