ನೆಲದ ಮಕ್ಕಳ ನೋವಿನ ದನಿಯಾಗಿ ಕಾಡುವ ಕವಿತೆಗಳು

Update: 2021-01-16 19:30 GMT

ಏಕೆಂದರೆ...

ಸರಕಾರ ರೊಕ್ಕ ಮುದ್ರಿಸಬಹುದೇ ಹೊರತು
ತುಂಡು ರೊಟ್ಟಿಯನ್ನಲ್ಲ
ನೆನಪಿರಲಿ....

ಪ್ರಸ್ತುತ ರೈತರ ಹೋರಾಟದ ಕಾವು ಇಡೀ ದೇಶವನ್ನೇ ವ್ಯಾಪಿಸಿರುವಾಗ, ಅವರ ಒಡಲೊಳಗಿನ ಬೆಂಕಿಯ ಉಂಡು, ಹೋರಾಟದ ಹಾಡಾಗಿಸಿ, ಜನಮಾನಸದಲ್ಲಿ ಅಚ್ಚಳಿಯದೇ ಉಳಿಯುವಂತೆ ಮಾಡಿದ ಕವಿತೆಯ ಸಾಲುಗಳಿವು. ‘‘ಅನ್ನ ಕೊಡುವ ರೈತ ಹಸಿದುಕೊಂಡಿರಬಾರದು, ಜಗತ್ತಿನ ಹಸಿವ ನೀಗಿಸುವ ದೊರೆ ಕಣ್ಣೊಳಗೆ ನೀರು ತರಬಾರದು’’ ಎನ್ನುವಂತೆ ಅನ್ನದಾತರ ಅಳಲಿಗೆ ಇಂಬು ನೀಡುವ, ಪ್ರಸ್ತುತ ವರ್ತಮಾನಕ್ಕೆ ಕನ್ನಡಿ ಹಿಡಿಯುವ ಈ ಮೇಲಿನ ಸಾಲುಗಳು ಗಝಲ್ ಕವಿ ಅಲ್ಲಾಗಿರಿರಾಜರ ‘ಸರ್ಕಾರ ರೊಕ್ಕ ಮುದ್ರಿಸಬಹುದು ತುಂಡು ರೊಟ್ಟಿಯನ್ನಲ್ಲ’ ಕವನ ಸಂಕಲನದಿಂದ ಹೆಕ್ಕಿದಂಥವು. ಕನ್ನಡ ಗಝಲ್ ಲೋಕದಲ್ಲಿ ಈಗಾಗಲೇ ಸಾಕಷ್ಟು ಹೆಸರು ಮಾಡಿರುವ ಕನಕಗಿರಿಯ ಅಲ್ಲಾಗಿರಿರಾಜ್ ಕವಿತೆಯತ್ತ ಹೊರಳಿರುವುದು ಓದುಗರಿಗೆ ಖುಷಿಯ ವಿಷಯ. ಇಡೀ ಜಗತ್ತೇ ಕೊರೋನ ವೈರಸ್‌ನಂತಹ ಸಾಂಕ್ರಾಮಿಕ ರೋಗಕ್ಕೆ ಸಿಕ್ಕು ಲಾಕ್‌ಡೌನ್ ಆಗಿದ್ದ ಸಮಯದಲ್ಲಿ, ಜನರ ಮನದಾಳದ ನೋವು, ಹತಾಶೆ, ಹಸಿವು, ಅವಮಾನ, ನಿರುದ್ಯೋಗ, ಒಕ್ಕಲಿಗನ ಒಡಲುರಿ ಎಲ್ಲವನ್ನೂ ಕವಿತೆಯಲ್ಲಿ ಕಾಣಿಸಿದ್ದಾರೆ ಗಿರಿರಾಜ್. ಈ ಸಂಕಲನದ ಹೆಗ್ಗಳಿಕೆ ಎಂದರೆ ನಾಡಿನ ಸಹೃದಯಿ ಸಂಗಾತಿಗಳೇ ಸ್ವತಃ ತಾವೇ ಹಣ ಹಾಕಿ ಮುದ್ರಿಸಿದ್ದು ಮತ್ತು ಮುದ್ರಣದ ಹಂತದಲ್ಲಿಯೇ ಸಾವಿರ ಪ್ರತಿ ಖರ್ಚಾಗಿದ್ದು. ಇದೀಗ ಮೂರನೇ ಮುದ್ರಣವಾಗಿ ಓದುಗರ ಕೈ ಸೇರುವ ತವಕದಲ್ಲಿ ಈ ಸಂಕಲನವಿದೆ.

ಈ ಸಂಕಲನದ ಅನೇಕ ಕವಿತೆಗಳು ಗೋಡೆ ಬರಹಗಳಾಗಿ, ಘೋಷಣೆಯ ಸಾಲುಗಳಾಗಿ, ಹಾಡುಗಾರರ ಬಾಯಲ್ಲಿ ಕ್ರಾಂತಿಗೀತೆಗಳಾಗಿ ಅರಳಿ ನಿಂತಿವೆ. ಕವಿಗೆ ಸಾವುಂಟು ಆದರೆ ಕವಿತೆಗಲ್ಲ ಎನ್ನುವ ಮಾತನ್ನು ಈ ಸಂಕಲನ ಸಾಬೀತುಪಡಿಸಿದೆ. ನೇಗಿಲೆಂಬ ಶಿಲುಬೆ ಹೊತ್ತ ಅನ್ನದಾತರಿಗೆ ಈ ಸಂಕಲನ ಅರ್ಪಣೆಯಾಗಿದೆ. ‘‘ನನ್ನ ಕವಿತೆ ನನ್ನದೇ ಅಲ್ಲ ಅದು ಹಸಿದವರ ಹಾಡು’’ ಎಂದು ಬರೆದುಕೊಳ್ಳುವ ಗಿರಿರಾಜ್, ಈ ನೆಲದ ಹೆಣ್ಣು ಮಕ್ಕಳ ಆಕ್ರಂದನ, ಧರ್ಮ-ಜಾತಿ ಹೆಸರಿನಲ್ಲಿ ಮನುಷ್ಯಪ್ರೀತಿ ಕಳೆದುಕೊಂಡ ಜನಸಾಮಾನ್ಯರ ಎದೆಯ ನೋವುಗಳು, ಸದ್ಯದ ರೈತರ ಸ್ಥಿತಿಗತಿಗಳು ಎಲ್ಲವನ್ನೂ ತಣ್ಣಗಿನ ಆಕ್ರೋಶದ ತೀವ್ರತೆಯಲ್ಲಿ ಹಿಡಿದಿಡುತ್ತಾರೆ.

ನೀವು ಮುಳ್ಳಿನ ಗಿಡ ನೆಟ್ಟು
ಖುಷಿ ಪಡಬೇಡಿ
ಅಲ್ಲಿ ಒಂದು ಹೂ ಸುಗಂಧ
ಬೀರುತ್ತದೆ ಮರೆಯಬೇಡಿ
ಎಂದು ಬರೆಯುವ ಗಿರಿರಾಜ್ ಸ್ವಾರ್ಥಿಗಳ ಕೇಡಿತನಕ್ಕೂ ಸವಾಲು ಹಾಕುತ್ತಾರೆ. ಮನುಷ್ಯತ್ವವೇ ಮರೀಚಿಕೆಯಾಗಿರುವ ಇಂದಿನ ದಿನಮಾನದಲ್ಲಿ, ಜಾತಿ, ಮತ, ಪಂಥಗಳು ಮುಗ್ಧ ಜೀವಗಳ ನೆತ್ತರು ನೆಕ್ಕಿ ಅಟ್ಟಹಾಸಗೈಯ್ಯುತ್ತಿರುವಾಗ ದೀನತೆಯಿಂದ ಪ್ರಶ್ನೆ ಮಾಡುತ್ತಾರೆ.
ಅಲ್ಲಿ ವರ್ಣಭೇದ
ಇಲ್ಲಿ ಧರ್ಮಭೇದ
ಮನುಷ್ಯರು ಮನುಷ್ಯರಾಗುವುದು
ಯಾವಾಗ?

ಬಹುಶಃ ಉತ್ತರ ಸಿಗದ ಈ ಪ್ರಶ್ನೆ ಯಕ್ಷಪ್ರಶ್ನೆಯಾಗಿಯೇ ಉಳಿಯುತ್ತೇನೋ? ಯಾವುದೇ ಹೋರಾಟಗಳು ನಡೆದಾಗಲೂ ಜನತಂತ್ರದ ಮನಸ್ಥಿತಿ ನೀರಸವಾಗಿರುತ್ತದೆ. ಆ ಹೋರಾಟ ನಮ್ಮದಲ್ಲ, ಅವರಿಗಷ್ಟೇ ಎಂಬ ತಾತ್ಸಾರದ ಭಾವ ನಮ್ಮಲ್ಲಿ ಆವರಿಸಿರುತ್ತದೆ. ಆದರೆ ಒಮ್ಮೆ ಗಂಭೀರವಾಗಿ ಯೋಚಿಸಿ ನೋಡಿದಾಗ ನಮ್ಮ ಬದುಕಿನೊಂದಿಗೂ ಆ ಹೋರಾಟದ ಸಂಬಂಧ ಗಹನವಾಗಿರುತ್ತದೆ. ಆದ್ದರಿಂದಲೇ ಇಲ್ಲಿ ಕವಿ ಕಾವ್ಯದ ಮೂಲಕ ನಮ್ಮನ್ನು ಎಚ್ಚರಿಸುತ್ತಾನೆ.
ಅನ್ನ ಉಂಡವರು ಒಂದು ಸಲ
ಯೋಚಿಸಿ ನೋಡಿ...
ಅನ್ನದಾತನ ನೋವು ಸಾವು
ಸಂಕಟ ಏನೆಂದು

ಸಂಕಲನದ ಇನ್ನೊಂದು ಕವಿತೆ ಅತ್ಯಾಚಾರಕ್ಕೆ ಒಳಗಾದ, ಚಿತ್ರಹಿಂಸೆಗೆ ಗುರಿಯಾದ ಹೆಣ್ಣುಮಗಳೊಬ್ಬಳ ಆಂತರ್ಯವನ್ನು ಬಿಚ್ಚಿಡುವ ಪರಿ, ಆಕೆಯ ಹತಾಶ ಸ್ಥಿತಿಯನ್ನು ಪ್ರತಿಬಿಂಬಿಸುವ ರೂಪಕ ಮನಮಿಡಿಯುವಂತೆ ಮಾಡುತ್ತದೆ. ಹೆಣ್ಣನ್ನು ದೇವತೆಯೆಂದು ಪೂಜಿಸುವ ಈ ನೆಲದಲ್ಲಿ ಪಾಪಿಗಳ ಅಟ್ಟಹಾಸಕ್ಕೆ, ಕ್ರೂರತನಕ್ಕೆ ನಲುಗಿದ ತಾಯೊಬ್ಬಳ ಕರುಳು ಕಿತ್ತು ಬರುವ ಹಾಡನ್ನು ಗಮನಿಸಿ.
ಹೇಗೆ ಮಲಗಲಿ ಈ ನೆಲದ ಮೇಲೆ?
ಮಗಳ ಸುಟ್ಟ ಜಾಗದಲ್ಲಿ ಹೊಗೆ ಎದ್ದು ಅಳುತ್ತಿದೆ
ಅಮ್ಮ ಹೆಣ್ಣೆಂದೂ ಹಡೆಯಬೇಡವೆಂದು.

ಹಾಡುವ ಹಕ್ಕಿಯನ್ನು ಹಿಡಿದು ಬಂಧನದಲ್ಲಿಟ್ಟರೆ ಹಾಡು ಹೊರಹೊಮ್ಮಬಹುದೇ? ಇಲ್ಲ. ಕವಿತೆ ಅರಳಲು ಸ್ವಾತಂತ್ರ್ಯ ಬೇಕು. ಬಿಗ್ಗಬಿಗಿ ಬಂಧಗಳ ಮಧ್ಯೆ ಕವಿತೆ ಹುಟ್ಟದು. ಹಾಗೆಂದೇ ಇಲ್ಲಿ ಕವಿ, ಧರ್ಮದ ಹೆಸರಿನಲಿ ರಕ್ತಹೀರುವ ಕುತಂತ್ರಿಗಳೇ ತೊಲಗಿರಾಚೆ, ಇಲ್ಲೊಂದು ಕವಿತೆ ಕಮ್ಮಗೆ ಕೈಹಿಡಿಯುತ್ತಿದೆ ಎಂದು ಅಲವತ್ತುಕೊಳ್ಳುತ್ತಾನೆ.
ಸುಮ್ಮನಿರಿ...
ಇಲ್ಲೊಂದು ಕವಿತೆ ಹುಟ್ಟುತ್ತಿದೆ
ತೊಲಗಿ ಆಚೆ
ಧರ್ಮದ ಹೆಡೆಮುರಿ ಕಟ್ಟಿಕೊಂಡು
ಇಲ್ಲೊಂದು ಕವಿತೆ ಹುಟ್ಟುತ್ತಿದೆ

ಇಂತಹ ಅಪರೂಪದ ಸಾಲುಗಳು ನಮ್ಮನ್ನು ಕಾಡುತ್ತವೆ. ನನ್ನನ್ನು ಕಾಡಿದ ಅಂತಹ ಒಂದಷ್ಟು ಅಪರೂಪದ ಸಾಲುಗಳನ್ನು ಗಮನಿಸಿ. ‘ಕೇರಿ ಹುಡುಗನ ಬೊಗಸೆ ಸಮಾಧಿಯಲ್ಲೂ ಇನ್ನೂ ಒಣಗೇ ಇತ್ತು’, ‘ಜಗದ ತುಂಬ ಮಾತು ಮೌನವಾಗಿದೆ ಈಗ. ನನ್ನ ನಾನು ಮುಟ್ಟಿಕೊಳ್ಳಲು ಸಾವಿನ ಅಪ್ಪಣೆ ಕೇಳಬೇಕಿದೆ ಈಗ’, ‘ಬೆಳಕು ಇರಲಿ ಎಂದು ಹಣತೆ ಹಚ್ಚಿದೆ. ಅವರು ಮಂದಿರ ಮಸೀದಿ ಮುಂದೆ ಬೆಂಕಿ ಹಚ್ಚಿಕೊಂಡರು’, ‘ನೆತ್ತರಿನ ಮಳೆ ಬಿದ್ದು ಮೈ ಮನಸು ಕೆಂಪಾದವೋ. ಬಿಸಿಲುಂಡ ನೆಲದಾಗ ನದಿಯೊಂದು ಕೆಂಪಾಗಿ ಕಾಡು ಮೇಡು ಕೆಂಪಾದವೋ’ ತಮ್ಮ ಗಝಲ್‌ನ ಮಾಧುರ್ಯದಲ್ಲಿ ಮೋಡಿ ಮಾಡುತ್ತಿದ್ದ ಅಲ್ಲಾಗಿರಿರಾಜ್, ಈಗ ಕವಿತೆಯ ಗುಂಗಿನಲ್ಲಿ ಕಳೆದುಹೋಗುವಂತೆ ಮಾಡಿದ್ದಾರೆ.

Writer - ನಾಗೇಶ್ ಜೆ. ನಾಯಕ, ಉಡಿಕೇರಿ

contributor

Editor - ನಾಗೇಶ್ ಜೆ. ನಾಯಕ, ಉಡಿಕೇರಿ

contributor

Similar News