ಕೇಸ್ ಡೈರಿ ಹಾಜರುಪಡಿಸದ ಪೊಲೀಸರು: ಕಾಮಿಡಿಯನ್ ಮುನವ್ವರ್ ಫಾರೂಖಿ ಜಾಮೀನು ಅರ್ಜಿ ವಿಚಾರಣೆ ಮುಂದೂಡಿಕೆ

Update: 2021-01-16 18:00 GMT

ಹೊಸದಿಲ್ಲಿ, ಜ.16: ಹಿಂದು ದೇವರುಗಳ ವಿರುದ್ಧ ನಿಂದನಾತ್ಮಕ ಹೇಳಿಕೆ ನೀಡಿದ್ದಾರೆಂಬ ಆರೋಪದಲ್ಲಿ ಬಂಧನಕ್ಕೀಡಾಗಿರುವ ಕಾಮಿಡಿಯನ್ ಮುನವ್ವರ್ ಫಾರೂಖಿ ವಿರುದ್ಧದ ಪ್ರಕರಣ ವಿಚಿತ್ರ ತಿರುವು ಪಡೆದುಕೊಂಡಿದೆ. ಫಾರೂಖಿಯ ಜಾಮೀನು ಅರ್ಜಿಯನ್ನು ತಿರಸ್ಕರಿಸುವಂತೆ ಒತ್ತಾಯಿಸಿದ ಇಂದೋರ್ ಪೊಲೀಸರು, ಆದರೆ ಫಾರೂಖಿ ವಿರುದ್ಧದ ಆರೋಪಕ್ಕೆ ತಮ್ಮ ಬಳಿ ಪುರಾವೆಗಳಿಲ್ಲ ಎಂದು ನ್ಯಾಯಾಲಯದಲ್ಲಿ ಹೇಳಿಕೆ ನೀಡಿದ್ದಾರೆ.

ಅಲ್ಲದೆ ಪೊಲೀಸರು ಕೇಸ್ ಡೈರಿಯನ್ನು ನ್ಯಾಯಾಲಯದಲ್ಲಿ ಪ್ರಸ್ತುತ ಪಡಿಸಲು ವಿಫಲವಾದ ಹಿನ್ನೆಲೆಯಲ್ಲಿ, ಜಾಮೀನು ಅರ್ಜಿಯ ವಿಚಾರಣೆಯನ್ನು ಮುಂದಿನ ವಾರಕ್ಕೆ ಮುಂದೂಡಲಾಗಿದೆ.

ಮಧ್ಯಪ್ರದೇಶ ಹೈಕೋರ್ಟ್‌ನ ಇಂದೋರ್ ಪೀಠ ಶುಕ್ರವಾರ ಫಾರೂಖಿಯ ವಿರುದ್ಧದ ಪ್ರಕರಣದ ವಿಚಾರಣೆಯನ್ನು ಕೈಗೆತ್ತಿಕೊಂಡಾಗ ಇಂದೋರ್ ಪೊಲೀಸರು ಕೇಸ್‌ಡೈರಿಯನ್ನು ಹಾಜರುಪಡಿಸಲು ವಿಫಲರಾದರು. ಜಾಮೀನು ಅರ್ಜಿಯನ್ನು ತಿರಸ್ಕರಿಸಬೇಕು. ಆದರೆ ಕಾಮಿಡಿಯನ್ ಫಾರೂಖಿ ಹಾಗೂ ಇತರರ ವಿರುದ್ಧದ ಆರೋಪವನ್ನು ಸಾಬೀತುಪಡಿಸುವ ಪುರಾವೆ ಲಭಿಸಿಲ್ಲ ಎಂದು ನ್ಯಾಯಾಲಯದೆದುರು ಹೇಳಿಕೆ ನೀಡಿದರು.

ಇಂದೋರ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಹಿಂದು ದೇವರ ಅವಹೇಳನ ಮಾಡಲಾಗಿದೆ ಎಂದು ಬಿಜೆಪಿ ಶಾಸಕಿಯ ಪುತ್ರ ನೀಡಿದ್ದ ದೂರಿನ ಹಿನ್ನೆಲೆಯಲ್ಲಿ ಫಾರೂಖಿ, ನಳಿನ್ ಯಾದವ್, ಪ್ರಖರ್ ವ್ಯಾಸ್, ಪ್ರಿಯಮ್ ವ್ಯಾಸ್, ಎಡ್ವಿನ್ ಅಂಥೋನಿ, ಸದಾಕತ್ ಖಾನ್‌ರನ್ನು ಜನವರಿ 1ರಂದು ಬಂಧಿಸಲಾಗಿದೆ. ಆದರೆ ಈ ಬಂಧನದ ಬಗ್ಗೆ ವ್ಯಾಪಕ ಟೀಕೆ ವ್ಯಕ್ತವಾಗಿದೆ. ಬಂಧಿತರಲ್ಲಿ ಒಬ್ಬ ಕಾರ್ಯಕ್ರಮ ಸಂಘಟಿಸಿದ ವ್ಯಕ್ತಿಯ ಸಹೋದರನಾಗಿದ್ದು ಪ್ರೇಕ್ಷಕನಾಗಿ ಉಪಸ್ಥಿತನಿದ್ದ. ಮತ್ತೊಬ್ಬ ಫಾರೂಖಿಯ ಮಿತ್ರನಾಗಿದ್ದು ಕಾರ್ಯಕ್ರಮದಲ್ಲಿ ಹಾಜರಿರಲಿಲ್ಲ ಎಂದು ಸುದ್ಧಿಸಂಸ್ಥೆಯೊಂದು ವರದಿ ಮಾಡಿದೆ.

ಇಂದೋರ್ ಸೆಷನ್ಸ್ ಕೋರ್ಟ್‌ನಲ್ಲಿ ಜನವರಿ 6ರಂದು ನಡೆದಿದ್ದ ವಿಚಾರಣೆ ಸಂದರ್ಭ ತುಕೊಗಂಜ್ ಠಾಣಾ ಪೊಲೀಸರು ಪ್ರಖರ್ ವ್ಯಾಸ್ ಮತ್ತು ಪ್ರಿಯಮ್ ವ್ಯಾಸ್‌ರ ಜಾಮೀನು ಅರ್ಜಿಯನ್ನು ವಿರೋಧಿಸಿದ್ದರು. ಇವರಿಬ್ಬರು ಕಾರ್ಯಕ್ರಮದ ಸಂಘಟಕರಾಗಿದ್ದರು ಎಂಬ ಪೊಲೀಸರ ಹೇಳಿಕೆಯ ಬಳಿಕ ನ್ಯಾಯಾಲಯ ಜಾಮೀನು ಅರ್ಜಿಯನ್ನು ತಿರಸ್ಕರಿಸಿತ್ತು. ಜನವರಿ 13ರಂದು ಸದಾಕತ್ ಖಾನ್ ಹೊರತುಪಡಿಸಿ ಉಳಿದೆಲ್ಲಾ ಆರೋಪಿಗಳ ನ್ಯಾಯಾಂಗ ಕಸ್ಟಡಿ ಅವಧಿಯನ್ನು ನ್ಯಾಯಾಲಯ ಮತ್ತೂ ಎರಡು ವಾರಕ್ಕೆ ವಿಸ್ತರಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News