×
Ad

ರಾಷ್ಟ್ರಾದ್ಯಂತ 700 ಕಿ.ಮೀ. ಮೆಟ್ರೋ ವಿಸ್ತರಣೆ: ಕೇಂದ್ರ ಸಚಿವ ಹರ್‌ದೀಪ್ ಸಿಂಗ್‍ಪುರಿ

Update: 2021-01-14 21:43 IST

ಬೆಂಗಳೂರು, ಜ.14: ರಾಜಧಾನಿ ಬೆಂಗಳೂರಿನಲ್ಲಿ ಹೊಸದಾಗಿ 6 ಕಿ.ಮೀ. ಮೆಟ್ರೋ ರೈಲು ಮಾರ್ಗ ವಿಸ್ತರಿಸುವುದರೊಂದಿಗೆ ರಾಷ್ಟ್ರದಲ್ಲಿ 18 ಜಿಲ್ಲೆಗಳಲ್ಲಿ 700 ಕಿ.ಮೀ. ಮೆಟ್ರೋ ಜಾಲ ರೂಪಿಸಲಾಗಿದೆ ಎಂದು ಕೇಂದ್ರ ವಸತಿ ಮತ್ತು ನಗರಾಭಿವೃದ್ಧಿ ರಾಜ್ಯ ಸಚಿವ ಹರ್‌ದೀಪ್ ಸಿಂಗ್ ಪುರಿ ತಿಳಿಸಿದರು.

ಗುರುವಾರ ನಗರದ ಯಲಚೇನಹಳ್ಳಿ ಮೆಟ್ರೋ ನಿಲ್ದಾಣದಿಂದ ರೇಷ್ಮೆ ಸಂಸ್ಥೆ ಮೆಟ್ರೋ ನಿಲ್ದಾಣದವರೆಗೆ 6.29 ಕಿ.ಮೀ. ಉದ್ದ ನೂತನ ಮೆಟ್ರೋ ಮಾರ್ಗದಲ್ಲಿ ರೈಲು ಸಂಚಾರಕ್ಕೆ ಅವರು ವಿಡಿಯೋ ಸಂವಾದ ಮೂಲಕ ಹಸಿರು ನಿಶಾನೆ ತೋರಿ ಅವರು ಮಾತನಾಡಿದರು.

ಮೆಟ್ರೋ ಯೋಜನೆಗಳ ಅನುಷ್ಠಾನಕ್ಕೆ ವೇಗ ನೀಡಲಾಗುತ್ತಿದೆ. ನಗರಗಳ ಬೆಳವಣಿಗೆಗೆ ತಕ್ಕಂತೆ ಮೆಟ್ರೋ ಯೋಜನೆಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ. ಸದ್ಯ 18 ನಗರಗಳಲ್ಲಿ 700 ಕಿ.ಮೀ.ಗೂ ಹೆಚ್ಚಿನ ಉದ್ದದ ಮೆಟ್ರೋ ಮಾರ್ಗ ನಿರ್ಮಾಣಗೊಂಡಿದೆ. ಅದನ್ನು 25 ನಗರಗಳಿಗೆ ವಿಸ್ತರಿಸಲು ಈಗಾಗಲೆ ಅನುಮತಿ ನೀಡಲಾಗಿದೆ. 2014ರಿಂದೀಚೆಗೆ 454 ಕಿ.ಮೀ. ಉದ್ದದ ಹೊಸ ಮೆಟ್ರೋ ಮಾರ್ಗ ನಿರ್ಮಾಣಕ್ಕೆ ಚಾಲನೆ ನೀಡಲಾಗಿದೆ. 2025ರ ವೇಳೆಗೆ 1,700 ಕಿ.ಮೀ. ಉದ್ದದ ಮೆಟ್ರೋ ಮಾರ್ಗ ಅನುಷ್ಠಾನದ ಗುರಿ ಹೊಂದಲಾಗಿದೆ ಎಂದರು.

ಕೊರೋನದಿಂದ ಪ್ರಯಾಣಿಕರ ಇಳಿಕೆ: ಕೊರೋನ ಮತ್ತು ಲಾಕ್‍ಡೌನ್‍ನಿಂದಾಗಿ ಮೆಟ್ರೋ ರೈಲು ಪ್ರಯಾಣಿಕರ ಸಂಖ್ಯೆಯಲ್ಲಿ ಭಾರಿ ಇಳಿಕೆಯಾಗಿದೆ. ಕೊರೋನ ಪೂರ್ವದಲ್ಲಿ 85 ಲಕ್ಷ ಜನರು ಮೆಟ್ರೋ ರೈಲಿನಲ್ಲಿ ಸಂಚರಿಸುತ್ತಿದ್ದರು. ಅದರಲ್ಲೀಗ ಶೇ. 25 ಪ್ರಯಾಣಿಕರಷ್ಟೇ ಮೆಟ್ರೋ ರೈಲಿನಲ್ಲಿ ಪ್ರಯಾಣಿಸುತ್ತಿದ್ದಾರೆ ಎಂದು ತಿಳಿಸಿದರು.

ದೇಶದ ಎಲ್ಲ ಮೆಟ್ರೋಗಳಲ್ಲಿ ಏಕರೂಪ ಶುಲ್ಕ ವ್ಯವಸ್ಥೆ ಜಾರಿಗೆ ತರುವ ಸಲುವಾಗಿ ಕಾಮನ್‍ಮೊಬಿಲಿಟಿ ಕಾರ್ಡ್‍ವ್ಯವಸ್ಥೆ ಜಾರಿಗೆ ತರಲಾಗಿದೆ. ಸದ್ಯ ಹೊಸದಿಲ್ಲಿಯಲ್ಲಿ ಅದನ್ನು ಅನುಷ್ಠಾನ ಮಾಡಲಾಗಿದ್ದು, ದೇಶದ ಇತರ ನಗರಗಳಿಗೂ ಅದು ವಿಸ್ತರಿಸಲಾಗುವುದು. ಅದರ ಜತೆಗೆ ಚಾಲಕ ರಹಿತ ಮೆಟ್ರೋ ವ್ಯವಸ್ಥೆ, 2ನೇ ಹಂತದ ನಗರಗಳಲ್ಲಿ ಮೆಟ್ರೋ ಲೈಟ್, ಮೆಟ್ರೋ ನಿಯೋ ವ್ಯವಸ್ಥೆ ಜಾರಿಗೂ ಸಿದ್ಧತೆ ನಡೆಸಲಾಗಿದೆ. ಅದರ ಜತೆಗೆ ಕೊಚ್ಚಿಯಲ್ಲಿ ವಾಟರ್‍ಮೆಟ್ರೋ ನಿರ್ಮಾಣಕ್ಕೂ ನಿರ್ಧರಿಸಲಾಗಿದೆ ಎಂದು ಹೇಳಿದರು.

ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮಾತನಾಡಿ, 2025ರ ವೇಳೆಗೆ ಬೆಂಗಳೂರಿನಲ್ಲಿ 172 ಕಿ.ಮೀ. ಮೆಟ್ರೊ ಜಾಲ ನಿರ್ಮಿಸಲಾಗುವುದು. ಅಲ್ಲದೆ, ಮುಂದಿನ ವರ್ಷಗಳಲ್ಲಿ ಬೆಂಗಳೂರಿನ ಚಿತ್ರಣ ಬದಲಿಸುವ ಕೆಲಸ ಮಾಡಲಾಗುವುದು. ದೇಶದ ಐಟಿ ಹಬ್ ಆಗಿರುವ ಬೆಂಗಳೂರಿನಿಂದ ಶೇ.33 ಐಟಿ ಉತ್ಪನ್ನಗಳ ನಿರ್ಮಾಣ ಮಾಡಲಾಗುತ್ತಿದೆ. ಹೀಗಾಗಿ ಇಲ್ಲಿ ಸಾರ್ವಜನಿಕ ಸಮೂಹ ಸಾರಿಗೆಗಳ ಅಭಿವೃದ್ಧಿಯಾಗಬೇಕಿದ್ದು, ಆ ಕಾರ್ಯದಲ್ಲಿ ಸರಕಾರ ತೊಡಗಿದೆ ಎಂದರು.

75ನೆ ಸ್ವಾತಂತ್ರ್ಯ ದಿನಚಾರಣೆ ಸಂದರ್ಭದಲ್ಲಿ ಬೆಂಗಳೂರಿನಲ್ಲಿ 75 ಕಿ.ಮೀ. ಉದ್ದದ ಮೆಟ್ರೋ ಮಾರ್ಗ ಸೇವೆಗೆ ಲಭ್ಯವಾಗಲಿದೆ. ಅದೇ ರೀತಿ, ಮುಂದಿನ 2 ವರ್ಷದಲ್ಲಿ ಬೆಂಗಳೂರಿನಲ್ಲಿ ವಿಶ್ವದರ್ಜೆಯ ಸಾರಿಗೆ ಮೂಲಸೌಕರ್ಯ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಇದೇ ವೇಳೆ ನಾಗಸಂದ್ರ ಮತ್ತು ಎಂ.ಜಿ.ರಸ್ತೆ ಮೆಟ್ರೋ ನಿಲ್ದಾಣಗಳಿಗೆ ತೆರಳಲು ಅನುಕೂಲವಾಗುವಂತೆ ನಿಮಿರ್ಸಲಾಗಿರುವ ಪಾದಚಾರಿ ಮೇಲ್ಸೇತುವೆಯನ್ನು ವರ್ಚುವಲ್‍ ಮೂಲಕ ಉದ್ಘಾಟಿಸಲಾಯಿತು.

ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ, ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ, ಸಚಿವರಾದ ಬಿ.ಎ.ಬಸವರಾಜು, ಎಸ್.ಟಿ.ಸೋಮಶೇಖರ್, ಆರ್.ಅಶೋಕ್, ಎಸ್.ಸುರೇಶ್‍ಕುಮಾರ್, ಬಿಡಿಎ ಅಧ್ಯಕ್ಷ ಎಸ್.ಆರ್.ವಿಶ್ವನಾಥ್, ಸಂಸದರಾದ ಪಿ.ಸಿ.ಮೋಹನ್, ಕೆ.ಸಿ.ರಾಮಮೂರ್ತಿ, ಶಾಸಕರಾದ ಎಂ.ಕೃಷ್ಣಪ್ಪ, ಸತೀಶ್‍ರೆಡ್ಡಿ ಸೇರಿದಂತೆ ಪ್ರಮುಖರಿದ್ದರು.

ಪ್ರತಿ 10 ನಿಮಿಷಕ್ಕೊಂದು ರೈಲು ಸಂಚರಿಸಲಿದ್ದು, ಶನಿವಾರ ಮತ್ತು ರವಿವಾರ 15 ನಿಮಿಷಕ್ಕೊಂದು ರೈಲು ಸೇವೆ ನೀಡಲಿವೆ. ಈ ವರ್ಷದ ಮೇ ಅಥವಾ ಜೂನ್‍ನಲ್ಲಿ ನಾಯಂಡಹಳ್ಳಿಯಿಂದ ಕೆಂಗೇರಿವರೆಗಿನ ಮೆಟ್ರೋ ಮಾರ್ಗ ಉದ್ಘಾಟಿಸಲಾಗುವುದು. ಮುಂದಿನ ವರ್ಷ ವೈಟ್‍ಫೀಲ್ಡ್ ಮತ್ತು ಎಲೆಕ್ಟ್ರಾನಿಕ್‍ಸಿಟಿ ಮೆಟ್ರೋ ಮಾರ್ಗದಲ್ಲಿ ಸೇವೆ ನೀಡಲಾಗುವುದು.

-ಅಜಯ್ ಸೇಠ್, ಬಿಎಂಆರ್‍ಸಿಎಲ್ ವ್ಯವಸ್ಥಾಪಕ ನಿರ್ದೇಶಕ

2ನೇ ಹಂತದ ವಿವರ

* ಮೊದಲ ಹಂತದ ನಾಲ್ಕು ದಿಕ್ಕುಗಳಲ್ಲಿ ಒಟ್ಟು 34 ಕಿ.ಮೀ. ಉದ್ದದ ವಿಸ್ತರಿತ ಮಾರ್ಗ ಮತ್ತು 40 ಕಿ.ಮೀ. ಉದ್ದದ 2 ಹೊಸ ಮಾರ್ಗ ನಿರ್ಮಾಣ

* 74 ಕಿ.ಮೀ. ಉದ್ದದ ಮಾರ್ಗ ಮತ್ತು 61 ನಿಲ್ದಾಣಗಳ ನಿರ್ಮಾಣ

* 30,695 ಕೋಟಿ ರೂ. ವೆಚ್ಚ

ನೂತನ ಮಾರ್ಗ

* 6.29 ಕಿ.ಮೀ. ಉದ್ದ

* ರೇಷ್ಮೆ ಸಂಸ್ಥೆಯಿಂದ ಮೊದಲ ರೈಲು ಬೆಳಗ್ಗೆ 7 ಗಂಟೆಗೆ, ಕೊನೆಯ ರೈಲು ರಾತ್ರಿ 8.55ಕ್ಕೆ ಹೊರಡಲಿದೆ

* 1,500 ಟನ್ ಕಾಂಕ್ರೀಟ್, 20,500 ಟನ್ ಸ್ಟೀಲ್ ಬಳಕೆ

* ಪ್ರತಿ ನಿಲ್ದಾಣದಲ್ಲಿ 8 ಎಸ್ಕಲೇಟರ್, 4 ಎಲಿವೇಟರ್ ಸೇರಿ ಒಟ್ಟು 40 ಎಸ್ಕಲೇಟರ್, 20 ಎಲಿವೇಟರ್ ಅಳವಡಿಕೆ.

* ಎಲ್ಲ 5 ನಿಲ್ದಾಣಗಳ ಮೇಲ್ಭಾಗದಲ್ಲಿ ಒಟ್ಟು 1.2 ಮೆಗಾ ವ್ಯಾಟ್ ವಿದ್ಯುತ್ ಉತ್ಪಾದನೆ ಸಾಮಥ್ರ್ಯದ ಸೌರಶಕ್ತಿ ಮೇಲ್ಛಾವಣಿ ಅಳವಡಿಕೆ. 2021ರ ಮಾರ್ಚ್ ವೇಳೆಗೆ ಕಾಮಗಾರಿ ಪೂರ್ಣ.

* ಟ್ಯಾಕ್ಸಿ, ಆಟೋ, ಬಸ್‍ಗಳ ಪಿಕಪ್ ಮತ್ತು ಡ್ರಾಪ್‍ಗಾಗಿ ಸೇವಾ ರಸ್ತೆ ನಿರ್ಮಾಣ.

* ಒನ್‍ನೇಷನ್ ಒನ್ ಕಾರ್ಡ್ ಬಳಕೆಗೆ ಅನುಕೂಲವಾಗುವ ವ್ಯವಸ್ಥೆ ಅಳವಡಿಕೆ.

* ರಸ್ತೆ ದಾಟಲು ಜನರು ನಿಲ್ದಾಣಗಳನ್ನು ಬಳಸಬಹುದು, ಅದಕ್ಕೆ ಮೆಟ್ರೋದಿಂದ ಯಾವುದೇ ಶುಲ್ಕ ಪಡೆಯುವುದಿಲ್ಲ.

* ಕೋಣನಕುಂಟೆ ಕ್ರಾಸ್, ದೊಡ್ಡಕಲ್ಲಸಂದ್ರ, ವಾಜರಹಳ್ಳಿ, ತಲಘಟ್ಟಪುರ, ರೇಷ್ಮೆ ಸಂಸ್ಥೆ ನಿಲ್ದಾಣಗಳು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News