“ಈ ದಾಳಿಯನ್ನು ನಾವು ಭರ್ಜರಿಯಾಗಿ ಗೆದ್ದಿದ್ದೇವೆ: ಪುಲ್ವಾಮಾ ದಾಳಿಯ ಕುರಿತು ಅರ್ನಬ್ ಸ್ಫೋಟಕ ಚಾಟ್ ಬಹಿರಂಗ

Update: 2021-01-17 09:53 GMT

ಹೊಸದಿಲ್ಲಿ,ಜ.16: ಪುಲ್ವಾಮ ಉಗ್ರ ದಾಳಿಯಲ್ಲಿ 40 ಮಂದಿ ಸಿಆರ್ ಪಿಎಫ್ ಯೋಧರು ಹುತಾತ್ಮರಾದ ನಂತರ ಬಹುಚರ್ಚಿತ ಬಾಲಾಕೋಟ್ ವಾಯು ದಾಳಿ ಫೆಬ್ರವರಿ 26, 2019ರಂದು ನಡೆದಿತ್ತು. ಅದಕ್ಕಿಂತ ಮೂರು ದಿನ ಮುನ್ನ, ಅಂದರೆ ಫೆಬ್ರವರಿ 23, 2019ರಂದು ರಿಪಬ್ಲಿಕ್ ಟಿವಿಯ ಮುಖ್ಯ ಸಂಪಾದಕ ಅರ್ನಬ್ ಗೋಸ್ವಾಮಿ ಅವರು  ಅಂದಿನ ಬಾರ್ಕ್ (ಬ್ರಾಡ್‍ಕಾಸ್ಟ್ ಆಡಿಯನ್ಸ್ ರಿಸರ್ಚ್ ಕೌನ್ಸಿಲ್) ಸಿಇಒ ಪಾರ್ಥೊ ದಾಸಗುಪ್ತಾ  ಅವರಿಗೆ ಕಳುಹಿಸಿದ್ದ ವಾಟ್ಸ್ಯಾಪ್ ಸಂದೇಶದಲ್ಲಿ, 40 ಮಂದಿ ಸೈನಿಕರು ಹುತಾತ್ಮರಾಗಿದ್ದ ಪುಲ್ವಾಮಾ ದಾಳಿಯ ಕುರಿತು "ನಾವು ಈ ದಾಳಿಯನ್ನು ಭರ್ಜರಿಯಾಗಿ ಗೆದ್ದುಕೊಂಡಿದ್ದೇವೆ" ಎಂದು ಬರೆದುಕೊಂಡಿದ್ದರು! ಮಾತ್ರವಲ್ಲದೇ, ಬಾಲಾಕೋಟ್‌ ವಾಯದಾಳಿ ನಡೆಯುವುದಕ್ಕಿಂತ ಮೂರು ದಿನಗಳ ಮುಂಚೆಯೇ "ಬಿಗ್ಗರ್ ದ್ಯಾನ್ ಎ ನಾರ್ಮಲ್ ಸ್ಟ್ರೈಕ್'' (ಸಾಮಾನ್ಯ ದಾಳಿಗಿಂತ ದೊಡ್ಡ ದಾಳಿ) ಎಂದು ಬರೆದಿದ್ದರು!

ಟಿಆರ್ಪಿ ರೇಟಿಂಗ್ ಹಗರಣಕ್ಕೆ ಸಂಬಂಧಿಸಿದಂತೆ ಮುಂಬೈ ಪೊಲೀಸರು ಸಲ್ಲಿಸಿರುವ 3,400 ಪುಟಗಳ ಪೂರಕ ಚಾರ್ಜ್ ಶೀಟ್‍ನಲ್ಲಿ ಅರ್ನಬ್ ಅವರದ್ದೆಂದು ಹೇಳಲಾದ ವಾಟ್ಸ್ಯಾಪ್ ಚಾಟ್ ಸಂದೇಶದ ಟ್ರಾನ್ಸ್‌ ಕ್ರಿಪ್ಟ್ ನಲ್ಲಿ ಇದು ಬಹಿರಂಗ ಆಗಿದೆ.

ಈ ಬಗ್ಗೆ ಇದೀಗ ಕಾಂಗ್ರೆಸ್‌ ವಕ್ತಾರ ಶ್ರೀವತ್ಸ ಹಾಗೂ ಸಾಮಾಜಿಕ ಕಾರ್ಯಕರ್ತ ಧ್ರುವ್‌ ರಾಠೀ ಮತ್ತಿತರರು ತಮ್ಮ ಸಾಮಾಜಿಕ ತಾಣ ಖಾತೆಯಲ್ಲಿ ಪ್ರಕಟಿಸಿದ್ದಾರೆ.

ಪೊಲೀಸರು ಸಲ್ಲಿಸಿದ ಚಾರ್ಜ್ ಶೀಟ್‍ನಲ್ಲಿರುವ ಮಾಹಿತಿಯಂತೆ, ಫೆಬ್ರವರಿ 23 ರಂದು ಅರ್ನಬ್ ಅವರು ದಾಸಗುಪ್ತಾ ಅವರಿಗೆ  ಸಂದೇಶ ಕಳುಹಿಸಿ "ಏನೋ ದೊಡ್ಡದು ಸಂಭವಿಸಲಿದೆ" ಎಂದು ಬರೆದಿದ್ದರು.

ನಂತರ ಬೇರೆ ವಿಚಾರಗಳ ಕುರಿತಂತೆ ಕೆಲವು ಸಂದೇಶಗಳ ನಂತರ ದಾಸಗುಪ್ತಾ ಅವರು "ದಾವೂದ್?" ಎಂದು ಪ್ರಶ್ನಿಸಿದ್ದರು. ಅದಕ್ಕೆ ಅರ್ನಬ್ "ಇಲ್ಲ ಸರ್ ಪಾಕಿಸ್ತಾನ, ಈ ಬಾರಿ ಏನೋ ದೊಡ್ಡದು ನಡೆಯಲಿದೆ," ಎಂದು ಬರೆದಾಗ ದಾಸಗುಪ್ತಾ ಅವರು "ಒಳ್ಳೆಯದು" ಎಂದು ಪ್ರತಿಕ್ರಿಯಿಸಿದ್ದಾರೆ.

ನಂತರ ಅವರು "ಈ ಸಮಯದಲ್ಲಿ ದೊಡ್ಡ ಮನುಷ್ಯನಿಗೆ ಇದು ಒಳ್ಳೆಯದು, ಆಗ ಅವರು ಚುನಾವಣೆಯಲ್ಲಿ ಗೆಲುವು ಸಾಧಿಸುತ್ತಾರೆ. "ದಾಳಿ? ಅಥವಾ ಇನ್ನೂ ದೊಡ್ಡದೇ,?" ಎಂದು ಪ್ರಶ್ನಿಸಿದಾಗ ಅರ್ನಬ್ "ಸಾಮಾನ್ಯ ದಾಳಿಗಿಂತಲೂ ದೊಡ್ಡದು. ಹಾಗೂ ಅದೇ ಸಮಯದಲ್ಲಿ ಕಾಶ್ಮೀರದಲ್ಲಿ ಏನೋ ದೊಡ್ಡದು. ಪಾಕಿಸ್ತಾನದ ವಿರುದ್ಧ  ದೊಡ್ಡ ರೀತಿಯಲ್ಲಿ ದಾಳಿ ನಡೆಸಿ ಜನರನ್ನು ಖುಷಿ ಪಡಿಸುವ ವಿಶ್ವಾಸ ಸರಕಾರಕ್ಕಿದೆ, ಅದೇ ಪದಗಳನ್ನು ಬಳಸಲಾಗಿದೆ," ಎಂದು ಬರೆದಿದ್ದಾಗಿ ಅರ್ನಬ್‌ ರದ್ದು ಎನ್ನಲಾದ ವಾಟ್ಸಾಪ್‌ ಚಾಟ್‌ ನಲ್ಲಿ ಉಲ್ಲೇಖಿಸಲಾಗಿದೆ.

ಇನ್ನು ಕಾಶ್ಮೀರದ ಪುಲ್ವಾಮಾದಲ್ಲಿ ನಡೆದಿದ್ದ ಭೀಕರ ಬಾಂಬ್ ದಾಳಿಯಿಂದ 40 ಮಂದಿ ಸೈನಿಕರು ಹುತಾತ್ಮರಾಗಿದ್ದು, "ಈ ದಾಳಿಯನ್ನು ನಾವು ಭರ್ಜರಿಯಾಗಿ ಗೆದ್ದಿದ್ದೇವೆ", ಪ್ರಸಾರದ ಸಂದರ್ಭದಲ್ಲಿ ಮೋದಿಯ ಮಾತುಗಳನ್ನು ಸೇರಿಸಿ ಅವರನ್ನು ʼಪುಶ್‌ʼ ಮಾಡಿದ್ದೇವೆ" ಎಂದು ಚಾಟ್‌ ನಲ್ಲಿ ಉಲ್ಲೇಖಿಸಿದ್ದಾಗಿ ತಿಳಿದು ಬಂದಿದೆ.

"ಇದೊಂದು ಗಂಭೀರ ಪ್ರಕರಣವಾಗಿದ್ದು, ಈ ಕುರಿತು ತನಿಖೆ ನಡೆಯಬೇಕು. ದೇಶದ ಸೇನೆಯ ಅತಿರಹಸ್ಯ ಮಾಹಿತಿಯು ಸೋರಿಕೆಯಾಗುವುದು ಗಂಭೀರ ಅಪರಾಧವಾಗಿದೆ. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸಾಮಾಜಿಕ ತಾಣದಾದ್ಯಂತ ಜನರು ಆಗ್ರಹಿಸಿದ್ದಾರೆ.

ತನ್ನ ಪರವಾಗಿ ಸರಕಾರದ ಬಳಿ ಮಾತನಾಡುವಂತೆ ದಾಸಗುಪ್ತಾ ಗೋಸ್ವಾಮಿಯವರನ್ನು ಕೇಳಿಕೊಂಡ ಹಲವಾರು ಸಂದರ್ಭಗಳನ್ನೂ ಚಾಟ್‌ಗಳು ಬಹಿರಂಗಗೊಳಿಸಿವೆ. ಇಂತಹ ಒಂದು ಚಾಟ್‌ನಲ್ಲಿ ದಾಸಗುಪ್ತಾ,ಬಾರ್ಕ್‌ನ ಟಿಆರ್‌ಪಿ ದತ್ತಾಂಶಗಳನ್ನು ಬಹಿರಂಗಗೊಳಿಸುವ ಟ್ರಾಯ್‌ನ ಪ್ರಸ್ತಾವವನ್ನು ತಡೆಯಲು ಸಾಧ್ಯವೇ ಎಂದು ಪ್ರಶ್ನಿಸಿದ್ದು,‘ನೀವು ಏನು ಕೇಳಿದರೂ ಮಾಡುತ್ತೇನೆ ’ಎಂದು ಗೋಸ್ವಾಮಿ ಉತ್ತರಿಸಿದ್ದರು.

ತನಗೆ ಪ್ರಧಾನಿ ಕಚೇರಿಯಲ್ಲಿ ಮಾಧ್ಯಮ ಸಲಹೆಗಾರ ಹುದ್ದೆಯನ್ನು ಕೊಡಿಸುವಂತೆ ದಾಸಗುಪ್ತಾ ಗೋಸ್ವಾಮಿಯವರನ್ನು ಕೇಳಿಕೊಂಡಿದ್ದೂ ಚಾಟ್‌ಗಳಲ್ಲಿ ದಾಖಲಾಗಿದೆ. ಹಲವಾರು ಚಾಟ್‌ಗಳಲ್ಲಿ ಗೋಸ್ವಾಮಿ ಪ್ರಧಾನಿ ಕಚೇರಿ ಹಾಗೂ ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಜೊತೆ ತನ್ನ ನಿಕಟ ಸಂಬಂಧದ ಬಗ್ಗೆಯೂ ಹೇಳಿಕೊಂಡಿದ್ದಾರೆ ಎಂದು ವರದಿಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News