ಸಂವಿಧಾನ, ಜನತೆಯ ಹಕ್ಕುಗಳ ರಕ್ಷಣೆಗಾಗಿ ಜಾಗೃತಿ ಜಾಥಾ

Update: 2021-01-17 16:59 GMT

ಬೆಂಗಳೂರು, ಜ.17: ಸಿಐಟಿಯು, ದಲಿತ ಹಕ್ಕುಗಳ ವೇದಿಕೆ, ಎಸ್‍ಎಫ್‍ಐ ಹಾಗೂ ರೈತ ಸಂಘಟನೆಗಳ ವತಿಯಿಂದ ಸಂವಿಧಾನ ಸಂರಕ್ಷಿಸಿ, ಜನತೆಯ ಹಕ್ಕುಗಳ ಉಳಿಸಿ ಎಂಬ ಘೋಷ ವಾಕ್ಯದೊಂದಿಗೆ ಇಂದಿನಿಂದ ಜ.24ರವರೆಗೆ ಹಮ್ಮಿಕೊಂಡಿರುವ ಜಾಗೃತಿ ಜಾಥಾಗೆ ರವಿವಾರ ಚಾಲನೆ ನೀಡಲಾಯಿತು. 

ಆನೇಕಲ್ ತಾಲೂಕಿನ ಸಮಂದೂರಿನಲ್ಲಿ ಜಾಗೃತಿ ಜಾಥಾಗೆ ಸಿಐಟಿಯು ಮುಖಂಡ ಪ್ರಕಾಶ್ ಚಾಲನೆ ನೀಡಿ, ಕಾರ್ಮಿಕರು ಯಾವತ್ತೂ ದುಡಿಮೆಗೆ ಮೋಸ ಮಾಡುವುದಿಲ್ಲ. ಕಂಪೆನಿಯ ಏಳ್ಗೆಗಾಗಿ ಬೆವರನ್ನು ಸುರಿಸುತ್ತಾರೆ. ಆದರೆ, ಇವತ್ತು ಕಾರ್ಮಿಕರಿಂದ ದುಡಿಮೆಯನ್ನೇ ಕಿತ್ತುಕೊಳ್ಳಲಾಗಿದೆ ಎಂದರು. 

ಕೇಂದ್ರ ಸರಕಾರ ಜಾರಿ ಮಾಡುತ್ತಿರುವ ಹೊಸ ಕಾರ್ಮಿಕ ಕಾನೂನುಗಳಿಂದಾಗಿ ಕಾರ್ಮಿಕರು ನಿರುದ್ಯೋಗಿಗಳಾಗುತ್ತಿದ್ದಾರೆ. ಸಾಲ ಮಾಡಿ ವಿದ್ಯಾಭ್ಯಾಸ ಮುಗಿಸಿದ ಯುವಕರು, ಕೆಲಸಕ್ಕಾಗಿ ಅಲೆಯುವಂತಾಗಿದೆ. ಆದರೂ ರಾಜ್ಯ ಹಾಗೂ ಕೇಂದ್ರ ಸರಕಾರಕ್ಕೆ ಕಾರ್ಮಿಕರ ಬಗ್ಗೆ ಕಾಳಜಿಯೇ ಇಲ್ಲದ ರೀತಿಯಲ್ಲಿ ವರ್ತಿಸುತ್ತಿದೆ ಎಂದು ಅವರು ಕಿಡಿಕಾರಿದ್ದಾರೆ.

ಕೇಂದ್ರ ಹಾರೂ ರಾಜ್ಯ ಸರಕಾರಗಳು ಕಾರ್ಮಿಕರಿಗೆ, ರೈತರಿಗೆ ಮಾಡುತ್ತಿರುವ ಅನ್ಯಾಯದ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಬೇಕಾಗಿದೆ. ಹಾಗೂ ಪ್ರಬಲವಾದ ಹೋರಾಟದಿಂದ ಮಾತ್ರ ಜನವಿರೋಧಿ ಕಾನೂನುಗಳನ್ನು ಹಿಮ್ಮೆಟ್ಟಿಸಲು ಸಾಧ್ಯ. ಈ ನಿಟ್ಟಿನಲ್ಲಿ ಇಂದಿನಿಂದ ಜ.24ರವರೆಗೆ ನಗರದ ಪ್ರತಿಯೊಂದು ಬೀದಿಗೂ ತಲುಪಿ ಸಂವಿಧಾನ ರಕ್ಷಣೆ ಹಾಗೂ ಕಾರ್ಮಿಕ ಹಕ್ಕುಗಳ ಕುರಿತು ಜಾಗೃತಿ ಮೂಡಿಸಲಾಗುವುದೆಂದರು.

ಕೆಂಗೇರಿ ವಲಯದ ಜಾಥಾವನ್ನು ಕೆ.ಎನ್.ಉಮೇಶ್ ಚಾಲನೆ ನೀಡಿದರು. ಎನ್.ಆರ್. ಕಾಲೋನಿಯಲ್ಲಿ ನಡೆದ ಜಾಥಾವನ್ನು ಸುರೇಂದ್ರ ರಾವ್ ಚಾಲನೆ ನೀಡಿದರು. ಜಾಥಾದಲ್ಲಿ ನೂರಾರು ಕಾರ್ಮಿಕರು ಭಾಗವಹಿಸಿದ್ದಾರೆ. 

ಹಕ್ಕೋತ್ತಾಯಗಳು: ಕೇಂದ್ರ ಸರಕಾರ ಸಂಸತ್‍ನಲ್ಲ ಅಂಗೀಕರಿಸಿರುವ ನೂತನ ಕೃಷಿ ಹಾಗೂ ಕಾರ್ಮಿಕ ವಿರೋಧಿ ತಿದ್ದುಪಡಿ ಕಾಯ್ದೆಗಳನ್ನು ವಾಪಸ್ ಪಡೆಯಬೇಕು. ರೈಲ್ವೆ, ವಿಮೆ, ಬ್ಯಾಂಕ್ ಹಾಗೂ ಸಾರ್ವಜನಿಕ ಉದ್ದಿಮೆಗಳ ಖಾಸಗೀಕರಣವನ್ನು ಕೂಡಲೇ ನಿಲ್ಲಿಸಬೇಕು. ಆದಾಯ ತೆರಿಗೆಯಿಂದ ಹೊರಗಿರುವ ಪ್ರತಿಕುಟುಂಬಕ್ಕೆ ಆರು ತಿಂಗಳು 7,500 ರೂ.ನೇರ ವರ್ಗಾವಣೆ ಮಾಡಬೇಕು. ಉಚಿತ ಆಹಾರ ಧಾನ್ಯಗಳನ್ನು ವಿತರಣೆ ಮಾಡಬೇಕು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News