ಹಲವು ಗಂಭೀರ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿದ್ದ ಆರೋಪ: ರೌಡಿಗೆ ಗುಂಡೇಟು

Update: 2021-01-18 12:26 GMT

ಬೆಂಗಳೂರು, ಜ.18: ಕೊಲೆ ಸೇರಿದಂತೆ 18ಕ್ಕೂ ಹೆಚ್ಚಿನ ಗಂಭೀರ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿದ್ದ ಆರೋಪ ಹೊತ್ತಿರುವ ರೌಡಿಯೋರ್ವನ ಕಾಲಿಗೆ ಪೊಲೀಸರು ಪಿಸ್ತೂಲಿನಿಂದ ಗುಂಡು ಹಾರಿಸಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ವಿಜಯ್‍ ಕುಮಾರ್(26) ಬಂಧಿತ ರೌಡಿಯಾಗಿದ್ದು, ಎಡಗಾಲಿಗೆ ಪೊಲೀಸರ ಗಂಡೇಟು ತಗುಲಿ ಗಂಭೀರವಾಗಿ ಗಾಯಗೊಂಡು ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾನೆ ಎಂದು ಡಿಸಿಪಿ ಹರೀಶ್ ಪಾಂಡೆ ತಿಳಿಸಿದ್ದಾರೆ.

ಸೋಮವಾರ ಮುಂಜಾನೆ ರೌಡಿ ವಿಜಯ್‍ಕುಮಾರ್, ಬಂಧಿಸಲು ಬೆನ್ನಟ್ಟಿ ಹೋದ ಗಿರಿನಗರ ಠಾಣೆ ಪೇದೆ ಮಧುಸೂದನ್ ಮೇಲೆ ಹಲ್ಲೆ ನಡೆಸಿದ್ದು, ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಪರಾಧ ಕೃತ್ಯವೊಂದರಲ್ಲಿ ಬಂಧಿತನಾಗಿ ಜೈಲು ಸೇರಿ ಒಂದು ವಾರದ ಹಿಂದಷ್ಟೇ ಜಾಮೀನಿನ ಮೇಲೆ ಹೊರ ಬಂದಿದ್ದ ವಿಜಯ್‍ಕುಮಾರ್ ಗಿರಿನಗರದಲ್ಲಿ ವ್ಯಕ್ತಿಯೊಬ್ಬರ ಮೇಲೆ ಕ್ಷುಲಕ ಕಾರಣಕ್ಕೆ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ ಸ್ಥಳೀಯರಲ್ಲಿ ಆತಂಕ ಸೃಷ್ಟಿಸಿದ್ದ ಎನ್ನಲಾಗಿದೆ.

ಈ ಸಂಬಂಧ ಹಲ್ಲೆಗೊಳಗಾಗಿರುವ ವ್ಯಕ್ತಿಯಿಂದ ದೂರು ದಾಖಲಿಸಿ ತನಿಖೆ ಕೈಗೊಂಡ ಗಿರಿನಗರ ಪೊಲೀಸರು, ಆರೋಪಿಯು ಸೋಮವಾರ ಮುಂಜಾನೆ ಗಿರಿನಗರದ ವೀರಭದ್ರೇಶ್ವರ ನಗರಕ್ಕೆ ಬರುವ ಖಚಿತ ಮಾಹಿತಿ ಲಭ್ಯವಾಗಿದೆ. ತಕ್ಷಣವೇ ಕಾರ್ಯಾಚರಣೆ ಕೈಗೊಂಡ ಇನ್ಸ್‍ಪೆಕ್ಟರ್ ವಿನಯ್ ನೇತೃತ್ವದ ತಂಡ ಬಂಧಿಸಲು ತೆರಳಿದ್ದು ಪೊಲೀಸರ ವಾಹನ ನೋಡಿ ಪರಾರಿಯಾಗಿದ್ದಾನೆ. ಕೂಡಲೇ ಆತನನ್ನು ಬಂಧಿಸಲು ಬೆನ್ನಟ್ಟಿ ಹೋದ ಪೇದೆ ಮಧುಸೂದನ್ ಅವರಿಗೆ ಆರೋಪಿಯು ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿದ್ದಾನೆ ಎಂದು ತಿಳಿದುಬಂದಿದೆ.

ತದನಂತರ, ಇನ್ಸ್‍ಪೆಕ್ಟರ್ ವಿನಯ್ ಅವರು ಗಾಳಿಯಲ್ಲಿ ಒಂದು ಸುತ್ತುಗುಂಡು ಹಾರಿಸಿ ಶರಣಾಗುವಂತೆ ಸೂಚನೆ ನೀಡಿದರೂ ಮತ್ತೆ ಹಲ್ಲೆಗೆ ಮುಂದಾಗಿ ಪರಾರಿಯಾಗಲು ಯತ್ನಿಸಿದಾಗ ಮತ್ತೊಂದು ಸುತ್ತುಗುಂಡು ಹಾರಿಸಿದ್ದು ಅದು ಎಡಗಾಲಿಗೆ ಬಿದ್ದು ಸ್ಥಳದಲ್ಲೇ ಕುಸಿದುಬಿದ್ದಿದ್ದಾನೆ. ಆತನನ್ನು ಬಂಧಿಸಿ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ ಎಂದು ಡಿಸಿಪಿ ಹರೀಶ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News