ಬ್ರಿಸ್ಬೇನ್ ಟೆಸ್ಟ್: ಸಿರಾಜ್ ಘಾತಕ ದಾಳಿ; ಆಸಿಸ್ ಬಿರುಸಿನ ಆಟಕ್ಕೆ ಭಾರತ ಕಡಿವಾಣ

Update: 2021-01-18 03:47 GMT

ಬ್ರಿಸ್ಬೇನ್, ಜ.18: ಆಸ್ಟ್ರೇಲಿಯಾ ಪ್ರವಾಸ ಕೈಗೊಂಡಿರುವ ಭಾರತ ತಂಡದ ವಿರುದ್ಧ ಕೊನೆಯ ಹಾಗೂ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಅತಿಥೇಯರ ಬಿರುಸಿನ ಬ್ಯಾಟಿಂಗ್‌ಗೆ ಕಡಿವಾಣ ಹಾಕುವಲ್ಲಿ ಭಾರತೀಯ ಬೌಲರ್‌ಗಳು ಯಶಸ್ವಿಯಾಗಿದ್ದಾರೆ.

ಇತ್ತೀಚಿನ ವರದಿಗಳು ಬಂದಾಗ ಆಸ್ಟ್ರೆಲಿಯಾ ತನ್ನ ಎರಡನೇ ಇನಿಂಗ್ಸ್‌ನಲ್ಲಿ 5 ವಿಕೆಟ್ ನಷ್ಟಕ್ಕೆ 202 ರನ್ ಗಳಿಸಿದೆ. ಮೊದಲ ಇನಿಂಗ್ಸ್ ಮುನ್ನಡೆ ಸೇರಿ ಒಟ್ಟು 235 ರನ್ ಮುನ್ನಡೆಯಲ್ಲಿದೆ. ಕ್ಯಾಮರೂನ್ ಗ್ರೀನ್ (25) ಮತ್ತು ಟಿಮ್ ಪೇನ್ (1) ಕ್ರೀಸ್‌ನಲ್ಲಿದ್ದಾರೆ. ಭಾರತದ ಯುವ ವೇಗಿ ಮುಹಮ್ಮದ್ ಸಿರಾಜ್ ಒಂದೇ ಓವರ್ ನಲ್ಲಿ 2 ವಿಕೆಟ್ ಕಿತ್ತರಲ್ಲದೆ ಬಿರುಸಿನ ಅರ್ಧ ಶತಕ ಬಾರಿಸಿ ಮುನ್ನುಗ್ಗುತ್ತಿದ್ದ ಸ್ಟೀವನ್ ಸ್ಮಿತ್(55) ಅವರಿಗೆ ಪೆವಿಲಿಯನ್ ಗೆ ದಾರಿ ತೋರಿಸಿದರು.

ಗಾಬ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಪಂದ್ಯದ ನಾಲ್ಕನೇ ದಿನ ಆಸ್ಟ್ರೇಲಿಯಾ ಆರಂಭಿಕ ಆಟಗಾರರು ಭಾರತದ ಬೌಲರ್‌ಗಳ ಮೇಲೆ ಸವಾರಿ ಮಾಡುವ ಮೂಲಕ ಒತ್ತಡ ಹೇರುವ ಪ್ರಯತ್ನದಲ್ಲಿದ್ದಾಗಲೇ ಭಾರತೀಯ ಬೌಲರ್‌ಗಳು ಪರಿಣಾಮಕಾರಿ ಬೌಲಿಂಗ್‌ನಿಂದ ಅತಿಥೇಯರ ರನ್ ಧಾವಂತಕ್ಕೆ ಕಡಿವಾಣ ಹಾಕಿದರು. ಒಂದು ಹಂತದಲ್ಲಿ ವಿಕೆಟ್ ನಷ್ಟವಿಲ್ಲದೇ 89 ರನ್ ಗಳಿಸಿದ್ದ ಆಸ್ಟ್ರೇಲಿಯಾದ ನಾಲ್ಕು ವಿಕೆಟ್‌ಗಳನ್ನು ಕಿತ್ತ ಭಾರತೀಯ ಬೌಲರ್‌ಗಳು ಪ್ರತಿ ಹೋರಾಟ ಸಂಘಟಿಸಿದರು.

ಆರಂಭಿಕ ಆಟಗಾರ ಮಾರ್ಕ್ಯೂಸ್ ಹ್ಯಾರಿಸ್ (38) ಅವರು ಶಾರ್ದೂಲ್ ಠಾಕೂರ್ ಬೌಲಿಂಗ್‌ನಲ್ಲಿ ಕೀಪರ್ ಪಂತ್‌ಗೆ ಕ್ಯಾಚ್ ನೀಡಿ ಮೊದಲನೆಯವಾಗಿ ಔಟ್ ಆದ ಬೆನ್ನಲ್ಲೇ ಉತ್ತಮವಾಗಿ ಆಡುತ್ತಿದ್ದ ಡೇವಿಡ್ ವಾರ್ನರ್ (48) ಅವರನ್ನು ವಾಷಿಂಗ್ಟನ್ ಸುಂದರ್ ಎಲ್‌ಬಿಡಬ್ಲ್ಯು ಬಲೆಗೆ ಬೀಳಿಸಿದರು. ಈ ಆಘಾತದಿಂದ ಚೇತರಿಸಿಕೊಳ್ಳುವ ಪ್ರಯತ್ನದಲ್ಲಿದ್ದಾಗಲೇ ಲಂಬುಶೆನ್ (26) ಮತ್ತು ಮ್ಯಾಥ್ಯೂ ವೇಡ್ (0) ಅವರ ವಿಕೆಟ್ ಪಡೆಯುವ ಮೂಲಕ ಮುಹಮ್ಮದ್ ಸಿರಾಜ್ ಭಾರತಕ್ಕೆ ಮೇಲುಗೈ ದೊರಕಿಸಿಕೊಟ್ಟರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News