ಟ್ರಾಫಿಕ್ ಕಡಿಮೆ ಮಾಡಲು 21,091 ಕೋಟಿ ರೂ. ವೆಚ್ಚದಲ್ಲಿ ಪೆರಿಫೆರಲ್ ರಿಂಗ್ ರಸ್ತೆ: ಸಿಎಂ ಯಡಿಯೂರಪ್ಪ

Update: 2021-01-18 14:20 GMT

ಬೆಂಗಳೂರು, ಜ.18: ರಾಜಧಾನಿ ಬೆಂಗಳೂರಿನಲ್ಲಿ ಉಂಟಾಗುತ್ತಿರುವ ಸಂಚಾರ ದಟ್ಟಣೆಯನ್ನು ಕಡಿಮೆ ಮಾಡುವ ಉದ್ದೇಶದಿಂದ ಬೆಂಗಳೂರು ಹೊರವಲಯದಲ್ಲಿ ಅಂದಾಜು 21,091 ಕೋಟಿ ರೂ.ವೆಚ್ಚದಲ್ಲಿ ಖಾಸಗಿ ಸಹಭಾಗಿತ್ವದೊಂದಿಗೆ ಪೆರಿಫೆರಲ್ ರಿಂಗ್ ರಸ್ತೆಯನ್ನು ನಿರ್ಮಾಣ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದರು.

ಸೋಮವಾರ ನಗರದಲ್ಲಿರುವ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ(ಬಿಡಿಎ)ದ ಕಚೇರಿಯಲ್ಲಿ ಬಿಡಿಎ ಕಾರ್ಯವೈಖರಿ ಕುರಿತು ಪ್ರಗತಿ ಪರಿಶೀಲನಾ ಸಭೆ ನಡೆಸಿದ ಬಳಿಕ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಪೆರಿಫೆರಲ್ ರಿಂಗ್ ರಸ್ತೆ ನಿರ್ಮಿಸಲು ಅನುಮೋದನೆ ದೊರೆತಿದ್ದು, ಕಾಲಮಿತಿಯಲ್ಲಿ ಈ ಯೋಜನೆ ಅನುಷ್ಠಾನಕ್ಕೆ ಕ್ರಮ ವಹಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ ಎಂದರು.

ಬೆಂಗಳೂರು ಮಹಾನಗರ ವಿಶ್ವಮಾನ್ಯ ನಗರಗಳಲ್ಲಿ ಒಂದಾಗಿದೆ. ವಿಶ್ವದ 4 ತಾಂತ್ರಿಕ ನೆಲೆಗಳಲ್ಲಿ ಬೆಂಗಳೂರು ನಗರ ಮೊದಲ ಸ್ಥಾನ ಪಡೆದಿದೆ. ವಿಶ್ವ ಮಾನ್ಯ ಬೆಂಗಳೂರು ಮಹಾನಗರಕ್ಕೆ ಅಗತ್ಯ ಜಾಗತಿಕ ಮಟ್ಟದ ಸೌಲಭ್ಯಗಳನ್ನು ಒದಗಿಸಲು ನಮ್ಮ ಸರಕಾರ ಬದ್ಧವಾಗಿದೆ ಎಂದು ಯಡಿಯೂರಪ್ಪ ಹೇಳಿದರು.

ಪ್ರಧಾನಿ ನರೇಂದ್ರ ಮೋದಿ ಅವರು ಬೆಂಗಳೂರು ನಗರದ ಸಮಗ್ರ ಅಭಿವೃದ್ಧಿ ಕುರಿತಂತೆ ಆಗಾಗ ಸಲಹೆ ಮಾರ್ಗದರ್ಶನ ನೀಡುತ್ತಲೆ ಬಂದಿದ್ದಾರೆ. ಅದರಂತೆ ಕಳೆದ ತಿಂಗಳು ‘ಬೆಂಗಳೂರು ಮಿಷನ್ 2022’ ಯೋಜನೆಯನ್ನು ಘೋಷಿಸಲಾಗಿದೆ ಎಂದು ಮುಖ್ಯಮಂತ್ರಿ ಹೇಳಿದರು.

ಇಂದು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಪ್ರಗತಿ ಪರಿಶೀಲನೆ ಕೈಗೊಂಡಿದ್ದೇನೆ. ಬಡಾವಣೆ ನಿಮಾಣಕ್ಕೆ ರೈತರಿಂದ ಪಡೆದ ಜಮೀನಿಗೆ ಬದಲಾಗಿ ಶೇ.40ರಷ್ಟು ಅಭಿವೃದ್ಧಿ ಹೊಂದಿದ ಜಮೀನು ನೀಡುವಂತೆ ಸೂಚಿಸಲಾಗಿದೆ. ರೈತರು ಬಯಸುವ ಕಡೆಯಲ್ಲೆ ಈ ನಿವೇಶನಗಳನ್ನು ನೀಡಲಾಗುವುದು ಎಂದು ಯಡಿಯೂರಪ್ಪ ಪ್ರಕಟಿಸಿದರು.

ಬಿಡಿಎ ನಲ್ಲಿ ಸುಮಾರು 24 ಮಂದಿ ಇಂಜಿನಿಯರ್ ಗಳು ಹೆಚ್ಚುವರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅವರ ಕಾರ್ಯಭಾರವನ್ನು ಪರಿಶೀಲಿಸಿ, ಅಗತ್ಯವಿಲ್ಲದಿದ್ದರೆ ಅವರ ಸೇವೆಯನ್ನು ಮಾತೃ ಇಲಾಖೆಗೆ ಹಿಂದಿರುಗಿಸಲಾಗುವುದು. ಅದೇ ರೀತಿ ವಕೀಲರು ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ. 196 ಮಂದಿ ವಕೀಲರು ಇದ್ದಾರೆ. ಹೆಚ್ಚಿನ ಕಾರ್ಯಭಾರ ಇಲ್ಲದ ವಕೀಲರನ್ನು ಪ್ಯಾನೆಲ್‍ನಿಂದ ಕೈ ಬಿಡಲು ಸೂಚನೆ ನೀಡಲಾಗಿದೆ ಎಂದು ಅವರು ಹೇಳಿದರು.

ಈಗಾಗಲೇ ನಿರ್ಮಿಸಲಾಗಿರುವ ನಿವೇಶನಗಳು, ವಸತಿ ಯೋಜನೆಗಳ ವಿತರಣೆಗೆ ಕ್ರಮ ಕೈಗೊಳ್ಳಬೇಕು. ಬಿಡಿಎದಲ್ಲಿ ಏಜೆಂಟರ ಹಾವಳಿ ನಿಯಂತ್ರಿಸುವಂತೆ ಬಿಡಿಎ ಅಧ್ಯಕ್ಷರು, ಆಯುಕ್ತರು ಹಾಗೂ ಸಂಬಂಧಪಟ್ಟ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ ಎಂದು ಯಡಿಯೂರಪ್ಪ ತಿಳಿಸಿದರು.

ಪ್ರಗತಿಯಲ್ಲಿರುವ ಎಲ್ಲ ಅಭಿವೃದ್ಧಿ ಕಾಮಗಾರಿಗಳನ್ನು ಚುರುಕುಗೊಳಿಸಿ, ನಿಗದಿತ ಕಾಲಮಿತಿಯಲ್ಲಿ ಪೂರ್ಣಗೊಳಿಸಲು ಸೂಚನೆ ನೀಡಲಾಗಿದೆ. ಎರಡು ತಿಂಗಳ ನಂತರ ಮತ್ತೊಮ್ಮೆ ಅಭಿವೃದ್ಧಿ ಕಾಮಗಾರಿಗಳ ಪ್ರಗತಿ ಪರಿಶೀಲನೆ ನಡೆಸಲಾಗುವುದು ಎಂದು ಮುಖ್ಯಮಂತ್ರಿ ಹೇಳಿದರು.

ಪ್ರಗತಿ ಪರಿಶೀಲನಾ ಸಭೆಯಲ್ಲಿ ಬಿ.ಡಿ.ಎ ಅಧ್ಯಕ್ಷ ಎಸ್.ಆರ್.ವಿಶ್ವನಾಥ್, ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್, ಮುಖ್ಯಮಂತ್ರಿಗಳ ಅಪರ ಮುಖ್ಯ ಕಾರ್ಯದರ್ಶಿ ಡಾ.ಇ.ವಿ. ರಮಣರೆಡ್ಡಿ, ನಗರಾಭಿವೃದ್ಧಿ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್, ಬಿ.ಡಿ.ಎ ಆಯುಕ್ತ ಮಹದೇವ್ ಉಪಸ್ಥಿತರಿದ್ದರು.

ಬಿಡಿಎ ಪ್ರಗತಿ ಪರಿಶೀಲನಾ ಸಭೆಯಲ್ಲಿ ಪಾಲ್ಗೊಂಡಿದ್ದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಇದೇ ಸಂದರ್ಭದಲ್ಲಿ ಯುದ್ಧದಲ್ಲಿ ಮಡಿದ ಯೋಧರ ಕುಟುಂಬದವರಿಗೆ ಹಕ್ಕುಪತ್ರ ವಿತರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News