ಕೋವಿಡ್ ನಿಯಂತ್ರಣ ಲಸಿಕೆ ಅಡ್ಡ ಪರಿಣಾಮದ ವರದಿಯಾಗಿಲ್ಲ: ಸಚಿವ ಡಾ.ಕೆ.ಸುಧಾಕರ್

Update: 2021-01-17 12:14 GMT

ಬೆಂಗಳೂರು, ಜ.17: ಕೋವಿಡ್ ಸೋಂಕು ಸಂಬಂಧ ಲಸಿಕೆ ನೀಡುವ ಅಭಿಯಾನ ಯಶಸ್ವಿಯಾಗಿ ಸಾಗುತ್ತಿದ್ದು, ಇದುವರೆಗೂ ಎಲ್ಲಿಯೂ ಯಾವುದೇ ರೀತಿಯ ಅಡ್ಡ ಪರಿಣಾಮ ಬೀರಿರುವ ಕುರಿತು ವರದಿಯಾಗಿಲ್ಲ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಹೇಳಿದರು.

ರವಿವಾರ ನಗರದ ಮಣಿಪಾಲ್ ಆಸ್ಪತ್ರೆಯಲ್ಲಿ ಆರೋಗ್ಯ ಸಿಬ್ಬಂದಿಗೆ ಲಸಿಕೆ ಅಭಿಯಾನ ವಿಶೇಷ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಬಳಿಕ ಅವರು ಸುದ್ದಿಗಾರರೊಂದಿಗೆ  ಮಾತನಾಡಿದರು.

ಕರ್ನಾಟಕ ವ್ಯಾಪ್ತಿಯಲ್ಲಿ ಮೊದಲನೆ ಹಂತದಲ್ಲಿ ಲಸಿಕೆ ನೀಡಲಾಗಿದ್ದು, ಶನಿವಾರ ಒಂದೇ ದಿನದಲ್ಲಿ 14 ಸಾವಿರ ಕೊರೋನ ವಾರಿಯರ್ಸ್‍ಗಳಿಗೆ ಲಸಿಕೆ ನೀಡಲಾಗಿದೆ. ಆದರೆ, ಎಲ್ಲಿಯೋ ಯಾವುದೇ ರೀತಿಯ ಅಡ್ಡ ಪರಿಣಾಮಗಳು ಬೀರಿಲ್ಲ.ಈ ಬಗ್ಗೆ ಕೆಲವರಲ್ಲಿ ಇದ್ದ ಆತಂಕ ದೂರವಾಗಿದ್ದು, ಎರಡನೆ ಹಂತದ ಲಸಿಕೆ ಪ್ರಕ್ರಿಯೆಗೆ ತಯಾರಿ ನಡೆಸಲಾಗುತ್ತಿದೆ ಎಂದರು.

ಎರಡನೆ ಡೋಸ್ ಮರೆಯಬೇಡಿ: ಕೊರೋನ ಲಸಿಕೆಯ ಮೊದಲ ಡೋಸ್ ಪಡೆದ ನಂತರ ಎರಡನೆ ಡೋಸ್ ಪಡೆಯೋದನ್ನು ಮರೆಯಬಾರದು. ಜತೆಗೆ, ಲಸಿಕೆ ಪಡೆದ ನಂತರ ಮಾಸ್ಕ್ ತೆಗೆಯುವುದು ಹಾಗೂ ಸುರಕ್ಷಿತ ಅಂತರವನ್ನು ಕಾಪಾಡಿಕೊಳ್ಳದಿರುವ ತಪ್ಪನ್ನು ಮಾಡಬೇಡಿ ಎಂದು ಹೇಳಿದರು.

ಇನ್ನು, ಎರಡನೆ ಡೋಸ್ ಲಸಿಕೆ ಪಡೆದ ನಂತರವಷ್ಟೇ ರೋಗನಿರೋಧಕ ಶಕ್ತಿ ಬೆಳೆಯುತ್ತದೆ ಎಂದ ಅವರು, ಕೋವಿಡ್ ಲಸಿಕೆ ವಿತರಣೆ ಅಭಿಯಾನ ರಾಜ್ಯಾದ್ಯಂತ ಚಾಲನೆ ಪಡೆದುಕೊಂಡಿದ್ದು, ರಜಾ ದಿನ ರವಿವಾರವೂ ಖಾಸಗಿ ಆಸ್ಪತ್ರೆಗಳಲ್ಲೂ ಮುಂದುವರಿದಿರುವುದು ಸಂತಸ ತಂದಿದೆ ಎಂದು ನುಡಿದರು.

ಮದ್ಯ ಸೇವಿಸಿದಾಗ ದೇಹದ ಶಕ್ತಿ ಕಡಿಮೆಯಾಗುತ್ತದೆ ಎಂದು ತಾಂತ್ರಿಕ ಸಲಹೆ ಸಮಿತಿ ಹೇಳಿಕೆ ನೀಡಿದ್ದು, ಸಾಮಾನ್ಯವಾಗಿ ಮದ್ಯದಿಂದ ದೇಹದ ರೋಗ ನಿರೋಧಕ ಶಕ್ತಿ ಕಡಿಮೆ ಮಾಡುತ್ತದೆ. ಈ ಬಗ್ಗೆ ಸರಿಯಾದ ಅಧ್ಯಯನ ಮಾಡಿ, ಅಧಿಕೃತವಾಗಿ ಮಾಹಿತಿ ನೀಡುತ್ತೇವೆ.

-ಡಾ.ಕೆ.ಸುಧಾಕರ್, ಆರೋಗ್ಯ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News