ಕೆರೆ ಒತ್ತುವರಿ ಆರೋಪ: ಬಿಜೆಪಿ ಶಾಸಕ ಕೃಷ್ಣಪ್ಪಗೆ ಹೈಕೋರ್ಟ್ ನೋಟಿಸ್

Update: 2021-01-15 16:17 GMT

ಬೆಂಗಳೂರು, ಜ.15: ಬೆಂಗಳೂರು ನಗರದ ಉತ್ತರಹಳ್ಳಿ ಕೆರೆಯನ್ನು ಒತ್ತುವರಿ ಮಾಡಲಾಗಿದೆ ಎಂದು ಆರೋಪಿಸಿ ಸಲ್ಲಿಸಿದ್ದ ಅರ್ಜಿ ಸಂಬಂಧ ದಕ್ಷಿಣ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಎಂ.ಕೃಷ್ಣಪ್ಪ ಅವರಿಗೆ ಹೈಕೋರ್ಟ್ ನೋಟಿಸ್ ಜಾರಿಗೊಳಿಸಿದೆ. ಕೆರೆ ಒತ್ತುವರಿ ಸಂಬಂಧ ಸರ್ವೇ ನಡೆಸಿ ವರದಿ ಸಲ್ಲಿಸುವಂತೆ ಸರಕಾರಕ್ಕೆ ನಿರ್ದೇಶಿಸಿದೆ.

ಬೆಂಗಳೂರು ನಗರದ ಪ್ರಜಾ ಹಕ್ಕುಗಳ ವೇದಿಕೆ, ಪತ್ರಕರ್ತ ಡಿ. ರಾಮಸ್ವಾಮಿ ಅವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ವಿಭಾಗೀಯ ನ್ಯಾಯಪೀಠ, ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ, ಕಂದಾಯ ಇಲಾಖೆ ಕಾರ್ಯದರ್ಶಿ, ಭ್ರಷ್ಟಾಚಾರ ನಿಗ್ರಹ ದಳ(ಎಸಿಬಿ) ಹಾಗೂ ಶಾಸಕ ಎಂ.ಕೃಷ್ಣಪ್ಪ ಅವರಿಗೆ ನೋಟಿಸ್ ಜಾರಿ ಮಾಡಿ, ವಿಚಾರಣೆಯನ್ನು ಫೆ.17ಕ್ಕೆ ಮುಂದೂಡಿತು.

ಉತ್ತರಹಳ್ಳಿ ಕೆರೆ ಒತ್ತುವರಿಯಾಗಿದೆಯೇ ಎಂಬುದನ್ನು ಗುರುತಿಸಲು ಹಿರಿಯ ಕಂದಾಯ ಅಧಿಕಾರಿಯೊಬ್ಬರನ್ನು ನಿಯೋಜಿಸಬೇಕು. ಅವರ ನೇತೃತ್ವದಲ್ಲಿ ಕೆರೆ ಪ್ರದೇಶವನ್ನು ಸರ್ವೇ ನಡೆಸಿ ಆ ಕುರಿತ ವರದಿಯನ್ನು ಆಕ್ಷೇಪಣೆಯೊಂದಿಗೆ ಮುಂದಿನ ಒಂದು ತಿಂಗಳ ಒಳಗೆ ನ್ಯಾಯಾಲಯಕ್ಕೆ ಸಲ್ಲಿಸಬೇಕು ಎಂದು ನಿರ್ದೇಶಿಸಿತು.

ಅರ್ಜಿಯಲ್ಲಿ ಏನಿದೆ: ಬನಶಂಕರಿ 5ನೆ ಹಂತ ನಿರ್ಮಾಣಕ್ಕಾಗಿ ಬಿಡಿಎ 1988ರಲ್ಲಿ ನೋಟಿಫೈ ಮಾಡಿದ್ದ ಉತ್ತರಹಳ್ಳಿಯ ಸರ್ವೇ 103/1ರಲ್ಲಿನ 36 ಗುಂಟೆ ಹಾಗೂ 103/2ರಲ್ಲಿನ 39 ಗುಂಟೆ ಭೂಮಿಯನ್ನು ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ಎಂ.ಕೃಷ್ಣಪ್ಪ ಅವರು ಅಕ್ರಮವಾಗಿ 1994ರಲ್ಲಿ ಖರೀದಿಸಿದ್ದರು. ಬಳಿಕ 2007ರಲ್ಲಿ ಈ ಭೂಮಿಯನ್ನು ಅಕ್ರಮವಾಗಿ ಡಿನೋಟಿಫೈ ಮಾಡಿಸಿಕೊಂಡಿದ್ದರು. ಆ ಬಳಿಕ ಇವೇ ಜಮೀನುಗಳ ಪಕ್ಕದಲ್ಲಿದ್ದ ಉತ್ತರಹಳ್ಳಿ ಕೆರೆಗೆ ಸೇರಿದ ಸರ್ವೇ ನಂಬರ್ 111ರಲ್ಲಿನ 15.16 ಎಕರೆ ಭೂಮಿಯನ್ನು ಹೋಟೆಲ್ ನಿರ್ಮಾಣಕ್ಕಾಗಿ ಒತ್ತುವರಿ ಮಾಡಿದ್ದಾರೆ.

ಜತೆಗೆ ಉತ್ತರಹಳ್ಳಿ ಹೋಬಳಿಯ ವಡ್ಡರಪಾಳ್ಯ ಗ್ರಾಮದ ಗೋಮಾಳಕ್ಕೆ ಸೇರಿದ ಸರ್ವೇ ನಂಬರ್ 32 ರಿಂದ 40ವರೆಗಿನ 10 ಎಕರೆ ಭೂಮಿಗೆ ನಕಲಿ ದಾಖಲೆಗಳನ್ನು ಸೃಷ್ಟಿಸಿ, ಅಲ್ಲಿ ನಿವೇಶನಗಳನ್ನು ನಿರ್ಮಿಸಿ ಮಾರಾಟ ಮಾಡಿದ್ದಾರೆ. ಈ ಸಂಬಂಧ ಸಿಎಂ, ಕಂದಾಯ ಸಚಿವರು, ಸ್ಪೀಕರ್, ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ, ಲೋಕಾಯುಕ್ತ, ಭ್ರಷ್ಟಾಚಾರ ನಿಗ್ರಹದಳ ಸೇರಿದಂತೆ ಸಂಬಂಧಿಸಿದ ಪ್ರಾಧಿಕಾರಗಳಿಗೆ ದೂರು ನೀಡಿದ್ದರೂ ಯಾವುದೇ ಕ್ರಮ ಜರುಗಿಸಿಲ್ಲ ಎಂದು ಅರ್ಜಿದಾರರು ಆರೋಪಿಸಿದ್ದಾರೆ. ಹಾಗೆಯೇ, ಒತ್ತುವರಿಯಾಗಿರುವ ಜಾಗವನ್ನು ತೆರವು ಮಾಡಿ ಸರಕಾರದ ವಶಕ್ಕೆ ತೆಗೆದುಕೊಳ್ಳುವಂತೆ ಆದೇಶಿಸಬೇಕು ಎಂದು ಮನವಿ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News