×
Ad

ಟೊಯೋಟಾ ಕಿರ್ಲೋಸ್ಕರ್ ಕಾರ್ಖಾನೆ ಬಿಕ್ಕಟ್ಟು: ಸಿಎಂ ಮಧ್ಯಪ್ರವೇಶಕ್ಕೆ ಕೋರಿ ಮನವಿ ಸಲ್ಲಿಸಲು ಕಾರ್ಮಿಕರ ನಿರ್ಧಾರ

Update: 2021-01-15 21:10 IST

ಬೆಂಗಳೂರು, ಜ.15: ರಾಮನಗರ ಜಿಲ್ಲೆ ಟೊಯೋಟಾ ಕಿರ್ಲೋಸ್ಕರ್ ಮೋಟಾರ್ಸ್ ಕಾರ್ಖಾನೆ ಆಡಳಿತ ಮಂಡಳಿ ಮತ್ತು ಕಾರ್ಮಿಕರ ನಡುವಿನ ಬಿಕ್ಕಟ್ಟು ಮುಂದುವರಿದಿದ್ದು, ಆಡಳಿತ ಮಂಡಳಿಯ ಹಠಮಾರಿ ಧೋರಣೆ ಖಂಡಿಸಿ ಕಾರ್ಮಿಕರು ನಡೆಸುತ್ತಿರುವ ಪ್ರತಿಭಟನೆ 69ನೆ ದಿನಕ್ಕೆ ಕಾಲಿಟ್ಟಿದೆ.

ಕಾರ್ಖಾನೆ ಬೀಗಮುದ್ರೆ ತೆರವುಗೊಳಿಸಿರುವುದಾಗಿ ಪ್ರಕಟಿಸಿರುವ ಟೊಯೋಟಾ ಕಿರ್ಲೋಸ್ಕರ್ ಕಾರ್ಖಾನೆ ಆಡಳಿತ ಮಂಡಳಿ ‘ಕಾರ್ಮಿಕರು ಮುಚ್ಚಳಿಕೆ ನೀಡಬೇಕು' ಎಂಬ ಷರತ್ತನ್ನು ಒಪ್ಪಲು ಸಾಧ್ಯವಿಲ್ಲ. ಪರೋಕ್ಷವಾಗಿ ಲಾಕ್‍ಔಟ್ ಮುಂದುವರಿಸಿರುವ ಆಡಳಿತ ಮಂಡಳಿಯ ಕ್ರಮ ಸರಿಯಲ್ಲ ಎಂದು ಕಾರ್ಮಿಕ ಮುಖಂಡರು ಆಕ್ಷೇಪಿಸಿದ್ದಾರೆ.

ಒಂದು ದಿನ ಮುಷ್ಕರ: ಬಿಡದಿ-ಹಾರೋಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ ಎಲ್ಲ ಕಾರ್ಮಿಕ ಸಂಘಟನೆಗಳ ನೇತೃತ್ವದಲ್ಲಿ ಒಂದು ದಿನದ ಮುಷ್ಕರ ನಡೆಸಲು ನಿರ್ಧರಿಸಿದ್ದು, ಕಾರ್ಮಿಕ ಸಂಘಟನೆಗಳ ಒಕ್ಕೂಟದಿಂದ ಫೆಬ್ರವರಿ ಮೊದಲನೆ ವಾರದಲ್ಲಿ ಬೃಹತ್ ಸಮಾವೇಶ ನಡೆಸುವ ಮೂಲಕ ಟೊಯೋಟಾ ಕಿರ್ಲೋಸ್ಕರ್ ಮೋಟಾರ್ಸ್ ಕಾರ್ಖಾನೆ ಆಡಳಿತ ಮಂಡಳಿಗೆ ಎಚ್ಚರಿಕೆ ನೀಡಲು ಕಾರ್ಮಿಕ ಸಂಘಟನೆಗಳ ಮುಖಂಡರು ತೀರ್ಮಾನಿಸಿದ್ದಾರೆ.

ಕಾರ್ಖಾನೆ ಕಾರ್ಮಿಕರು ಸುದೀರ್ಘ ಅವಧಿಯ ಪ್ರತಿಭಟನೆ ನಡೆಸುತ್ತಿದ್ದರೂ ರಾಜ್ಯ ಸರಕಾರ ಮಧ್ಯಪ್ರವೇಶಿಸಿ ಸಮಸ್ಯೆ ಬಗೆಹರಿಸುವಲ್ಲಿ ವಿಫಲವಾಗಿದೆ. ಆ ಹಿನ್ನೆಲೆಯಲ್ಲಿ ಕಾರ್ಮಿಕ ಮುಖಂಡರ ನೇತೃತ್ವದ ನಿಯೋಗ ಶೀಘ್ರದಲ್ಲೆ ಸಿಎಂ ಯಡಿಯೂರಪ್ಪನವರನ್ನು ಭೇಟಿ ಮಾಡಿ ಬಿಕ್ಕಟ್ಟು ಪರಿಹಾರಕ್ಕೆ ಗಮನ ಸೆಳೆಯಲು ನಿರ್ಧರಿಸಲಾಗಿದೆ ಎಂದು ಮುಖಂಡರು ತಿಳಿಸಿದ್ದಾರೆ.

ಲೂಟಿ ಸಹಿಸುವುದಿಲ್ಲ: ಈ ಮಧ್ಯೆ ಶುಕ್ರವಾರ ಟೊಯೋಟಾ ಕಾರ್ಖಾನೆ ಬಳಿಕ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದ ಕಾರ್ಮಿಕ ಮುಖಂಡ ಶಿವಶಂಕರ್, ಹಣ ಮಾಡುವ ಉದ್ದೇಶದಿಂದಲೇ ರಾಜ್ಯಕ್ಕೆ ಬಂದಿರುವ ಟೊಯೋಟಾ ಕಾರ್ಖಾನೆ ಈ ನೆಲದ ಕಾನೂನುಗಳನ್ನು ಗಾಳಿಗೆ ತೂರಿ ಕಾರ್ಮಿಕರ ಶ್ರಮ ಮತ್ತು ಸಂಪತ್ತನ್ನು ಲೂಟಿ ಮಾಡುವುದನ್ನು ಸಹಿಸಲು ಸಾಧ್ಯವಿಲ್ಲ ಎಂದು ಎಚ್ಚರಿಕೆ ನೀಡಿದರು.

ಎದೆಗುಂದುವ ಅಗತ್ಯವಿಲ್ಲ: ಕಾರ್ಖಾನೆ ಆಡಳಿತ ಮಂಡಳಿ ಸಚಿವರು, ಕಾರ್ಮಿಕ ಇಲಾಖೆಯನ್ನು ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದು, ಸುಳ್ಳು ಆರೋಪದ ಮೇಲೆ ಕಾರ್ಮಿಕರನ್ನು ಅಮಾನತ್ತು ಮಾಡಿದೆ. ಸಂಘಟನೆ ನ್ಯಾಯಯುತ ಹೋರಾಟ ನಡೆಸಿದ್ದು, ಯಾವುದೇ ಸಂದರ್ಭದಲ್ಲಿ ಕಾರ್ಮಿಕರು ಎದೆಗುಂದುವ ಅಗತ್ಯವಿಲ್ಲ. ಸತ್ಯಕ್ಕೆ ಜಯ ನಿಶ್ಚಿತ ಎಂದು ಎಐಟಿಯುಸಿ ವಿಜಯಭಾಸ್ಕರ್ ಹೇಳಿದರು.

ಕಾರ್ಮಿಕ ಮುಖಂಡರಾದ ವಿಜಯಭಾಸ್ಕರ್, ಕೆ.ವಿ.ಭಟ್, ನಾಗನಾಥ್, ಕಾಳಪ್ಪ, ಜಯರಾಮ್, ಮೀನಾಕ್ಷಿ ಸುಂದರಂ, ಕೆಪಿಸಿಸಿ ರೈತ ಮೋರ್ಚಾದ ಸಚಿನ್ ಮೀಗಾ, ಟೊಯೋಟಾ ಕಾರ್ಮಿಕ ಸಂಘಟನೆಯ ಅಧ್ಯಕ್ಷ ಪ್ರಸನ್ನಕುಮಾರ್ ಚೆಕ್ಕೆರೆ, ಪ್ರಧಾನ ಕಾರ್ಯದರ್ಶಿ ಗಂಗಾಧರ್ ಸೇರಿದಂತೆ ಇನ್ನಿತರರು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News