ಕ್ರೆಡಿಟ್ ಕಾರ್ಡ್ ಕಂಪೆನಿಗಳ ಕಿರುಕುಳ ಆರೋಪ: ಮಂಗಳೂರು ಮೂಲದ ಉದ್ಯಮಿ ಆತ್ಮಹತ್ಯೆ

Update: 2021-01-15 12:17 GMT

ಬೆಂಗಳೂರು, ಜ.15: ಕ್ರೆಡಿಟ್ ಕಾರ್ಡ್ ಕಂಪೆನಿಗಳು ಮಾನಸಿಕ ಕಿರುಕುಳ ನೀಡುತ್ತಿವೆ ಎಂದು ಆರೋಪಿಸಿ ಮಂಗಳೂರು ಮೂಲದ ಉದ್ಯಮಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಇಲ್ಲಿನ ಬೊಮ್ಮನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಮಂಗಳೂರು ಮೂಲದ ಶಶಿಧರ್ ಆತ್ಮಹತ್ಯೆ ಮಾಡಿಕೊಂಡಿರುವ ಪ್ರಿಂಟಿಂಗ್ ಪ್ರೆಸ್ ಉದ್ಯಮಿ ಎಂದು ತಿಳಿದುಬಂದಿದೆ.

ಕೋವಿಡ್ ಸಂಬಂಧ ಕೇಂದ್ರ ಸರಕಾರ ಜಾರಿಗೊಳಿಸಿದ್ದ ಲಾಕ್‍ಡೌನ್ ಜಾರಿಯಿಂದ ಪ್ರಿಂಟಿಂಗ್ ಪ್ರೆಸ್ ಬಂದ್ ಆಗಿತ್ತು. ಇದರಿಂದ ಕೈಯಲ್ಲಿ ಹಣ ಇಲ್ಲದೆ ತನ್ನ ಬಳಿ ಇದ್ದ ಕ್ರೆಡಿಟ್ ಕಾರ್ಡ್ ಗಳನ್ನು ಬಳಸಿ ಜೀವನ ನಡೆಸಿದ್ದರು. ಆದರೀಗ ಅದೇ ಕ್ರೆಡಿಟ್ ಕಾರ್ಡ್ ಗಳಿಂದ ಪಡೆದಿದ್ದ ಸಾಲ ವಾಪಸ್ ಕಟ್ಟಲಾಗದೆ, ಬ್ಯಾಂಕ್‍ಗಳ ಕಿರುಕುಳ ಸಹಿಸಲಾಗದೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

ವಿವಿಧ ಕಂಪೆನಿಗಳಿಗೆ ಕ್ರೆಡಿಟ್ ಕಾರ್ಡ್ ಗಳನ್ನು ಪಡೆದಿದ್ದ ಶಶಿಧರ್, ಅವಶ್ಯಕತೆ ಇದ್ದಾಗ ಸಾಲ ಪಡೆದು ಮತ್ತೆ ತೀರಿಸುತ್ತಿದ್ದರು. ಆದರೆ, ಕಳೆದ ಕೆಲ ದಿನಗಳಿಂದ ಆರ್ಥಿಕ ಸಮಸ್ಯೆ ಬಿಗಡಾಯಿಸಿದ ಕಾರಣ ಸಾಲವನ್ನು ವಾಪಸ್ ಕೊಟ್ಟಿರಲಿಲ್ಲ. ಹೀಗಾಗಿ ಪದೇ ಪದೇ ಫೈನಾನ್ಸ್ ಕಂಪೆನಿಯವರು ಕರೆ ಮಾಡಿ ಹಣ ಪಾವತಿ ಮಾಡುವಂತೆ ಒತ್ತಡ ಹೇರಿದ್ದರು ಎಂದು ತಿಳಿದುಬಂದಿದೆ.

ಇದರಿಂದ ಬೇಸತ್ತ ಶಶಿಧರ್ ಮನೆಯಲ್ಲಿ ನೇಣು ಹಾಕಿಕೊಂಡಿದ್ದಾರೆ. ಕ್ರೆಡಿಟ್ ಕಾರ್ಡ್ ಗಳ ಕಿರುಕುಳ ಕುರಿತು ಡೆತ್‍ನೋಟ್‍ನಲ್ಲಿ ಅವರು ಉಲ್ಲೇಖಿಸಿದ್ದಾರೆ ಎನ್ನಲಾಗಿದೆ. ಈ ಸಂಬಂಧ ಬೊಮ್ಮನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News