ಬಿಎಸ್‌ವೈ ನೇತೃತ್ವದ ಸರಕಾರ ಸುಭದ್ರ; ಮುಂದಿನ ಬಾರಿಯೂ ಅಧಿಕಾರಕ್ಕೆ: ಬೆಂಗಳೂರಿನಲ್ಲಿ ಅಮಿತ್ ಶಾ

Update: 2021-01-16 15:05 GMT

ಬೆಂಗಳೂರು, ಜ.16: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದ ರಾಜ್ಯ ಸರಕಾರ ತನ್ನ ಅವಧಿಯನ್ನು ಪೂರ್ಣಗೊಳಿಸುವ ಜೊತೆಗೆ, ಮುಂದಿನ ಬಾರಿಯೂ ಅಧಿಕಾರಕ್ಕೆ ಬರಲಿದೆ ಎಂದು ಗೃಹ ಸಚಿವ ಅಮಿತ್ ಶಾ ಹೇಳಿದರು.

ಶನಿವಾರ ನಗರದ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‍ನಲ್ಲಿ ಬೆಂಗಳೂರಿನ ಪೊಲೀಸ್ ಗೃಹ-2025 ಯೋಜನೆಗೆ ಚಾಲನೆ ನೀಡಿದ ಬಳಿಕ ಬಹುಮಹಡಿ ಪೊಲೀಸ್ ವಸತಿ ಗೃಹಗಳ ಉದ್ಘಾಟನಾ ಸಮಾರಂಭವನ್ನುದ್ದೇಶಿಸಿ ಅವರು ಮಾತನಾಡಿದರು.

ಬಿಜೆಪಿ ಸರಕಾರದ ಕುರಿತು ಕಾಂಗ್ರೆಸ್ ನಾಯಕರು ಇಲ್ಲಸಲ್ಲದ ಆರೋಪಗಳನ್ನು ಮಾಡಿ, ಜನರಲ್ಲಿ ಅನುಮಾನ ಮೂಡಿಸುತ್ತಿದ್ದಾರೆ. ಆದರೆ, ಬಿ.ಎಸ್.ಯಡಿಯೂರಪ್ಪ ನೇತೃತ್ವದ ಸರಕಾರ ತನ್ನ ಅವಧಿಯನ್ನು ಪೂರ್ಣಗೊಳಿಸುವುದು ಮಾತ್ರವಲ್ಲದೆ, ಮುಂದಿನ ಚುನಾವಣೆಯಲ್ಲೂ ಗೆಲುವು ಸಾಧಿಸಿ, 5 ವರ್ಷಗಳ ಕಾಲ ಆಡಳಿತ ನಡೆಸಲಿದೆ ಎಂದು ಅವರು ತಿಳಿಸಿದರು.

ಮುಖ್ಯಮಂತ್ರಿ ಯಡಿಯೂರಪ್ಪ ಅವರು ಹಲವು ಜನಪ್ರಿಯ ಯೋಜನೆಗಳನ್ನು ಜಾರಿಗೆ ತರುವಲ್ಲಿ ಯಶಸ್ವಿಯಾಗಿದ್ದು, ಪ್ರಧಾನಿ ನರೇಂದ್ರ ಮೋದಿ ಅವರು ಸಹ ಅವರೊಂದಿಗೆ ಕೈಜೋಡಿ, ಕರ್ನಾಟಕ ಅಭಿವೃದ್ಧಿಗೆ ಬದ್ಧರಾಗಿದ್ದಾರೆ. ಹೀಗಿರುವಾಗ ಕಾಂಗ್ರೆಸ್ ನಾಯಕರು ಕೆಲ ಊಹಾಪೋಹಾದ ಮಾತುಗಳನ್ನು ಆಡುತ್ತಿದ್ದಾರೆ ಎಂದು ಹೇಳಿದರು.

ಇನ್ನು, ಕರ್ನಾಟಕ ಗೃಹ ಇಲಾಖೆಯು ಪೊಲೀಸರಿಗಾಗಿ ಸುಸ್ಥಿರ ಮತ್ತು ಸುಭದ್ರ ನೆಲೆ, ಕರ್ನಾಟಕ ಪ್ರಗತಿದಾಯ ಹೆಜ್ಜೆ, ಒಂದು ಭಾರತ-ಒಂದು ತುರ್ತು ಸಂಖ್ಯೆ 112 ಸೇರಿದಂತೆ ಇನ್ನಿತರೆ ಸೌಲಭ್ಯಗಳನ್ನು ಜಾರಿಗೊಳಿಸುವಲ್ಲಿ ಯಶಸ್ವಿಯಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ ಅವರು, ಕೊರೋನ ಸೋಂಕು ಸಂಬಂಧ ಜಾರಿಗೊಳಿಸಲಾಗಿದ್ದ ಲಾಕ್‍ಡೌನ್ ಪ್ರಕ್ರಿಯೆ ಯಶಸ್ಸು ಕಾಣಲು ಪೊಲೀಸರ ಪಾತ್ರ ಬಹುದೊಡ್ಡದಾಗಿದೆ ಎಂದು ನುಡಿದರು.

ಕೊರೋನ ಮುಕ್ತ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಆಯಾ ರಾಜ್ಯ ಸರಕಾರಗಳು ಭಾರತ ದೇಶದೊಳಗೆ ಕೊರೋನ ನಿಯಂತ್ರಣ ಮಾಡುವಲ್ಲಿ ಮಹತ್ವದ ಕಾರ್ಯ ನಿರ್ವಹಿಸಿದ್ದಾರೆ. ಇದೀಗ ಲಸಿಕೆ ಬಂದಿದ್ದು, ಶನಿವಾರ ಪ್ರತಿ ಕೇಂದ್ರದಲ್ಲಿ ಒಂದು ನೂರು ಜನರಿಗೆ ಲಸಿಕೆ ಹಾಕಲಾಗಿದೆ. ಇನ್ನು, ಶೀಘ್ರದಲ್ಲೇ ದೇಶ ಕೊರೋನ ಮುಕ್ತವಾಗಲಿದೆ ಎಂದು ಅಮಿತ್ ಶಾ ಹೇಳಿದರು.

ಲಸಿಕೆ ಯಾರಿಗೆ ಕೊಡಬೇಕು ಎಂಬ ಬಗ್ಗೆ ಕೆಲವರು ವ್ಯಂಗ್ಯವಾಡಿದರು. ನಾವು ಯಾರು ಕೊರೋನ ನಿಯಂತ್ರಣಕ್ಕೆ ಪ್ರಯತ್ನಿಸಿದ್ದಾರೆ ಅವರಿಗೆ ಲಸಿಕೆ ನೀಡಲು ನಿರ್ಧಾರ ತೆಗೆದುಕೊಂಡಿದ್ದೇವೆ. ಅಲ್ಲದೆ, ವಿಪಕ್ಷಗಳು ಲಸಿಕೆ ವಿಚಾರದಲ್ಲಿ ರಾಜಕೀಯ ಮಾಡುತ್ತಿವೆ. ಈ ರೀತಿ ರಾಜಕೀಯ ಮಾಡುವವರನ್ನು ಸಹಿಸಲ್ಲ. ದೇಶದ ಜನತೆಗೆ ಮೋದಿ ನಾಯಕತ್ವದ ಬಗ್ಗೆ ಗೊತ್ತಿದೆ ಎಂದರು.

ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಕೇಂದ್ರ ಸಚಿವರಾದ ಡಿ.ವಿ.ಸದಾನಂದಗೌಡ, ಪ್ರಹ್ಲಾದ್ ಜೋಷಿ, ಉಪಮುಖ್ಯಮಂತ್ರಿಗಳಾದ ಗೋವಿಂದ ಎಂ.ಕಾರಜೋಳ, ಡಾ.ಸಿ.ಎನ್.ಅಶ್ವತ್ಥನಾರಾಯಣ, ಗೃಹ ಸಚಿವ ಬಸವರಾಜ ಬೊಮ್ಮಾಯಿ, ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್, ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಸೇರಿದಂತೆ ಪ್ರಮುಖ ಗಣ್ಯರು ಪಾಲ್ಗೊಂಡಿದ್ದರು.

ಪೊಲೀಸ್ ಗೃಹ-2020ರ ಯೋಜನೆಯಡಿ 2015ರಲ್ಲಿ ಕರ್ನಾಟಕ ರಾಜ್ಯ ಪೊಲೀಸ್ ವಸತಿ ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಗಮದ ವತಿಯಿಂದ 2272.37 ಕೋಟಿ ರೂ. ವೆಚ್ಚದಲ್ಲಿ 11 ಸಾವಿರ ಪೊಲೀಸ್ ವಸತಿ ಗೃಹ, 2025ರ ಯೋಜನೆಯಡಿಯಲ್ಲಿ 2740 ಕೋಟಿ ವೆಚ್ಚದಲ್ಲಿ 10034 ಪೊಲೀಸ್ ವಸತಿ ಗೃಹಗಳನ್ನು ನಿರ್ಮಿಸುವ ಗುರಿ.

-ಅಮಿತ್ ಶಾ, ಕೇಂದ್ರ ಗೃಹ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News