ಕೆಎಎಸ್ ಅಧಿಕಾರಿ ರಂಗನಾಥ್ ವಿರುದ್ಧ ತನಿಖೆಗೆ ಅನುಮತಿ ನೀಡಲು ನಿರ್ಧರಿಸಿ: ಸರಕಾರಕ್ಕೆ ಹೈಕೋರ್ಟ್ ಸೂಚನೆ

Update: 2021-01-16 15:09 GMT

ಬೆಂಗಳೂರು, ಜ.16: ನಗರದ ವರ್ತೂರು ಹೋಬಳಿ ಮುಳ್ಳೂರು ಗ್ರಾಮದಲ್ಲಿನ ಸರಕಾರಿ ಜಮೀನನ್ನು ಖಾಸಗಿ ವ್ಯಕ್ತಿಗಳ ಹೆಸರಿಗೆ ಅಕ್ರಮವಾಗಿ ಖಾತೆ ಮಾಡಿಕೊಟ್ಟ ಆರೋಪದ ಹಿನ್ನೆಲೆಯಲ್ಲಿ ಕೆಎಎಸ್ ಅಧಿಕಾರಿ ಕೆ.ರಂಗನಾಥ್ ವಿರುದ್ಧ ತನಿಖೆಗೆ ಅನುಮತಿ ನೀಡುವ ಬಗ್ಗೆ ನಿರ್ಧರಿಸಿ ಎಂದು ರಾಜ್ಯ ಸರಕಾರಕ್ಕೆ ಹೈಕೋರ್ಟ್ ಸೂಚಿಸಿದೆ. 

ಅಧಿಕಾರಿ ಕೆ. ರಂಗನಾಥ್ ವಿರುದ್ಧದ ಪ್ರಕರಣದಲ್ಲಿ ಹೈಕೋರ್ಟ್‍ನಲ್ಲಿ ಸಿಬಿಐ ತನಿಖೆಗೆ ಕೋರಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆಗೆ ಎತ್ತಿಕೊಂಡ ಹೈಕೋರ್ಟ್ ವಿಭಾಗೀಯ ಪೀಠಕ್ಕೆ ಎಸಿಬಿ ಎಡಿಜಿಪಿ ರಾಜ್ಯ ಸರಕಾರಕ್ಕೆ ಪತ್ರ ಬರೆದಿದ್ದಾರೆ. ತನಿಖೆಗೆ ಪೂರ್ವಾನುಮತಿ ನೀಡುವಂತೆ ಎಸಿಬಿ ಮನವಿ ಮಾಡಿದೆ. ಸರಕಾರದ ಅನುಮತಿಗೆ ನಾವು ಕಾಯುತ್ತಿದ್ದೇವೆ. 2020 ನ.25ರಿಂದ ನಮ್ಮ ಮನವಿ ಬಾಕಿ ಇದೆ ಎಂದು ಎಸಿಬಿ ಮಾಹಿತಿ ನೀಡಿತ್ತು.

ಬೆಂಗಳೂರು ಉತ್ತರ ಎ.ಸಿ. ಹುದ್ದೆಯಲ್ಲಿದ್ದ ಅಧಿಕಾರಿ ಕೆ.ರಂಗನಾಥ್ ಲಾಕ್‍ಡೌನ್ ವೇಳೆ ಖಾಸಗಿ ವ್ಯಕ್ತಿಗಳಿಗೆ ಜಮೀನು ಖಾತೆ ಮಾಡಿಕೊಟ್ಟಿದ್ದರು ಎಂಬ ಆರೋಪ ಕೇಳಿಬಂದಿತ್ತು.

ಅರ್ಜಿಯಲ್ಲಿ ಏನಿದೆ: ಮುಳ್ಳೂರು ಗ್ರಾಮದ ವಿವಿಧ ಸರ್ವೇ ನಂ.49/7ರಲ್ಲಿರುವ ಕೋಟ್ಯಂತರ ರೂಪಾಯಿ ಮೌಲ್ಯದ ಸರಕಾರಿ ಜಮೀನನ್ನು ಬೆಂಗಳೂರು ಉತ್ತರ ವಿಭಾಗಾಧಿಕಾರಿ ಕೆ.ರಂಗನಾಥ್, ಖಾಸಗಿ ವ್ಯಕ್ತಿಗಳ ಹೆಸರಿಗೆ ವರ್ಗಾವಣೆ ಮಾಡಿದ್ದಾರೆ.

ಈ ಕುರಿತು ವಿಲ್ಸನ್ ಗಾರ್ಡನ್ ಪೊಲೀಸ್ ಠಾಣೆಯಲ್ಲಿ 2019ರ ಡಿ.11ರಂದು ಎಫ್‍ಐಆರ್ ದಾಖಲಿಸಲಾಗಿದೆ. ಆದರೆ, ಈವರೆಗೂ ಯಾವುದೇ ತನಿಖೆ ನಡೆದಿಲ್ಲ. ಆರೋಪಿತ ಅಧಿಕಾರಿಗಳು ಇಂದಿಗೂ ಅಧಿಕಾರದಲ್ಲಿ ಮುಂದುವರಿಯುತ್ತಿದ್ದಾರೆ. ಇದರಿಂದ ಪ್ರಕರಣದ ಸಾಕ್ಷ್ಯಗಳು ನಾಶವಾಗುವ ಸಾಧ್ಯತೆಯಿದೆ. ಸಮರ್ಪಕ ತನಿಖೆ ನಡೆಸಲು ಸರಕಾರ ಹಾಗೂ ರಾಜ್ಯ ಪೊಲೀಸರು ವಿಫಲರಾಗಿರುವ ಕಾರಣ, ಸಿಬಿಐಗೆ ಪ್ರಕರಣದ ತನಿಖೆ ವರ್ಗಾಯಿಸಬೇಕು ಎಂದು ಅರ್ಜಿದಾರರು ಕೋರಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News