ಜ.18ರಂದು 50 ಸಾವಿರಕ್ಕೂ ಅಧಿಕ ಆರೋಗ್ಯ ಸಿಬ್ಬಂದಿಗೆ ಲಸಿಕೆ: ಮಂಜುನಾಥ ಪ್ರಸಾದ್

Update: 2021-01-17 12:05 GMT

ಬೆಂಗಳೂರು, ಜ. 17: ಪಾಲಿಕೆ ಹಾಗೂ ಖಾಸಗಿ ಆಸ್ಪತ್ರೆಗಳ ಸಹಯೋಗದೊಂದಿಗೆ ಜ.18ರಂದು 50ಸಾವಿರಕ್ಕೂ ಅಧಿಕ ಆರೋಗ್ಯ ಸಿಬ್ಬಂದಿಗೆ ಕೋವಿಡ್ ಲಸಿಕೆ ನೀಡಲಾಗುವುದೆಂದು ಬಿಬಿಎಂಪಿ ಆಯುಕ್ತ ಮಂಜುನಾಥ ಪ್ರಸಾದ್ ತಿಳಿಸಿದರು.

ರವಿವಾರ ನಗರದ ಮಣಿಪಾಲ್ ಆಸ್ಪತ್ರೆಯಲ್ಲಿ ನಡೆದ ಲಸಿಕೆ ಪ್ರಕ್ರಿಯೆಗೆ ಚಾಲನೆ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಬಿಎಂಪಿಯ 141 ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ 7,300 ಸಿಬ್ಬಂದಿಯಿದ್ದು, ಸೋಮವಾರದಿಂದ ಲಸಿಕೆ ನೀಡುವ ಕಾರ್ಯಕ್ರಮ ಪ್ರಾರಂಭಿಸಲಾಗುವುದು ಎಂದರು.

ಅದೇರೀತಿ, ನಗರದಲ್ಲಿ 106 ಖಾಸಗಿ ಆಸ್ಪತ್ರೆಗಳಲ್ಲಿ 42 ಸಾವಿರ ಸಿಬ್ಬಂದಿ ಹಾಗೂ 9 ವೈದ್ಯಕೀಯ ಕಾಲೇಜುಗಳಲ್ಲಿ 28 ಸಾವಿರ ಸಿಬ್ಬಂದಿಗೆ ಸೋಮವಾರವೇ ಲಸಿಕೆ ನೀಡಲು ಪ್ರಾರಂಭಿಸಲಾಗುತ್ತದೆ. ಕೋವಿನ್ ಪೋರ್ಟಲ್‍ನಲ್ಲಿ ಆರೋಗ್ಯ ಕಾರ್ಯಕರ್ತರು ಇನ್ನೂ ನೋಂದಣಿ ಮಾಡಿಕೊಳ್ಳಲು ಅವಕಾಶವಿದ್ದು, ನೋಂದಣಿ ಮಾಡಿಕೊಂಡ ಅಷ್ಟೂ ಫಲಾನುಭವಿಗಳಿಗೆ ಒಂದು ವಾರದಲ್ಲಿ ಲಸಿಕೆ ನೀಡಲು ಯೋಜನೆ ರೂಪಿಸಿಕೊಳ್ಳಲಾಗಿದೆ ಎಂದು ವಿವರಿಸಿದರು.

ಬಿಬಿಎಂಪಿಗೆ 1.82 ಲಕ್ಷ ಲಸಿಕೆಯಲ್ಲಿ ಇದುವರೆಗೆ 1.05 ಲಕ್ಷ ಲಸಿಕೆ ಮಾತ್ರ ಬಂದಿದ್ದು, 2ನೆ ಹಂತದಲ್ಲಿ ಉಳಿದ ಲಸಿಕೆ ಬರಲಿದೆ ಎಂದ ಅವರು, ಶನಿವಾರ ಪಾಲಿಕೆ ವ್ಯಾಪ್ತಿಯ 6 ಕೇಂದ್ರಗಳಲ್ಲಿ ಲಸಿಕೆ ನೀಡಲಾಯಿತು.ಮ್ಯಾನ್ಯುಯಲ್ ಮುಖಾಂತರವೂ ದಾಖಲಾತಿ ಸಂಗ್ರಹಿಸಿ ಫಲಾನುಭವಿಗಳಿಗೆ ಲಸಿಕೆ ನೀಡಲು ವ್ಯವಸ್ಥೆಯನ್ನು ಮಾಡಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.

ಇನ್ನು ರವಿವಾರ ನಗರದ ಮಣಿಪಾಲ್, ಬ್ಯಾಪ್ಟಿಸ್ಟ್, ಸೆಂಟ್ ಫಿಲೊಮಿನಾ ಮತ್ತು ನಸಿರ್ಂಗ್ ಕಾಲೇಜು ಹಾಗೂ ಕಾಕ್ಸ್ ಟೌನ್ ಪಾಲಿಕೆಯ ಹೆರಿಗೆ ಆಸ್ಪತ್ರೆ ಒಳಗೊಂಡಂತೆ ಈ ನಾಲ್ಕು ಕಡೆಗಳಲ್ಲಿ ಒಟ್ಟು 6,226 ಆರೋಗ್ಯ ಸಿಬ್ಬಂದಿಗೆ ಲಸಿಕೆ ನೀಡುವ ಪ್ರಕ್ರಿಯೆ ಹಮ್ಮಿಕೊಳ್ಳಲಾಗಿತ್ತು ಎಂದು ಆಯುಕ್ತರು ತಿಳಿಸಿದರು.

ಮಣಿಪಾಲ್ ಆಸ್ಪತ್ರೆಯ ಮುಖ್ಯಸ್ಥ ಸುದರ್ಶನ್ ಬಲ್ಲಾಳ್ ಮಾತನಾಡಿ, ಕೋವಿಡ್ ಬಗ್ಗೆ ಊಹಾಪೋಹಗಳಿಗೆ ಯಾರೂ ಕಿವಿಗೊಡಬಾರದು. ಇದೀಗ ಕೋವಿಡ್ ತಡೆಯಲು ವ್ಯಾಕ್ಸಿನ್ ಬಂದಿದೆ. ಆದರೂ ಎಲ್ಲರೂ ಕಡ್ಡಾಯವಾಗಿ ಮಾಸ್ಕ್ ಧರಿಸುವುದು ಸೇರಿ ಇನ್ನಿತರೆ ಮಾರ್ಗಸೂಚಿಗಳನ್ನು ಪಾಲನೆ ಮಾಡಬೇಕು ಎಂದು ತಿಳಿಸಿದರು.

ಸಂದರ್ಭದಲ್ಲಿ ವೇಳೆ ಬಿಬಿಎಂಪಿ ವಿಶೇಶ ಆಯುಕ್ತ(ಆರೋಗ್ಯ) ರಾಜೇಂದ್ರ ಚೋಳನ್, ಪೂರ್ವ ವಲಯ ಜಂಟಿ ಆಯುಕ್ತೆ ಪಲ್ಲವಿ, ಮುಖ್ಯ ಆರೋಗ್ಯಾಧಿಕಾರಿ (ಸಾರ್ವಜನಿಕ ಆರೋಗ್ಯ) ಡಾ. ವಿಜೇಂದ್ರ, ವಲಯ ಆರೋಗ್ಯಾಧಿಕಾರಿ ಡಾ.ಸಿದ್ದಪ್ಪಾಜಿ ಸೇರಿದಂತೆ ಪ್ರಮುಖರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News