ಬಾಲ್ಯದಲ್ಲಿಯೇ ಕುವೆಂಪು ಸಾಹಿತ್ಯ ಪರಿಚಯವಾಗಲಿ: ವಿಮರ್ಶಕ ಬೈರಮಂಗಲ ರಾಮೇಗೌಡ

Update: 2021-01-16 17:48 GMT

ಬೆಂಗಳೂರು, ಜ.16: ರಾಷ್ಟ್ರಕವಿ ಕುವೆಂಪು ಅವರ ಚಿಂತನೆ, ತತ್ವಾದರ್ಶಗಳನ್ನು ಯುವ ತಲೆಮಾರಿಗೆ ತಲುಪಿಸುವುದು ಕುವೆಂಪು ಸಾಹಿತ್ಯವನ್ನು ಓದಿಕೊಂಡಿರುವವರ ಜವಾಬ್ದಾರಿಯೆಂದು ವಿಮರ್ಶಕ ಬೈರಮಂಗಲ ರಾಮೇಗೌಡ ತಿಳಿಸಿದ್ದಾರೆ.

ಶನಿವಾರ ಪುಣ್ಯ ಪ್ರಕಾಶನದ ವತಿಯಿಂದ ಅವಧಿ ಅಂಗಳದಲ್ಲಿ ಆಯೋಜಿಸಿದ್ದ ಪೂರ್ಣಚಂದ್ರ ತೇಜಸ್ವಿ ಅವರ ಅಣ್ಣನ ನೆನಪು ಕೃತಿಯನ್ನು ರಂಗಕರ್ಮಿ ರಂಗಸ್ವಾಮಿ ರಚಿಸಿರುವ ನಾಟಕ ರೂಪದ ಕೃತಿಯನ್ನು ಬಿಡುಗಡೆಗೊಳಿಸಿ ಮಾತನಾಡಿದ ಅವರು, ತಂದೆ-ತಾಯಿಗಳು ತಮ್ಮ ಮಕ್ಕಳಿಗೆ ಬಾಲ್ಯದಲ್ಲಿಯೇ ಕುವೆಂಪು ಸಾಹಿತ್ಯವನ್ನು ಪರಿಚಯಿಸಬೇಕು. ನಂತರ ಶಿಕ್ಷಕರು, ಪ್ರಾಧ್ಯಾಪಕರು ಕುವೆಂಪು ಸಾಹಿತ್ಯದ ರುಚಿಯನ್ನು ತಮ್ಮ ವಿದ್ಯಾರ್ಥಿಗಳಿಗೆ ಉಣಬಡಿಸಬೇಕೆಂದು ಆಶಿಸಿದ್ದಾರೆ.

ಕುವೆಂಪು ತನ್ನ ಜೀವನದ ಕುರಿತು ನೆನಪಿನ ದೋಣಿಯಲ್ಲಿ ಎಂಬ ಆತ್ಮಚರಿತ್ರೆಯನ್ನು ರಚಿಸಿದ್ದಾರೆ. ಅದರಾಚೆಗೂ ಹಲವು ಮುಖ್ಯ ಅಂಶಗಳು ಉಳಿದಿವೆಯೆಂದು ಕುವೆಂಪು ಭಾವಿಸಿದ್ದರು. ಈ ಹಿನ್ನೆಲೆಯಲ್ಲಿ ಪೂರ್ಣಚಂದ್ರ ತೇಜಸ್ವಿ ತನ್ನ ತಂದೆ ಕುವೆಂಪು ಬಗ್ಗೆ ಬರೆದಿರುವ ಅಣ್ಣನ ನೆನಪು ಕೃತಿಯಲ್ಲಿ ಕುವೆಂಪು ವ್ಯಕ್ತಿತ್ವವನ್ನು ಭಿನ್ನವಾಗಿ ಕಟ್ಟಿಕೊಟ್ಟಿದ್ದಾರೆಂದು ಅವರು ಹೇಳಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಕತೆ, ಕಾದಂಬರಿ ಹಾಗೂ ಕವಿತೆಗಳು ನಾಟಕ ರೂಪಕ್ಕೆ ಬರುತ್ತಿವೆ. ಆದರೆ, ಕತೆಯೂ ಅಲ್ಲದ ಕಾದಂಬರಿಯೂ ಅಲ್ಲದ ಜೀವನ ಚರಿತ್ರೆಯನ್ನು ಒಳಗೊಂಡ ಅಣ್ಣನ ನೆನಪು ಕೃತಿಯನ್ನು ರಂಗರೂಪಕ್ಕೆ ತಂದಿರುವುದು ಸಾಹಸಮಯ ಕೆಲಸವಾಗಿದೆ ಎಂದು ಅವರು ಅಭಿನಂದಿಸಿದ್ದಾರೆ.

ಈಗಾಗಲೇ ಅಣ್ಣನ ನೆನಪು ನಾಟಕ ರೂಪಕವು ರಂಗದ ಮೇಲೆ ಸುಮಾರು 12 ಪ್ರದರ್ಶನಗಳನ್ನು ಕಂಡಿದೆ. ಆದರೆ, ಕೋವಿಡ್‍ನಿಂದಾಗಿ ಪ್ರದರ್ಶನ ನಿಂತಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಪ್ರದರ್ಶನಗಳು ಕಾಣಲಿ ಎಂದು ಅವರು ಶುಭ ಹಾರೈಸಿದರು.

ಕಾರ್ಯಕ್ರಮದಲ್ಲಿ ಕನ್ನಡ ಪ್ರಾಧ್ಯಾಪಕಿ ಡಾ.ಎಲ್.ಜಿ.ಮೀರಾ ಕೃತಿಯ ಕುರಿತು ಮಾತನಾಡಿದರು. ನಾಟಕಕಾರ ರಂಗಸ್ವಾಮಿ ಉಪಸ್ಥಿತರಿದ್ದರು. ಹರ್ಷಿತಾ ಪಾಟೀಲ್ ಕಾರ್ಯಕ್ರಮವನ್ನು ನಿರ್ವಹಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News